Site icon Vistara News

Guwahati airport : ಮಳೆ ಗಾಳಿಗೆ ಕುಸಿದು ಬಿದ್ದ ಗುವಾಹಟಿ ಏರ್​ಪೋರ್ಟ್ ಚಾವಣಿ; ಇಲ್ಲಿದೆ ವಿಡಿಯೊ

Guwahati Airport

ಗುವಾಹಟಿ: ಅಸ್ಸಾಂನ ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೊರ್ಡೊಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Guwahati airport) ಹೊರಗಿನ ಚಾವಣಿಯ ಒಂದು ಭಾಗವು ಭಾನುವಾರ ಭಾರಿ ಮಳೆ, ಗಾಳಿಗೆ ಹಠಾತ್ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲವಾದರೂ, ಚಾವಣಿಯ ಒಂದು ಭಾಗ ಕುಸಿದಿದ್ದರಿಂದ ಅದಾನಿ ಗ್ರೂಪ್ ನಿಯಂತ್ರಿತ ವಿಮಾನ ನಿಲ್ದಾಣದ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಅದೇ ರೀತಿ ಆರು ವಿಮಾನಗಳನ್ನು ಇತರ ಸ್ಥಳಗಳಿಗೆ ಕಳುಹಿಸಬೇಕಾಯಿತು.

ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚಾವಣಿಯ ಒಂದು ಭಾಗವು ಇದ್ದಕ್ಕಿದ್ದಂತೆ ಕುಸಿಯುತ್ತಿರುವುದನ್ನು ತೋರಿಸುತ್ತದೆ. ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ರಕ್ಷಣೆ ಪಡೆಯಲು ಓಡು ವುದು ದೃಶ್ಯದಲ್ಲಿ ದಾಖಲಾಗಿದೆ. ಮತ್ತೊಂದು ವೀಡಿಯೊಗಳು ವಿಮಾನ ನಿಲ್ದಾಣದ ಸಿಬ್ಬಂದಿ ಆವರಣದಿಂದ ಹೆಚ್ಚುವರಿ ನೀರನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವುದನ್ನು ತೋರಿಸಿದೆ.

ಇದನ್ನೂ ಓದಿ: Cyclonic Storm : ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ, 4 ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ

ಚಂಡಮಾರುತವು ವಿಮಾನ ನಿಲ್ದಾಣದ ಹೊರಗಿನ ಆಯಿಲ್ ಇಂಡಿಯಾ ಕಾಂಪ್ಲೆಕ್ಸ್​ನಲ್ಲಿರುವ ದೊಡ್ಡ ಮರವನ್ನು ಬುಡಮೇಲು ಮಾಡಿದೆ. ಹೀಗಾಗಿ ರಸ್ತೆಯಲ್ಲಿ ಪ್ರಯಾಣವನ್ನು ನಿರ್ಬಂಧಿಸಿದೆ ಎಂದು ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ (ಸಿಎಒ) ಉತ್ಪಲ್ ಬರುವಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

“ಕಟ್ಟಡದ ಚಾವಣಿ ಹಳೆಯದಾಗಿತ್ತು ಮತ್ತು ಗಾಳಿಯ ವೇಗವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ಚಾವಣಿ ಒಡೆದು ನೀರು ಒಳಗೆ ಹರಿಯಲು ಪ್ರಾರಂಭಿಸಿತು. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಮತ್ತು ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ. ಚಾವಣಿಯಿಂದ ನೀರು ಟರ್ಮಿನಲ್ ಗೆ ಪ್ರವೇಶಿಸಿದೆ ಎಂದು ಬರುವಾ ಹೇಳಿಕೊಂಡಿದ್ದಾರೆ.

“ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ವೈಯಕ್ತಿಕವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದ್ದೇವೆ. ಚಂಡಮಾರುತ ಮತ್ತು ಭಾರಿ ಮಳೆಯಿಂದಾಗಿ, ಗೋಚರತೆ ತೀವ್ರವಾಗಿ ಕುಸಿದಿದೆ. ಆರು ವಿಮಾನಗಳನ್ನು ಬೇರೆಡೆಗೆ ತಿರುಗಿಸಬೇಕಾಯಿತು” ಎಂದು ಅವರು ಹೇಳಿದರು.

ಇಂಡಿಗೊ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್​​ಪ್ರೆಸ್​ ನಿರ್ವಹಿಸುವ ವಿಮಾನಗಳನ್ನು ಅಗರ್ತಲಾ ಮತ್ತು ಕೋಲ್ಕತ್ತಾಗೆ ಕಳುಹಿಸಲಾಗಿದೆ. ಗೋಚರತೆ ಸುಧಾರಿಸುತ್ತಿದ್ದಂತೆ, ಕಾರ್ಯಾಚರಣೆಗಳನ್ನು ಪುನರಾರಂಭಿಸಲಾಯಿತು ಮತ್ತು ವಿಮಾನಗಳು ಗುವಾಹಟಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಾರಂಭಿಸಿದವು ಎಂದು ವರದಿಗಳು ಹೇಳಿವೆ.

Exit mobile version