ನವ ದೆಹಲಿ: ಕಳೆದ ಜುಲೈನಲ್ಲಿ ಜಿಎಸ್‌ಟಿ ಕಂದಾಯ ಸಂಗ್ರಹ ೧,೪೮,೯೯೫ ಕೋಟಿ ರೂ.ಗೆ ಏರಿಕೆಯಾಗಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಎರಡನೇ ಅತಿ ಹೆಚ್ಚು ಮೌಲ್ಯದ ಜಿಎಸ್‌ಟಿ ಸಂಗ್ರಹ ಇದಾಗಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ೨೮% ಏರಿಕೆಯಾಗಿದೆ. ಜೂನ್‌ನಲ್ಲಿ ೧.೪೪ ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ೨೦೨೨ರ ಜುಲೈನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಜುಲೈನಲ್ಲಿ ೯,೭೯೫ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ೬,೭೩೭ ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ ೪೫% ಹೆಚ್ಚಳವಾಗಿದೆ.
೨೦೨೨-೨೩ರಲ್ಲಿ ಜಿಎಸ್‌ಟಿ ಸಂಗ್ರಹದ ದಾಖಲೆ
ಏಪ್ರಿಲ್ | 1.68 ಲಕ್ಷ ಕೋಟಿ ರೂ. |
ಮೇ | 1.40 ಲಕ್ಷ ಕೋಟಿ ರೂ. |
ಜೂನ್ | 1.44 ಲಕ್ಷ ಕೋಟಿ ರೂ. |
ಜುಲೈ | 1.48 ಲಕ್ಷ ಕೋಟಿ ರೂ. |
ಸರಕುಗಳ ಆಮದಿನಿಂದ ಜಿಎಸ್‌ಟಿ ಸಂಗ್ರಹದಲ್ಲಿ ೪೮% ಏರಿಕೆಯಾಗಿದೆ. ದೇಶೀಯವಾಗಿ ಸರಕುಗಳ ಸಾಗಣೆಯಿಂದಲೂ ವೃದ್ಧಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಜುಲೈನಲ್ಲಿ ಸಿಜಿಎಸ್‌ಟಿ ಸಂಗ್ರಹ ೨೫,೭೫೧ ಕೋಟಿ ರೂ, ಎಸ್‌ಜಿಎಸ್‌ಟಿ ೩೨,೮೦೭ ಕೋಟಿ ರೂ, ಮತ್ತು ಐಜಿಎಸ್‌ಟಿ ೭೯,೫೧೮ ಕೋಟಿ ರೂ. ಸಂಗ್ರಹವಾಗಿದೆ. ಐಜಿಎಸ್‌ಟಿಯಡಿಯಲ್ಲಿ ಸರಕುಗಳ ಆಮದು ಮೂಲಕ ೪೧,೪೨೦ ಕೋಟಿ ರೂ. ಸಂಗ್ರಹವಾಗಿದೆ. ೧೦,೯೨೦ ಕೋಟಿ ರೂ. ಸೆಸ್ ಸಂಗ್ರಹವಾಗಿದೆ.
ಕಳೆದ ೫ ತಿಂಗಳುಗಳಿಂದ ಜಿಎಸ್‌ಟಿ ಮಾಸಿಕ ಸಂಗ್ರಹ ಸತತ ೧.೪ ಲಕ್ಷ ಕೋಟಿ ರೂ.ಗಿಂತ ಮೇಲ್ಪಟ್ಟು ದಾಖಲಾಗಿದೆ. ಆರ್ಥಿಕ ಚಟುವಟಿಕೆಗಳು ಚೇತರಿಸಿರುವುದನ್ನು ಇದು ಬಿಂಬಿಸಿದೆ.