ಬೆಂಗಳೂರು: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್ ಮಾಲ್ (GT World Mall) ಏಳು ದಿನಗಳ ಕಾಲ ಬಂದ್ ಆಗಲಿದೆ. ಮಾಲ್ನ ಮಾಲೀಕರ ಪುತ್ರ ಪ್ರಶಾಂತ್ ಅವರು ಸುದ್ದಿಗೋಷ್ಠಿ ನಡೆಸಿ ಆಗಿರುವ ಘಟನೆಗೆ ಕ್ಷಮೆ ಕೋರಿದರಲ್ಲದೆ, ನಗರಾಭಿವೃದ್ಧಿ ಸಚಿವರ ಸೂಚನೆ ಪ್ರಕಾರ ಏಳು ದಿನಗಳ ಕಾಲ ಬಂದ್ ಮಾಡುವುದಾಗಿ ಹೇಳಿದ್ದಾರೆ.
ಪಂಚೆ ಧರಿಸಿ ಬಂದ ರೈತರೊಬ್ಬರಿಗೆ ಮಾಲ್ ಒಳಗೆ ಬಿಡದೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಜಿಟಿ ವರ್ಲ್ಡ್ ಮಾಲ್ ವಿವಾದದ ಕೇಂದ್ರ ಬಿಂದುವಾಗಿತ್ತು. ಮಾಲ್ ಒಂದು ವಾರ ಕಾಲ ಮುಚ್ಚಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸದನದಲ್ಲಿ ಗುಡುಗಿದ್ದರು. ಅಂತೆಯೇ ಸಂಜೆ ವೇಳೆಗೆ ಮಾಲೀಕರೆ ಅದಕ್ಕೆ ಸಮ್ಮತಿಸಿದ್ದಾರೆ.
ನಮ್ಮ ಮಾಲ್ ನಡೆಯಬಾರದಂಥ ಘಟನೆ ನಡೆದಿದೆ. ಹೊಸ ಸಿಬ್ಬಂದಿಯಿಂದ ಪ್ರಮಾದವಾಗಿದೆ. ಮಾಲ್ನ ಮಾಲೀಕನಾಗಿ ನಾನು ಈ ಘಟನೆಗೆ ಕ್ಷಮೆ ಕೇಳುತ್ತಿದ್ದೇನೆ. ತಪ್ಪು ಮಾಡಿದ ಸಿಬ್ಬಂದಿಯನ್ನ ಕೆಲಸದಿಂದ ತೆಗೆದಿದ್ದೇವೆ. ಈ ರೀತಿಯ ಅಪಮಾನ ನಡೆಯಬಾರದಿತ್ತು. ನಮ್ಮ ತಂದೆಯವರೂ ಮಾತಾಡಿ ಕ್ಷಮೆ ಕೇಳಿದ್ದಾರೆ ಎಂದು ಪ್ರಶಾಂತ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮಗೆ ಬಿಬಿಎಂಪಿ ಕಡೆಯಿಂದ ನೋಟಿಸ್ ಜಾರಿಯಾಗಿದೆ. ನಡೆದಿರುವ ಘಟನೆ ಬಗ್ಗೆ ಮಾಹಿತಿ ಕೊಡಿ ಅಂತಾ ನೋಟಿಸ್ ಕೊಟ್ಟಿದ್ದಾರೆ. ಒಂದು ವರ್ಷದ 1. 70 ಕೋಟಿ ತೆರಿಗೆ ಬಾಕಿ ಇದೆ. ಆದರೆ, ಪಾಲಿಕೆ ಘಟನೆ ಬಗ್ಗೆ ಮಾಹಿತಿ ಕೊಡಿ ಅಂತಾ ನೋಟಿಸ್ ಕೊಟ್ಟಿದೆ. ಇದೀಗ ನಾವು ಸ್ವಯಂಪ್ರೇರಿತವಾಗಿ ಕ್ಲೋಸ್ ಮಾಡುತ್ತಿದ್ದೇವೆ ಎಂದು ಪ್ರಶಾಂತ್ ಹೇಳಿದ್ದಾರೆ.
Yesterday, a dhoti clad man was denied entry in GT mall & today,Karnataka Sarkar is shutting down the mall?
— PallaviCT (@pallavict) July 18, 2024
Tell them to apologise, act on security guard
But shutting down a mall?
Why is Congress hell bent on making business run away from Karnataka? pic.twitter.com/sdmzwDZmSi
ಮುಂದಿನ ಸೂಚನೆ ಬರೋ ತನಕ ಮಾಲ್ ಬಂದ್ ಮಾಡ್ತೀವೆ. ಬಿಬಿಎಂಪಿಗೆ ಘಟನೆ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಫಕೀರಪ್ಪ ಅವರನ್ನು ವೈಯಕ್ತಿಕವಾಗಿ ಕರೆದು ಕ್ಷಮೆ ಕೇಳಿದ್ದೇವೆ. ಈ ಬಗ್ಗೆ ವಿಮರ್ಶೆ ನಡೆಸಲು ನಮಗೆ 2-3 ದಿನ ಕಾಲಾವಕಾಶ ಬೇಕಾಗಿದೆ. ಇನ್ನಷ್ಟು ವಿವರಣೆ ನೀಡಲು 2ರಿಂದ 3 ದಿನ ಸಮಯ ಬೇಕಾಗುತ್ತದೆ ಎಂದು ಪ್ರಶಾಂತ್ ಹೇಳಿದರು.
ಗೇಟ್ ಬಾಗಿಲು ಬಂದ್
ಜಿಟಿ ಮಾಲ್ ಅನ್ನು ಅಧಿಕಾರಿಗಳು ಬಂದ್ ಮಾಡುವ ಮೊದಲೇ ಅಲ್ಲಿನ ಸಿಬ್ಬಂದಿಗಳೇ ಬಂದ್ ಮಾಡಿಸಿದ್ದಾರೆ. ಮಳಿಗೆಗಳ ಬಳಿಗೆ ತೆರಳಿದ ಮಾಲ್ ಸಿಬ್ಬಂದಿ ಅಂಗಡಿ ಬಂದ್ ಮಾಡುವಂತೆ ಕೋರಿದ್ದಾರೆ. ಅದೇ ರೀತಿ ಒಳಗಿರುವ ಪಿವಿಆರ್ ಸಿನಿಮಾ ಮಂದಿಗಳನ್ನು ಒಂದೊಂದಾಗಿ ಬಂದ್ ಮಾಡಿಸಲಾಗಿದೆ. ಸಿನಿಮಾ ಚಾಲನೆಯಲ್ಲಿರುವ ಸ್ಕ್ರಿನ್ ಬಿಟ್ಟು ಉಳಿದೆಲ್ಲ ಸ್ಕ್ರೀನ್ಗಳನ್ನು ಬಂದ್ ಮಾಡಿಸಲಾಗಿದೆ. ಜತೆಗೆ ಒಳಗಿರುವ ಎಲ್ಲ ಗ್ರಾಹಕರನ್ನು ಹೊರಕ್ಕೆ ಕಳುಹಿಸಲಾಗಿದೆ.
ಕಂದಾಯ ವಿಭಾಗ ಆಸ್ತಿತೆರಿಗೆ ಬಾಕಿ ಉಳಿಸಿಕೊಂಡ ಬಗ್ಗೆ ನೋಟಿಸ್ ಕೊಟ್ಟಿದೆ. ಆರೋಗ್ಯ ಇಲಾಖೆ ಕಡೆಯಿಂದಲೂ ನೋಟಿಸ್ ಜಾರಿಯಾಗಿದೆ ಎಂಬುದಾಗಿ ಪ್ರಶಾಂತ್ ಮಾಹಿತಿ ನೀಡಿರು.
ಕಲಾಪದಲ್ಲಿ ಬಂದ್ಗೆ ಸೂಚನೆ
ಗುರುವಾರ ಆರಂಭವಾದ ಮೂರನೇ ದಿನದ ವಿಧಾನಸಭೆ ಕಲಾಪ ಆರಂಭದಲ್ಲೇ ಈ ವಿಷಯ ಪ್ರಸ್ತಾಪವಾಯಿತು. ಹಲವರು ಸದಸ್ಯರು ರೈತರಿಗೆ ಅವಮಾನ ಆದ ವಿಷಯವನ್ನು ಪ್ರಸ್ತಾಪಿಸಿದರು. ವಿಸ್ತಾರ ನ್ಯೂಸ್ ನಿನ್ನೆ ಇಡೀ ದಿನ ಈ ಘಟನೆಯನ್ನು ಪ್ರಸಾರ ಮಾಡಿದ್ದಲ್ಲದೆ, ರೈತರನ್ನು ಮರಳಿ ಜಿಟಿ ಮಾಲ್‌ಗೆ ಕರೆದೊಯ್ದು ಪ್ರವೇಶ ಕೊಡಿಸಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡ ಹಾಗೂ ರೈತಪರ ಸಂಘಟನೆಗಳು ಈ ವಿಚಾರದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಕೈಜೋಡಿಸಿದ್ದವು. ನಂತರ ಸಚಿವ ಸಂತೋಷ್ ಲಾಡ್ (Santosh Lad) ಕೂಡ ಕೂಡ ಈ ವಿಚಾರದಲ್ಲಿ ಮಾಲ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಧಾನಸಭೆ ಕಲಾಪದ ಆರಂಭದ ಹೊತ್ತಿಗೆ ಸ್ವತಃ ಸ್ಪೀಕರ್ ಯು.ಟಿ ಖಾದರ್ (Speaker UT Khader) ಅವರು ಈ ವಿಚಾರ ಎತ್ತಿದರು. ಈ ಬಗ್ಗೆ ಸರ್ಕಾರದ ನಿಲುವನ್ನು ತಿಳಿಸುವಂತೆ ಸೂಚಿಸಿದರು. ಸದಸ್ಯರು ಪಕ್ಷಾತೀತವಾಗಿ ಮಾಲ್ ನಡೆಯನ್ನು ತೀವ್ರವಾಗಿ ಖಂಡಿಸಿದರು. ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ. 7 ದಿನಗಳ ವರೆಗೆ ಬಂದ್ ಮಾಡಿಸಬಹುದು. ಆದರೆ ಎಚ್ಚರಿಕೆ ನೀಡಿ ಮೂರು ದಿನಗಳ ಕಾಲ ಮಾಲ್ ಬಂದ್ ಮಾಡಿಸಲಾಗುವುದು ಎಂದು ತಿಳಿಸಿದರು.