ಅಹಮದಾಬಾದ್: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಳ್ಳಲು ರೆಡಿಯಾಗಿರುವ ಹಾರ್ದಿಕ್ ಪಟೇಲ್, ಪಕ್ಷಕ್ಕೆ ಗುರುವಾರ ಸೇರ್ಪಡೆಯಾಗಲಿದ್ದಾರೆ. ಇದಕ್ಕೂ ಮುನ್ನ ಮಾಡಿರುವ ಟ್ವೀಟ್‌ನಲ್ಲಿ, ಮೋದಿಯವರ ಸಣ್ಣ ಸೈನಿಕನಾಗಿ ಸೇವೆ ಸಲ್ಲಿಸುವೆ ಎಂದಿದ್ದಾರೆ.
” ರಾಷ್ಟ್ರೀಯ ಹಿತಾಸಕ್ತಿ, ರಾಜ್ಯದ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿಆಸಕ್ತಿಯೊಂದಿಗೆ ಇಂದಿನಿಂದ ಹೊಸ ಅಧ್ಯಾಯವನ್ನು ಆರಂಭಿಸಲಿದ್ದೇನೆ. ಭಾರತದ ಯಶಸ್ವಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಕೆಲಸದಲ್ಲಿ ಸಣ್ಣ ಸೈನಿಕನಾಗಿ ನಾನು ಕೆಲಸ ಮಾಡುವೆʼʼ ಎಂದು ಟ್ವೀಟ್ ಮಾಡಿದ್ದಾರೆ ಹಾರ್ದಿಕ್ ಪಟೇಲ್.
ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಗುಜರಾತ್ ಬಿಜೆಪಿ ಅಧ್ಯಕ್ಷ ಸಿ ಆ ಪಾಟೀಲ್ ಸ್ವಾಗತಿಸಲಿದ್ದಾರೆ. ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಜತೆಗೆ ಅಸಮಾಧಾನ ಹೊಂದಿದ್ದ ಹಾರ್ದಿಕ್ ಪಟೇಲ್, ಮೇ 18ರಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಗುಜರಾತ್ ನ ನಿಜವಾದ ಸಮಸ್ಯೆ ಬಗ್ಗೆ ಕಾಂಗ್ರೆಸ್ ಗೆ ಆಸಕ್ತಿ ಇಲ್ಲ ಎಂದು ಟೀಕಿಸಿದ್ದರು. ತಮ್ಮ ನೇತೃತ್ವದ ಪಾಟೀದಾರ್ ಸಮುದಾಯದಿಂದ ಕಾಂಗ್ರೆಸ್ 2017ರಿಂದಲೂ ಲಾಭ ಗಳಿಸಿದೆ. ಆದರೆ ತಮಗೆ ಯಾವುದೇ ಮಹತ್ವದ ಜವಾಬ್ದಾರಿ ವಹಿಸಿಲ್ಲ. ಕಾರ್ಯಾಧ್ಯಕ್ಷನಾಗಿದ್ದರೂ ಪಕ್ಷದ ಸಭೆಗೆ ಕರೆಯುತ್ತಿರಲಿಲ್ಲ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಪಕ್ಷ ನನ್ನ ಒಂದು ಪತ್ರಿಕಾಗೋಷ್ಠಿಯನ್ನೂ ಕರೆದಿರಲಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಜೂನ್ 2ರಂದು ಬಿಜೆಪಿ ಸೇರ್ಪಡೆ