Site icon Vistara News

IPL 2024 : ಗುಜರಾತ್​ ತಂಡಕ್ಕೆ3 ವಿಕೆಟ್​ ವಿಜಯ, ಪಂಜಾಬ್​ಗೆ ಬಿಡದ ಸೋಲಿನ ನಂಟು

IPL 2024

ಮಲ್ಲಾನ್​ಪುರ: ಪಂಜಾಬ್​ ಕಿಂಗ್ಸ್​ ತಂಡ ಮತ್ತೊಂದು ಸೋಲಿಗೆ ಒಳಗಾಗಿದೆ. ಗುಜರಾತ್​​ ವಿರುದ್ಧದ ಐಪಿಎಲ್​​ 2024ರ (IPL 2024) ಪಂದ್ಯದಲ್ಲಿ 3 ವಿಕೆಟ್​ ಪರಾಭವಕ್ಕೆ ಒಳಗಾಗಿದೆ. ಇದು ಪಂಜಾಬ್​ ತಂಡಕ್ಕೆ ಸತತ ನಾಲ್ಕು ಹಾಗೂ ಒಟ್ಟು ಆರನೇ ಸೋಲಾಗಿದೆ. ಏತನ್ಮಧ್ಯೆ ಗುಜರಾತ್​ ತಂಡ ನಾಲ್ಕನೇ ಗೆಲುವು ಪಡೆದಿದೆ. ಅದರಲ್ಲೂ ಸತತ ಎರಡು ಸೋಲುಗಳ ಬಳಿಕ ಗೆಲುವಿನ ಹಾದಿಗೆ ಮರಳಿದೆ.

ಇಲ್ಲಿನ ಮಲ್ಲಾನ್​ಪುರ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಪಂಜಾಬ್​ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿಕೊಂಡಿತು. ಅಂತೆಯೇ ತಮ್ಮ ನಿಗದಿತ ಓವರ್​ನ ಕೊನೇ ಎಸೆತದಲ್ಲಿ 142 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಗುಜರಾತ್ ತಂಡ ಇನ್ನೂ ಐದು ಎಸೆತಗಳು ಬಾಕಿ ಇರುವಾಗ 7 ವಿಕೆಟ್​ ನಷ್ಟಕ್ಕೆ 146 ರನ್ ಬಾರಿಸಿ ಗೆಲುವು ಸಾಧಿಸಿತು. ತೆವಾಟಿಯಾ 36 ರನ್ ಬಾರಿಸಿ ಮಿಂಚಿದರು.

ಇದನ್ನೂ ಓದಿ: Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್​ ತಂಡವೂ ಉತ್ತಮವಾಗಿ ಆಡಿಲ್ಲ. ವೃದ್ಧಿಮಾನ್ ಸಾಹ 13 ರನ್​ಗೆ ಔಟಾದರು. ಶುಭ್​ಮನ್ ಗಿಲ್ ನಿಧಾನಗತಿಯಲ್ಲಿ 35 ರನ್ ಬಾರಿಸಿದರು. ಬಳಿಕ ಸಾಯಿ ಸುದರ್ಶನ್​ ಕೂಡ 34 ಎಸೆತಕ್ಕೆ 31 ರನ್ ಬಾರಿಸಿ ತಂಡಕ್ಕೆ ನೆರವಾದರು. ಡೇವಿಡ್​ ಮಿಲ್ಲರ್​ 4 ರನ್ ಹಾಗೂ ಅಜ್ಮತುಲ್ಲಾ ಒಮರ್ಜೈ 13 ರನ್​ಗೆ ಔಟಾಗುವುದರೊಂದಿಗೆ ಗುಜರಾತ್ ತಂಡದ ಮೇಲೆ ಒತ್ತಡ ಬಿತ್ತು. ಕೊನೆಯಲ್ಲಿ ಆಪದ್ಭಾಂದವ ರಾಹುಲ್ ತೆವಟಿಯಾ 18 ಎಸೆತಕ್ಕೆ 36 ರನ್ ಬಾರಿಸಿದರು.

ಪಂಜಾಬ್​ ಏಕಾಏಕಿ ಕುಸಿತ

ಸ್ಯಾಮ್ ಕರ್ರನ್​ ಹಾಗೂ ಪ್ರಭ್​ ಸಿಮ್ರಾನ್ ಸಿಂಗ್​​ ಪಂಜಾಬ್ ಪರ ಇನಿಂಗ್ಸ್ ಆರಂಭಿಸಿದರು. ಇವರು ಮೊದಲ ವಿಕೆಟ್​​ಗೆ 52 ರನ್ ಬಾರಿಸಿದರು. ಆದರೆ ಆ ಬಳಿಕ ಪಂಜಾಬ್ ತಂಡದ ಬ್ಯಾಟಿಂಗ್ ಏಕಾಏಕಿ ಕುಸಿಯಿತು. ರೀಲಿ ರೊಸ್ಸೊ 9 ರನ್​ಗೆ ಔಟಾದರೆ, ಜಿತೇಶ್​ ಶರ್ಮಾ 13 ರನ್​ಗೆ ವಿಕೆಟ್ ಒಪ್ಪಿಸಿದರು. ಲಿವಿಂಗ್​ಸ್ಟನ್ 6 ಹಾಗೂ ಶಶಾಂಕ ಸಿಂಗ್​ 8 ರನ್​ಗೆ ಔಟಾದರು. ಅಶುತೋಷ್​ 3 ರನ್ ಬಾರಿಸಿ ಈ ಬಾರಿ ವೈಫಲ್ಯ ಕಂಡರು. ಆದರೆ ಕೊನೆಯಲ್ಲಿ ಹರ್ಪ್ರೀತ್ ಬ್ರಾರ್​ 29 ರನ್ ಬಾರಿಸಿ ತಂಡಕ್ಕೆ ಸಮಾಧಾನಕರ ಮೊತ್ತ ಪೇರಿಸಲು ನೆರವಾದರು.

Exit mobile version