ನವದೆಹಲಿ: ಪ್ರೇಮ ವಿವಾಹಕ್ಕೆ (Love Marriage:) ಪೋಷಕರ ಒಪ್ಪಿಗೆಯನ್ನು (parental nod) ಕಡ್ಡಾಯಗೊಳಿಸುವ ಬಗ್ಗೆ ತಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Gujarat CM Bhupendra Patel) ಅವರು ಭಾನುವಾರ ಹೇಳಿದ್ದಾರೆ. ಈ ಕುರಿತು ಸಾಂವಿಧಾನಿಕ ಸಾಧ್ಯಾ ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಗುಜರಾತ್‌ನ ಮೆಹ್ಸಾನಾದಲ್ಲಿ, ಪಾಟಿದಾರ್ ಸಮುದಾಯವನ್ನು ಪ್ರತಿನಿಧಿಸುವ ಸರ್ದಾರ್ ಪಟೇಲ್ ಗ್ರೂಪ್ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಿಎಂ ಭೂಪೇಂದ್ರ ಪಟೇಲ್ ಅವರು, ಓಡಿ ಹೋಗಿ ಪ್ರೇಮ ವಿವಾಹವಾಗುವ ಹೆಣ್ಣು ಮಕ್ಕಳ ಪೋಷಕರ ಒಪ್ಪಿಗೆ ಅಗತ್ಯ ಅಥವಾ ಕಡ್ಡಾಯಗೊಳಿಸುವ ಕುರಿತು ಅಧ್ಯಯನ ಕೈಗೊಳ್ಳುವ ಬಗ್ಗೆ ಆರೋಗ್ಯ ಸಚಿವರು ತಿಳಿಸಿದ್ದರು ಎಂದು ಹೇಳಿದರು.
ಹೆಣ್ಣುಮಕ್ಕಳು ಓಡಿಹೋಗುವ ಘಟನೆಗಳ ಬಗ್ಗೆ ಹೊಸದಾಗಿ ಚಿಂತಿಸಲು ಮತ್ತು ಅಧ್ಯಯನವನ್ನು ಕೈಗೊಳ್ಳಲು ಋಶಿಕೇಶ್ ಪಟೇಲ್ ನನಗೆ ಹೇಳಿದರು. ಹಾಗಾಗಿ, ಕಡ್ಡಾಯವಾಗಿ ಪೋಷಕರ ಒಪ್ಪಿಗೆ (ಪ್ರೇಮ ವಿವಾಹಗಳಿಗೆ) ಸಾಧ್ಯತೆ ಇದೆಯೇ ಎಂದು ಪರಿಶೀಲಿಸುತ್ತಿದ್ದೇವೆ. ಇದಕ್ಕೆ ಸಂವಿಧಾನವು ಬೆಂಬಲಿಸಿದರೆ, ನಂತರ ನಾವು ಈ ಬಗ್ಗೆ ಅಧ್ಯಯನವನ್ನು ನಡೆಸುತ್ತೇವೆ ಮತ್ತು ಇದಕ್ಕಾಗಿ ಉತ್ತಮ ಫಲಿತಾಂಶವನ್ನು ಪಡೆಯಲು ಪ್ರಯತ್ನಿಸುತ್ತೇವೆ ಎಂದು ಸಿಎಂ ಭೂಪೇಂದ್ರ ಪಟೇಲ್ ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: ಲವ್ ಮ್ಯಾರೇಜ್: ವರನ ಮನೆಗೆ ನುಗ್ಗಿ ವಧುವಿನ ಕಿಡ್ನ್ಯಾಪ್
ಈ ಮಧ್ಯೆ, ಗುಜರಾತ್ ಸರ್ಕಾರದ ಈ ನಿರ್ಧಾರಕ್ಕೆ ಪ್ರತಿ ಪಕ್ಷವು ತನ್ನ ಬೆಂಬಲವನ್ನು ನೀಡಿದೆ. ಪ್ರೇಮ ವಿವಾಹದಲ್ಲಿ ಪೋಷಕರನ್ನು ನಿರ್ಲಕ್ಷಿಸುತ್ತಿರುವ ಈ ಸಂದರ್ಭದಲ್ಲಿ, ಪ್ರೇಮ ವಿವಾಹಗಳ ಬಗ್ಗೆ ಸಂವಿಧಾನಾತ್ಮಕವಾಗಿ ಕಾರ್ಯಸಾಧ್ಯವಾದ ನಿರ್ದಿಷ್ಟ ವ್ಯವಸ್ಥೆಯನ್ನು ರಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.