Site icon Vistara News

Temple Bill: ದೇಗುಲ ನಿಧಿ ಬಳಕೆ; ಹಿಂದು ಧಾರ್ಮಿಕ ಸಂಸ್ಥೆಗಳ ತಿದ್ದುಪಡಿ ಮಸೂದೆ ವಾಪಸ್‌ ಕಳುಹಿಸಿದ ರಾಜ್ಯಪಾಲರು!

Governor sends back Hindu Religious Institutions Amendment Bill

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ-2024 (Temple Bill) ಅನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಶ್ರೀಮಂತ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯನ್ನು ಆದಾಯ ಇಲ್ಲದಿರುವ ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ತಿದ್ದುಪಡಿ ಮಸೂದೆಗೆ ಸಹಿ ಹಾಕದೇ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ.

ಬಜೆಟ್ ಅಧಿವೇಶನದ ವೇಳೆ ವಿಧಾನ ಪರಿಷತ್‌ನಲ್ಲಿ ಮುಜರಾಯಿ ತಿದ್ದುಪಡಿ ಮಸೂದೆ ತಿರಸ್ಕಾರವಾಗಿತ್ತು. ಹೀಗಾಗಿ ವಿಧಾನಸಭೆಯಲ್ಲಿ ಎರಡೆರಡು ಬಾರಿ ಮಂಡಿಸಿ ಅನುಮೋದನೆ ಪಡೆದು, ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಈಗ ರಾಜ್ಯಪಾಲರು ಕೆಲವೊಂದು ಸ್ಪಷ್ಟೀಕರಣ ಕೊಡುವಂತೆ ಸರ್ಕಾರಕ್ಕೆ ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ.

‘ಹೈಕೋರ್ಟ್‌ನ ಧಾರವಾಡ ಪೀಠವು ರಿಟ್‌ ಅರ್ಜಿ ವಿಚಾರಿಸಿ ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ –1997 ಮತ್ತು ಅದಕ್ಕೆ ತಂದಿರುವ ತಿದ್ದುಪಡಿಗಳನ್ನು ಈಗಾಗಲೇ ವಜಾ ಮಾಡಿದೆ. ಹೈಕೋರ್ಟ್‌ ನೀಡಿದ್ದ ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಅಂತಿಮ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ತಿದ್ದುಪಡಿ ಮಾಡಬಹುದೇ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ’ ಎಂದು ಉಲ್ಲೇಖಿಸಿರುವ ರಾಜ್ಯಪಾಲರು ಕಡತವನ್ನು ವಾಪಸ್ ಕಳುಹಿಸಿದ್ದಾರೆ.

ಇದನ್ನೂ ಓದಿ | Lok Sabha Election : ಶುಕ್ರವಾರ ಮತದಾನ ಬೇಡ, ಮುಸ್ಲಿಮರಿಗೆ ತೊಂದರೆಯಾಗುತ್ತದೆ; ಕಾಂಗ್ರೆಸ್​ನಿಂದ ಪತ್ರ

ಹಿಂದು ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿ ತರಲಾದ ತಿದ್ದುಪಡಿಯನ್ನು ಇತರೆ ಧಾರ್ಮಿಕ ಸಂಸ್ಥೆಗಳನ್ನೂ ಸೇರಿಸಿಕೊಂಡು ಈ ಮಸೂದೆ ಮಾದರಿಯಲ್ಲಿ ಯಾವುದಾದರೂ ಕಾಯ್ದೆ ಮಾಡುವ ಪರಿಕಲ್ಪನೆ ರಾಜ್ಯ ಸರ್ಕಾರಕ್ಕೆ ಇದೆಯೇ’ ಎಂದು ರಾಜ್ಯ ಪಾಲ ಗೆಹಲೋಟ್ ಪ್ರಶ್ನಿಸಿದ್ದಾರೆ. ಇನ್ನು ‘ರಾಜ್ಯಪಾಲರು ಕೇಳಿದ ವಿಷಯಗಳಿಗೆ ಸ್ಪಷ್ಟನೆ ನೀಡಿ ಮಸೂದೆಯನ್ನು ಅವರ ಒಪ್ಪಿಗೆಗೆ ಮತ್ತೆ ಕಳುಹಿಸಲಾಗುವುದು’ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

ತಿದ್ದುಪಡಿ ಮಸೂದೆಯಲ್ಲಿ ಏನಿದೆ?

ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಯ ವ್ಯಾಪ್ತಿಯಲ್ಲಿರುವ 1 ಕೋಟಿಗೂ ಹೆಚ್ಚು ವರಮಾನ ಹೊಂದಿರುವ ದೇವಸ್ಥಾನಗಳ ಹುಂಡಿಯಿಂದ ವರ್ಷಕ್ಕೆ ಶೇ. 10 ಮತ್ತು 10 ಲಕ್ಷದಿಂದ 1 ಕೋಟಿ ರೂ. ವರೆಗಿನ ವರಮಾನ ಹೊಂದಿರುವ ದೇವಸ್ಥಾನಗಳಿಂದ ಶೇ 5ರಷ್ಟನ್ನು ‘ಸಾಮಾನ್ಯ ಸಂಗ್ರಹಣಾ ನಿಧಿ’ಗೆ ಸಂದಾಯ ಮಾಡುವುದು ಮತ್ತು ಹೀಗೆ ಸಂಗ್ರಹವಾಗುವ ನಿಧಿಯನ್ನು ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಾಲ್ವರು ಸಾಮಾನ್ಯ ಸದಸ್ಯರಲ್ಲಿ ವಿಶ್ವಕರ್ಮ ಸಮುದಾಯದ ಒಬ್ಬರಿಗೆ ಅವಕಾಶ. ಮುಜರಾಯಿ ದೇವಸ್ಥಾನಗಳ ಜಮೀನುಗಳ ಒತ್ತುವರಿ ತೆರವಿಗೆ ಕಾರ್ಯಪಡೆ ರಚಿಸುವ ಪ್ರಸ್ತಾವ ಇತ್ತು.

ಇದನ್ನೂ ಓದಿ | Lok Sabha Election 2024: ವಿವಿಧ ಇಲಾಖೆಗಳ ಉದ್ಯೋಗಿಗಳಿಗೆ ಅಂಚೆ ಮತದಾನ ಸೌಲಭ್ಯ; ಯಾರಿಗೆಲ್ಲ ಇದೆ ಅವಕಾಶ?

ರಾಜ್ಯಪಾಲರಿಗೆ ದೇವಸ್ಥಾನಗಳ ಮಹಾಸಂಘ ಅಭಿನಂದನೆ

ದೇವಸ್ಥಾನಗಳಿಂದ ಶೇ.10 ತೆರಿಗೆ ಹಣವನ್ನು ಸಂಗ್ರಹಿಸುವ ಧಾರ್ಮಿಕ ದತ್ತಿ ಇಲಾಖೆಯ ತಿದ್ದುಪಡಿ ಮಸೂದೆಯನ್ನು ತಿರಸ್ಕಾರ ಮಾಡಿದ ರಾಜ್ಯಪಾಲರಿಗೆ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ‌ ಮಹಾಸಂಘ ಅಭಿನಂದನೆ ಸಲ್ಲಿಸಿದೆ. ಮಹಾಸಂಘವು ಈ ಮಸೂದೆಯನ್ನು ಖಂಡನೆ ಮಾಡಿ 12 ಜಲ್ಲೆಗಳಲ್ಲಿ ದೇವಸ್ಥಾನಗಳ ಅಧಿವೇಶನ ಆಯೋಜಿಸಿ, 5000 ಕ್ಕೂ ಅಧಿಕ ದೇವಸ್ಥಾನಗಳ ವಿಶ್ವಸ್ಥರ, ಅರ್ಚಕರ ಸಹಿ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಈ ಪ್ರಸ್ತಾಪಿತ ಈ ಮಸೂದೆಯನ್ನು ರದ್ದು ಮಾಡಿದ ರಾಜ್ಯಪಾಲರಿಗೆ ಸಂಘದ ಪರವಾಗಿ ರಾಜ್ಯ ಸಮನ್ವಯಕ ಮೋಹನ್‌ಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version