Site icon Vistara News

7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ; ತುಟ್ಟಿ ಭತ್ಯೆ ಶೇಕಡಾ 4ರಷ್ಟು ಹೆಚ್ಚಳ ಸಾಧ್ಯತೆ

Pay commission

ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿಯೊಂದಿದ್ದು, ಸರ್ಕಾರವು ಮಾರ್ಚ್​ನಲ್ಲಿ ಏಳನೇ ವಏತನ ಆಯೋಗದ ಅಡಿ (7th Pay Commission) ಶೇಕಡಾ 4ರಷ್ಟು ತುಟ್ಟಿ ಭತ್ಯೆ (ಡಿಎ) ಹೆಚ್ಚಳವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಇಟಿ ವರದಿ ತಿಳಿಸಿದೆ. 4ರಷ್ಟು ಹೆಚ್ಚಳದ ನಂತರ, ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವು ಶೇಕಡಾ 50ಕ್ಕೆ ಏರಿಕೆಯಾಗಲಿದೆ.

ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ-ಐಡಬ್ಲ್ಯೂ) 12 ತಿಂಗಳ ಸರಾಸರಿ 392.83 ರಷ್ಟಿದೆ. ಇಟಿ ವರದಿಯ ಪ್ರಕಾರ, ಡಿಎ ಮೂಲ ವೇತನದ ಶೇಕಡಾ 50.26 ಕ್ಕೆ ಏರಿಕೆಯಾಗಲಿದೆ. ಅಖಿಲ ಭಾರತ ಸಿಪಿಐ- ಐಡಬ್ಲ್ಯೂ ದತ್ತಾಂಶದ ಆಧಾರದ ಮೇಲೆ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ಹೆಚ್ಚಳದ ಪ್ರಮಾಣವನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಡಿಎ ಅನ್ನು ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಡಿಆರ್ ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ. ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಜನವರಿ ಮತ್ತು ಜುಲೈನಲ್ಲಿ ಹೆಚ್ಚಳ ಮಾಡಲಾಗುತ್ತಿದೆ.

ಅಕ್ಟೋಬರ್ 2023ರಲ್ಲಿ ಕೊನೆಯ ಬಾರಿಗೆ ಡಿಎಯನ್ನು ಶೇಕಡಾ 4ರಿಂದ 46ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಹಣದುಬ್ಬರ ದರವನ್ನು ಗಮನಿಸಿದರೆ, ಮುಂದಿನ ಡಿಎ ಹೆಚ್ಚಳವು ಶೇಕಡಾ 4ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರು ಇದ್ದಾರೆ. ಮುಂಬರುವ ಡಿಎ ಹೆಚ್ಚಳದ ನಂತರ ಈ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

ಫೆ.27, 28ರಂದು ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ವತಿಯಿಂದ ಫೆಬ್ರವರಿ 27ರಂದು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಹಾಗೂ ಪ್ರಜಾಸ್ನೇಹಿ ಕಾರ್ಯಾಗಾರ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಫೆ.27, 28ರಂದು ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ; ನೌಕರರ ಸಮ್ಮೇಳನದ ಹಿನ್ನೆಲೆ ಮಂಜೂರು

ನಗರದ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ (ಗೇಟ್‌ ನಂ.1) ಫೆ. 27ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆಯಲಿದೆ. ಇದರಲ್ಲಿ ಲಕ್ಷಾಂತರ ನೌಕರರು ಭಾಗಿಯಾಗುವ ನಿರೀಕ್ಷೆ ಇದೆ. ಹೀಗಾಗಿ ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗಲು ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ.

ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತಗೊಳಿಸಿ ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿ, ನೌಕರರಿಗೆ ಫೆ. 27ರಂದು ಒಂದು ದಿನ ಹಾಗೂ ಇತರೆ ಜಿಲ್ಲೆಗಳ ಅಧಿಕಾರಿ, ನೌಕರರಿಗೆ ಪ್ರಯಾಣ ದಿನಗಳೂ ಸೇರಿದಂತೆ ಫೆ.27 ಮತ್ತು 28ರಂದು 2 ದಿನಗಳ ವಿಶೇಷ ಸಾಂದರ್ಭಿಕ ರಜೆಯನ್ನು ಷರತ್ತುಗಳನ್ವಯ ನೀಡಲಾಗಿದೆ.

ಈ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಸರ್ಕಾರಿ ನೌಕರರು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ನಂತರ ಸಮ್ಮೇಳನದಲ್ಲಿ ಭಾಗವಹಿಸಿದ ಬಗ್ಗೆ ಅಧಿಕೃತ ಹಾಜರಾತಿ ಪತ್ರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಅಥವಾ ಅವರಿಂದ ನಾಮನಿರ್ದೇಶನ ಹೊಂದಿದ ಅಧಿಕಾರಿಗಳಿಂದ ಪಡೆದು ಒದಗಿಸಬೇಕು. ಈ ಆಧಾರದ ಮೇಲೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಮಂಜೂರು ಮಾಡತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

Exit mobile version