ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶದ ಆರಂಭಿಕ ಸುತ್ತಿನಲ್ಲೇ ಬಿಜೆಪಿ ಸತತ 7ನೇ ಬಾರಿಗೆ ಪ್ರಚಂಡ ಬಹುಮತ ಗಳಿಸಿ ಅಧಿಕಾರದ ಗದ್ದುಗೆಗೆ ಏರುವುದು ಸ್ಪಷ್ಟವಾಗಿ ಕಾಣಿಸಿದೆ. ಸದ್ಯದ ಟ್ರೆಂಡ್ ಪ್ರಕಾರ (Gujarat Election Results) ಬಿಜೆಪಿ 153 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದು, ರಾಜ್ಯದಲ್ಲಿ ತನ್ನ ಇತಿಹಾಸದಲ್ಲಿಯೇ ಇದುವರೆಗಿನ ಗರಿಷ್ಠ ಸಂಖ್ಯೆಯ ಸೀಟುಗಳನ್ನು ಗೆಲ್ಲುವ ಹಾದಿಯಲ್ಲಿದೆ. ಬಿಜೆಪಿ ಗುಜರಾತ್‌ನಲ್ಲಿ ಇದುವರೆಗೆ ಗಳಿಸಿದ ಗರಿಷ್ಠ ಸೀಟುಗಳ ಸಂಖ್ಯೆ 126. ಆದರೆ ಈ ಸಲ 150 ಕ್ಷೇತ್ರಗಳಲ್ಲಿ ಈಗಾಗಲೇ ಮುನ್ನಡೆ ದಾಖಲಿಸಿದ್ದು, ಚಾರಿತ್ರಿಕ ಗೆಲುವಿನ ಸಮೀಪದಲ್ಲಿದೆ.
ಕಾಂಗ್ರೆಸ್ ಕೇವಲ 19 ಕ್ಷೇತ್ರಗಳಲ್ಲಿ ಲೀಡ್ ಗಳಿಸಿದ್ದು, ಇದುವರೆಗಿನ ಕನಿಷ್ಠ ಸ್ಥಾನಕ್ಕೆ ಕುಸಿಯುವ ಆತಂಕದಲ್ಲಿದೆ. ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ 7 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್‌ಗೆ ಮರ್ಮಾಘಾತ ಕೊಟ್ಟಿದೆ.
ಎಡಪಕ್ಷಗಳ ದಾಖಲೆ ಮುರಿಯುವತ್ತ ಭಾಜಪ
ಗುಜರಾತ್‌ನಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಿದರೆ, ದೇಶದಲ್ಲಿ ಅತಿ ಹೆಚ್ಚು ಕಾಲ ರಾಜ್ಯವೊಂದರಲ್ಲಿ ಆಡಳಿತ ನಡೆಸಿದ ಎಡಪಕ್ಷಗಳ ದಾಖಲೆಗೆ ಮತ್ತಷ್ಟು ಸನಿಹವಾಗಲಿದೆ. ಗುಜರಾತ್‌ನಲ್ಲಿ ೧೯೯೫ರಿಂದ ಅಧಿಕಾರದಲ್ಲಿರುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ 34 ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಸಿಪಿಐ (ಎಂ) (೧೯೭೭-೨೦೦೦ರವರೆಗೆ ಜ್ಯೋತಿ ಬಸು ಸಿಎಂ, ೨೦೦೦-೨೦೧೧ರವರೆಗೆ ಬುದ್ಧದೇವ ಭಟ್ಟಾಚಾರ್ಯ ಸಿಎಂ) ದಾಖಲೆ ಮುರಿಯುವತ್ತ ಸಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಸತತವಾಗಿ ೩೪ ವರ್ಷ ಸಿಪಿಐ (ಎಂ) ಆಡಳಿತ ನಡೆಸಿದೆ. ಗುಜರಾತ್‌ನಲ್ಲಿ ಬಿಜೆಪಿಯು ೨೭ ವರ್ಷದಿಂದ ಅಧಿಕಾರದಲ್ಲಿದ್ದು, ಈ ಚುನಾವಣೆ ಗೆದ್ದರೆ ಮತ್ತೆ ೫ ವರ್ಷ ಆಡಳಿತ ನಡೆಸಬಹುದು. ಇದಾದ ಬಳಿಕವೂ ಗೆದ್ದರೆ ಸಿಪಿಐ(ಎಂ) ದಾಖಲೆ ಅಳಿಸಬಹುದಾಗಿದೆ. ಈಗ ಗೆದ್ದರೆ ಸತತ ಏಳು ಬಾರಿ ಗೆಲುವು ಸಾಧಿಸಿದ ಸಿಪಿಐ (ಎಂ) ದಾಖಲೆ ಸಮವಾಗುತ್ತದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ಅವರೊಬ್ಬರೇ ೨೩ ವರ್ಷ ಸಿಎಂ ಆಗಿದ್ದರು ಎಂಬುದು ವಿಶೇಷ.
ಪ್ರಧಾನಿ ನರೇಂದ್ರ ಮೋದಿ ಮ್ಯಾಜಿಕ್
೨೦೨೪ರಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ, ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ವಿಧಾನಸಭೆಯ ಹಣಾಹಣಿ ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ಪಣವಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಪಕ್ಷ ಸಿದ್ಧವಿರಲಿಲ್ಲ. ಚುನಾವಣೆಗೆ ಮುನ್ನ ನರೇಂದ್ರ ಮೋದಿ ಅವರೊಬ್ಬರೇ ೨೭ ರ‍್ಯಾಲಿ ನಡೆಸಿದ್ದರು. ಬಿಜೆಪಿ ಚಾಣಕ್ಯ ಅಮಿತ್ ಶಾ ಅವರಂತೂ ಎರಡು ತಿಂಗಳು ಗುಜರಾತ್‌ನಲ್ಲಿಯೇ ವಾಸ್ತವ್ಯ ಹೂಡಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಪ್ರಮುಖರು ಗುಜರಾತ್‌ನಲ್ಲಿ ಸಾಲು ಸಾಲು ರ‍್ಯಾಲಿ, ಸಮಾವೇಶಗಳನ್ನು ಕೈಗೊಳ್ಳುವ ಮೂಲಕ ಮತದಾರರ ಒಲವು ಬೇರೆಡೆ ವಾಲದಂತೆ ತಡೆಯಲು ಯತ್ನಿಸಿದ್ದರು.
ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ೧೬ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ೫೦ ಕಿ.ಮೀ ಮೆಗಾ ರೋಡ್ ಶೋ (Modi Mega Roadshow) ನಡೆಸಿದ್ದು, ಇದು ಹೊಸ ದಾಖಲೆ ಎಂದು ಬಿಜೆಪಿ ತಿಳಿಸಿದೆ. “ದೇಶದಲ್ಲಿಯೇ ಅತಿ ಹೆಚ್ಚು ದೂರ ರೋಡ್ ಶೋ ನಡೆಸಿದ ಮೊದಲ ನಾಯಕ ನರೇಂದ್ರ ಮೋದಿ” ಎಂದು ಬಣ್ಣಿಸಿದೆ.
ಮೋದಿಯವರ ಗುಜರಾತ್ ಮಾಡೆಲ್ ಮೋಡಿ!
ಭಾರತದ ಪಶ್ಚಿಮ ಕರಾವಳಿಯ ಗುಜರಾತ್, ದೇಶದ ಪ್ರಮುಖ ರಾಜ್ಯಗಳಲ್ಲೊಂದು. ಅತಿ ಹೆಚ್ಚು ಪ್ರಗತಿಶೀಲ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ. 2022-23ರಲ್ಲಿ 22 ಲಕ್ಷ ಕೋಟಿ ರೂ. ಜಿಎಸ್‌ಡಿಪಿ ( ಒಟ್ಟಾರೆ ರಾಜ್ಯ ಜಿಡಿಪಿ) ಆರ್ಥಿಕ ಪ್ರಗತಿ ಸಾಧಿಸಿತ್ತು. 13.3% ಏರಿಕೆ ದಾಖಲಿಸಿತ್ತು. ದೇಶದ 13 ಪ್ರಮುಖ ಕೈಗಾರಿಕಾ ಸಮೂಹಗಳು ಗುಜರಾತ್‌ನಲ್ಲಿ ಭಾರಿ ಬಂಡವಾಳವನ್ನು ಹೂಡಿಕೆ ಮಾಡಿವೆ. ರಾಸಾಯನಿಕ, ಪೆಟ್ರೊಕೆಮಿಕಲ್ಸ್, ಡೇರಿ, ಔಷಧ, ಎಂಜಿನಿಯರಿಂಗ್, ಜವಳಿ ವಲಯದಲ್ಲಿ ಗುಜರಾತ್ ಹೆಸರುವಾಸಿಯಾಗಿದೆ. 800ಕ್ಕೂ ಹೆಚ್ಚು ಭಾರಿ ಕೈಗಾರಿಕೆಗಳು ಮತ್ತು 4.53 ಲಕ್ಷಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಗುಜರಾತ್‌ನಲ್ಲಿವೆ.
ಗುಜರಾತ್‌ನಲ್ಲಿ 2001ರಿಂದ 2014ರ ತನಕ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಗುಜರಾತ್‌ನ ಪ್ರತಿಯೊಂದು ರಾಜ್ಯಕ್ಕೂ ವಿದ್ಯುತ್ ಸಂಪರ್ಕವನ್ನು ಮೊದಲಿಗೆ ಕಲ್ಪಿಸಿದ ಮೋದಿ ಅವರು, ನೀರಾವರಿ, ಕೈಗಾರಿಕೆ ವಲಯದಲ್ಲಿ ಪ್ರಬಲವಾಗಿ ಬೆಳೆಯುವಂತೆ ಸುಧಾರಣಾ ಕ್ರಮಗಳನ್ನು ಕೈಗೊಂಡರು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಗಳನ್ನು ಏರ್ಪಡಿಸಿ ಹೂಡಿಕೆ ಹರಿಯುವಂತೆ ಮಾಡಿದರು. ಮೋದಿಯವರು ಸಿಎಂ ಆದ ಬಳಿಕ ಗುಜರಾತ್ ಅಭಿವೃದ್ಧಿಯ ಮಾದರಿ ದೇಶ ಮತ್ತು ವಿದೇಶಗಳಲ್ಲಿ ಮೋಡಿ ಮಾಡಿತ್ತು. 2013ರಲ್ಲಿ ರಾಜ್ಯಗಳ ಪೈಕಿ ಅತಿ ಹೆಚ್ಚು ಅಭಿವೃದ್ಧಿಯನ್ನು ಗುಜರಾತ್ ದಾಖಲಿಸಿತ್ತು. ಮೋದಿಯವರು ಪ್ರಧಾನಿಯಾದ ಬಳಿಕವೂ ಗುಜರಾತ್ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರಲಿಲ್ಲ. 2001ರಲ್ಲಿ ಭುಜ್‌ನಲ್ಲಿ ಸಂಭವಿಸಿದ ಭೂಕಂಪದಿಂದ ಇಡೀ ಗುಜರಾತ್ ಆಘಾತಕ್ಕೀಡಾಗಿತ್ತು. 13 ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಆಗ ಜರ್ಜರಿತವಾಗಿದ್ದ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಸಿಎಂ ಮೋದಿ ಮುನ್ನಡೆಸಿದ್ದರು. ಅಂದಿನಿಂದ ಅವರನ್ನು ರಾಜ್ಯದ ಜನ ನಿರಂತರವಾಗಿ ಗೆಲ್ಲಿಸುತ್ತಲೇ ಬಂದಿದ್ದಾರೆ. ಅಕ್ಷರಶಃ ಈ ಸಲವೂ ಮೋದಿ ಮೋಡಿ ಬಿಜೆಪಿಯನ್ನು ಚಾರಿತ್ರಿಕ ಗೆಲುವಿನ ದಡದತ್ತ ತಂದಿದೆ.