Site icon Vistara News

8 ವರ್ಷದ ಮುದ್ದು ಮಗಳ ಕತ್ತು ಸೀಳಿ ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿಜ್ಞಾನಿ; ಏನಾಗಿತ್ತು?

Haryana Scientist Family

Haryana scientist dies by suicide after killing his 8-year-old daughter, probe launched

ಚಂಡೀಗಢ: ಹರಿಯಾಣದಲ್ಲಿ ವಿಜ್ಞಾನಿಯೊಬ್ಬರು (Haryana Scientist) ತಮ್ಮ 8 ವರ್ಷದ ಮಗಳ ಕತ್ತು ಸೀಳಿ ಕೊಂದ ಬಳಿಕ ತಾವೂ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಹರಿಯಾಣದ ಹಿಸಾರ್‌ನಲ್ಲಿರುವ ವಿಶ್ವವಿದ್ಯಾಲಯದ ಕ್ಯಾಪಸ್‌ನಲ್ಲಿನ ಕಚೇರಿಯಲ್ಲಿ ವಿಜ್ಞಾನಿ ಸಂದೀಪ್‌ ಗೋಯಲ್‌ (Sandeep Goyal) (35) ಹಾಗೂ ಅವರ 8 ವರ್ಷದ ಪುತ್ರಿಯ ಶವ ಪತ್ತೆಯಾಗಿದೆ. ಖಿನ್ನತೆಯಿಂದ (Depression) ಬಳಲುತ್ತಿದ್ದ ಅವರು ಮಗಳ ಕತ್ತು ಸೀಳಿ ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹರಿಯಾಣದ ಲಾಲಾ ಲಜಪತ್‌ ರಾಯ್‌ ವಿಶ್ವವಿದ್ಯಾಲಯದ ಪಶು ವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನ ವಿಭಾಗದಲ್ಲಿ ಅವರು ಪ್ರೊಫೆಸರ್‌ ಆಗಿದ್ದರು. ಯುವ ವಿಜ್ಞಾನಿಯೂ ಆಗಿರುವ ಇವರು ಕಳೆದ ಕೆಲ ತಿಂಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅವರು ಮಾನಸಿಕ ತಜ್ಞರಿಂದಲೂ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಭಾನುವಾರ (ಮಾರ್ಚ್‌ 10) ಅವರು ಅತಿಯಾದ ಮಾನಸಿಕ ಒತ್ತಡಕ್ಕೊಳಗಾಗಿ, ಮಗಳನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

“ಸಂದೀಪ್‌ ಗೋಯಲ್‌ ಹಾಗೂ ಅವರ ಪುತ್ರಿಯ ಶವಗಳು ವಿವಿ ಕ್ಯಾಂಪಸ್‌ನಲ್ಲಿ ಪತ್ತೆಯಾಗಿವೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವ ಜತೆಗೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರನ್ನೂ ಕರೆಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸಂದೀಪ್‌ ಗೋಯಲ್‌ ಅವರ ಕುಟುಂಬಸ್ಥರು, ಸಹೋದ್ಯೋಗಿಗಳು ಸೇರಿ ಎಲ್ಲರ ಬಳಿಯೂ ಮಾಹಿತಿ ಪಡೆದಿದ್ದೇವೆ. ಸಂದೀಪ್‌ ಗೋಯಲ್‌ ಅವರು ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದಾಗಿ ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ” ಎಂದು ಹಿಸಾರ್‌ ಎಎಸ್‌ಪಿ ರಾಜೇಶ್‌ ಮೋಹನ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Self Harming : ನೇಣು ಬಿಗಿದುಕೊಂಡು ಬಾರ್‌ ಕ್ಯಾಶಿಯರ್‌ ಆತ್ಮಹತ್ಯೆ

ಸಂದೀಪ್‌ ಗೋಯಲ್‌ ಅವರ ಪತ್ನಿಯನ್ನು ಕೂಡ ಪೊಲೀಸರು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಪ್ರಕರಣದ ಕುರಿತು ಹೆಚ್ಚಿನ ತನಿಖೆಯ ಬಳಿಕವೇ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version