Site icon Vistara News

Hardik Pandya : ಬಿಸಿಸಿಐಗೆ ಕಾಡಿ, ಬೇಡಿ ಗುತ್ತಿಗೆ ಉಳಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?

Hardik Pandya

ಬೆಂಗಳೂರು: ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಬಿಸಿಸಿಐ ತನ್ನ ಕೇಂದ್ರೀಯ ಗುತ್ತಿಗೆಯಿಂದ ಕೈಬಿಟ್ಟಿರುವುದು ಚರ್ಚೆಯ ವಿಷಯವಾಗಿದೆ. ಯಾಕೆಂದರೆ 2023-24ರ ಋತುವಿನ ರಣಜಿ ಟ್ರೋಫಿಯಲ್ಲಿ ಆಡುವಂತೆ ಬಿಸಿಸಿಐ ನಿರ್ದೇಶನ ನೀಡಿದ ಹೊರತಾಗಿಯೂ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಪಶ್ಚಾತಾಪ ಪಡುವಂತಾಗಿದೆ. ಇದೇ ವೇಳೆ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಅದುವೇ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಎ ಗ್ರೇಡ್​ ಗುತ್ತಿಗೆಯಲ್ಲಿ ಉಳಿಸಿಕೊಂಡಿರುವುದು.

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ರೆಡ್-ಬಾಲ್ ಕ್ರಿಕೆಟ್ ಆಡದೇ, ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿದ್ದಾಗ ವೈಟ್-ಬಾಲ್ ದೇಶೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲಿಲ್ಲ. ಆದಾಗ್ಯೂ ಅವರನ್ನು ಗ್ರೇಡ್ ಎ ವರ್ಗದಲ್ಲಿ ಇರಿಸುವ ಬಿಸಿಸಿಐ ನಿರ್ಧಾರವನ್ನು ಅಭಿಮಾನಿಗಳು ಮತ್ತು ತಜ್ಞರು ಪ್ರಶ್ನಿಸಿದ್ದಾರೆ. ಆದರೆ, ಪಾಂಡ್ಯ ತನ್ನ ಗುತ್ತಿಗೆಯನ್ನು ಕಾಡಿಬೇಡಿ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಇಂಡಿಯನ್ ಎಕ್ಸ್​ಪ್ರೆಸ್​ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತ ತಂಡದೊಂದಿಗೆ ಸೀಮಿತ ಓವರ್​ಗಳ ಪಂದ್ಯದ ಬದ್ಧತೆಗಳು ಇಲ್ಲದ ವೇಳೆ ಸೈಯದ್ ಮುಷ್ತಾಕ್ ಅಲಿ ಟಿ 20 ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡಾ ಪರ ಆಡುವುದಾಗಿ ಪಾಂಡ್ಯ ಭರವಸೆ ನೀಡಿದ ನಂತರವೇ ಆಯ್ಕೆದಾರರು ಮತ್ತು ಬಿಸಿಸಿಐ ಒಪ್ಪಂದ ಮುಂದುವರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ : Ind vs Pak : ನೆಟ್​ಫ್ಲಿಕ್ಸ್​​ನಲ್ಲಿ ಪ್ರಸಾರವಾಗಲಿದೆ ಇಂಡೊ- ಪಾಕ್​ ಕ್ರಿಕೆಟ್​ ವೈರತ್ವದ ಸೀರಿಸ್​​

“ನಾವು ಪಾಂಡ್ಯ ಅವರೊಂದಿಗೆ ಚರ್ಚಿಸಿದ್ದೇವೆ, ಅವರು ಲಭ್ಯವಿದ್ದಾಗ ದೇಶೀಯ ವೈಟ್-ಬಾಲ್ ಪಂದ್ಯಾವಳಿಗಳನ್ನು ಆಡಲು ತಿಳಿಸಲಾಗಿದೆ. ಈ ಹಂತದಲ್ಲಿ, ಬಿಸಿಸಿಐನ ವೈದ್ಯಕೀಯ ತಂಡದ ಮೌಲ್ಯಮಾಪನದ ಪ್ರಕಾರ ಅವರು ರೆಡ್-ಬಾಲ್ ಪಂದ್ಯಾವಳಿಗಳಲ್ಲಿ ಬೌಲಿಂಗ್ ಮಾಡುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ರಣಜಿ ಟ್ರೋಫಿ ಆಡುವುದು ಅವರಿಗೆ ಸಾಧ್ಯವಿಲ್ಲ. ಆದರೆ ಭಾರತದ ಬದ್ಧತೆಗಳಿಲ್ಲದಿದ್ದರೆ ಅವರು ಇತರ ವೈಟ್-ಬಾಲ್ ಪಂದ್ಯಾವಳಿಗಳನ್ನು ಆಡಬೇಕಾಗುತ್ತದೆ. ಇಲ್ಲದಿದ್ದರೆ, ಅವರು ಒಪ್ಪಂದವನ್ನು ಕಳೆದುಕೊಳ್ಳುತ್ತಾರೆ,” ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್​ಪ್ರೆಸ್​ಗೆ ತಿಳಿಸಿದ್ದಾರೆ.

ತವರಿನಲ್ಲಿ ಮೂರು ಟಿ20 ಪಂದ್ಯಗಳು

ಫ್ಯೂಚರ್ ಟೂರ್ಸ್ ಪ್ರೋಗ್ರಾಂ ಪ್ರಕಾರ, ಭಾರತವು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಕೇವಲ ಮೂರು ಟಿ 20 ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ, ಸೈಯದ್ ಮುಷ್ತಾಕ್ ಅಲಿ ಟಿ 20 ಮತ್ತು ವಿಜಯ್ ಹಜಾರೆ ಟ್ರೋಫಿ ನಡೆಯಲಿದೆ. ಈ ವೇಳೆ ಭಾರತ ತಂಡಕ್ಕೆ ಯಾವುದೇ ವೈಟ್-ಬಾಲ್ ಬದ್ಧತೆಗಳಿಲ್ಲ. ಪಾಂಡ್ಯ ಯಾವುದೇ ಫಿಟ್ನೆಸ್ ಸಮಸ್ಯೆಗಳಿಲ್ಲದಿದ್ದರೆ ಈ ಎರಡೂ ಪಂದ್ಯಾವಳಿಗಳಲ್ಲಿ ಕಾಣಿಸಿಕೊಳ್ಳಲೇಬೇಕು.

ಗುತ್ತಿಗೆ ಪಡೆದ ಆಟಗಾರರು ರಾಷ್ಟ್ರೀಯ ತಂಡದ ಭಾಗವಾಗಿಲ್ಲದಿದ್ದಾಗ ಆಯಾ ರಾಜ್ಯ ಘಟಕಗಳಿಗೆ ವರದಿ ಮಾಡಲು ಬಿಸಿಸಿಐ ಸೂಚನೆ ನೀಡಿದೆ ಎಂದು ವರದಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ, ದೇಶೀಯ ಋತುವಿನ ನಡುವೆ ಆಟಗಾರರು ಆಯಾ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಶಿಬಿರಗಳಿಗೆ ಹಾಜರಾಗುವ ಪ್ರಕರಣಗಳು ನಡೆದಿವೆ. ಇತ್ತೀಚೆಗೆ, ಶ್ರೇಯಸ್ ಅಯ್ಯರ್ ಮುಂಬೈನ ರಣಜಿ ಟ್ರೋಫಿ ಪಂದ್ಯವನ್ನು ತಪ್ಪಿಸಿಕೊಂಡ ನಂತರ ಕೆಕೆಆರ್ ತರಬೇತಿ ಶಿಬಿರದಲ್ಲಿ ಹಾಜರಿದ್ದರು.

Exit mobile version