Site icon Vistara News

UAPA : ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ ಸಂಘಟನೆಗೆ 5 ವರ್ಷ ನಿಷೇಧ ಹೇರಿದ ಮೋದಿ ಸರ್ಕಾರ

Amit Shah

ನವ ದೆಹಲಿ: ದೇಶದ ಸೌರ್ವಭೌಮತೆಗೆ ಧಕ್ಕೆ ತರುವಂಥ ಸಂಘಟನೆಗಳ ನಿಗ್ರಹಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಮಂಗಳವಾರ ನಯೀಮ್ ಅಹ್ಮದ್ ಖಾನ್ ನೇತೃತ್ವದ ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ ಅನ್ನು ಕೇಂದ್ರ ಗೃಹ ಸಚಿವಾಲಯ (Home Ministry) ಐದು ವರ್ಷಗಳ ಕಾಲ ನಿಷೇಧಿಸಿದೆ. ಯುಎಪಿಎ (UAPA) ಎಂದು ಕರೆಯುವ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಈ ಸಂಘಟನೆಯನ್ನು ಬ್ಯಾನ್ ಮಾಡಿದೆ.

ದೇಶದ ಸಮಗ್ರತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಪೂರ್ವಾಗ್ರಹ ಪೀಡಿತವಾದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಫ್ರಂಟ್ ತೊಡಗಿದೆ ಎಂದು ಸಚಿವಾಲಯ ಮಂಗಳವಾರ ಸಂಜೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

“ದೇಶದ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಯೋತ್ಪಾದಕ ಶಕ್ತಿಗಳನ್ನು ಬೇರುಸಹಿತ ಕಿತ್ತೊಗೆಯಲು ನಾವು ಬದ್ಧರಾಗಿದ್ದೇವೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಮಾಧ್ಯಮ ಫ್ಲ್ಯಾಟ್​ಫಾರ್ಮ್​ ಎಕ್ಸ್​ನಲ್ಲಿ ನಿಷೇಧದ ಬಗ್ಗೆ ಮಾಹಿತಿ ನೀಡಿದರು

ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ (ಜೆಕೆಎನ್ಎಫ್) ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ತಕ್ಷಣದಿಂದ ಜಾರಿಗೆ ಬರುವಂತೆ ಫ್ರಂಟ್ ಅನ್ನು ‘ಕಾನೂನುಬಾಹಿರ ಸಂಘಟನೆ’ ಎಂದು ಘೋಷಿಸುವುದು ಅವಶ್ಯಕ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚುನಾವಣೆಗೆ ಬಹಿಷ್ಕಾರ ಹಾಕಿದ್ದ ಸಂಘಟನೆ

ಜೆಕೆಎನ್ಎಫ್ ಕಾಶ್ಮೀರದ ಜನರು ಚುನಾವಣೆಯಲ್ಲಿ ಭಾಗಿಯಾಗದಂತೆ ಬೆದರಿಕೆ ಒಡ್ಡುತ್ತಿದೆ. ಆ ಮೂಲಕ ಭಾರತೀಯ ಪ್ರಜಾಪ್ರಭುತ್ವದ ಸಾಂವಿಧಾನಿಕವಾಗಿ ಮೂಲಭೂತ ಹಕ್ಕುಗಳಿಗೆ ಅಡ್ಡಿಪಡಿಸಿದೆ ಎಂದು ಸರ್ಕಾರ ಹೇಳಿದೆ. ಫ್ರಂಟ್ ಮತ್ತು ಅದರ ಸದಸ್ಯರು ತಮ್ಮ ಚಟುವಟಿಕೆಗಳಿಂದ ದೇಶದ ಸಾಂವಿಧಾನಿಕ ಅಧಿಕಾರ ಮತ್ತು ಸಾಂವಿಧಾನಿಕ ವ್ಯವಸ್ಥೆಗೆ ಸಂಪೂರ್ಣ ಅಗೌರವ ತೋರಿಸುತ್ತಾರೆ ಎಂದು ಸರ್ಕಾರ ಹೇಳಿದೆ.

ರಾಷ್ಟ್ರ ವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ, ಜನರಲ್ಲಿ ಅಸಮಾಧಾನದ ಬೀಜಗಳನ್ನು ಬಿತ್ತುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಜನರನ್ನು ಪ್ರೇರೇಪಿಸುವ ಜತೆಗೆ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಒಕ್ಕೂಟದಿಂದ ಬೇರ್ಪಡಿಸಲು ಶಸ್ತ್ರಾಸ್ತ್ರಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಸ್ಥಾಪಿತ ಸರ್ಕಾರದ ವಿರುದ್ಧ ದ್ವೇಷವನ್ನು ಉತ್ತೇಜಿಸುವ ಕೆಲಸ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಸಂದರ್ಭಗಳಲ್ಲಿ ಚುನಾವಣೆಗಳನ್ನು ಬಹಿಷ್ಕರಿಸಲು ಕರೆ ನೀಡುವ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಪ್ರಯತ್ನಿಸಿದೆ ಎಂದು ಸೂಚನೆಯಲ್ಲಿ ಹೇಳಲಾಗಿದೆ.

ಜೈಲಲ್ಲಿರುವ ನಯೀಮ್​

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ನಯೀಮ್ ಖಾನ್ 2017ರ ಆಗಸ್ಟ್ 14ರಿಂದ ಜೈಲಿನಲ್ಲಿದ್ದಾನೆ. ಆತ ಕಾಶ್ಮೀರ ಕಣಿವೆಯಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆರೋಪಿಸಿದೆ.

ಫೆಬ್ರವರಿ 28 ರಂದು ಕೇಂದ್ರವು ಮುಸ್ಲಿಂ ಕಾನ್ಫರೆನ್ಸ್, ಜಮ್ಮು ಮತ್ತು ಕಾಶ್ಮೀರ (ಸುಮ್ಜಿ ಬಣ) ಮತ್ತು ಮುಸ್ಲಿಂ ಕಾನ್ಫರೆನ್ಸ್ ಜಮ್ಮು ಮತ್ತು ಕಾಶ್ಮೀರ (ಭಟ್ ಬಣ) ಸಂಘಟನೆಯನ್ನು ನಿಷೇಧಿಸಿತ್ತು.

Exit mobile version