ಗುರುಗ್ರಾಮ್: ಹಿಂಸಾಚಾರದಿಂದ ತಲ್ಲಣಸಿದ್ದ ಗುರುಗ್ರಾಮ್ (Gurugram) ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಹೇಳಿಕೆಯ ಹೊರತಾಗಿಯೂ, ಅಲ್ಲಲ್ಲಿ ಅಂಗಡಿಗಳನ್ನು ದರೋಡೆ (Mob loots shops) ಮಾಡಿದ ಘಟನೆಗಳು ನಡೆದಿವೆ. ಕೆಲವು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದೆ. ಇದರೊಂದಿಗೆ ಬಾದಶಪುರದಲ್ಲಿ ಹೊಸದಾಗಿ ಕೋಮು ಹಿಂಸಾಚಾರಕ್ಕೆ ಕಾರಣವಾಗಿದೆ. ಹಿಂಸಾಚಾರನಿರತ ಕೆಲವು ಗುಂಪುಗಳು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಂಗಡಿಗಳನ್ನು ದರೋಡೆ ಮಾಡಿದ್ದು, ಬಾದಶಹಾಪುರ ಮಸೀದಿ ಮುಂದೆ ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದ ಘಟನೆ ಮಂಗಳವಾರ ನಡೆದಿದೆ(Haryana Violence).
ಕೆಲ ಯುವಕರು ಮಾರುಕಟ್ಟೆಯಲ್ಲಿ ಗಲಾಟೆ ಸೃಷ್ಟಿಸಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಿದ್ದರು. ನಾವು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಭಾಯಿಸಿದ್ದೇವೆ ಎಂದು ಬಾದಶಹಪುರ ಪೊಲೀಸ್ ಠಾಣೆಯ ಎಸ್ಎಚ್ಒ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಗುರುಗ್ರಾಮ್ನ ಬಸಾಯಿ ರಸ್ತೆಯಲ್ಲಿರುವ ಪಟಟೌಡಿ ಚೌಕ್ನಲ್ಲಿರುವ ಕನಿಷ್ಠ ಮೂರು ಅಂಗಡಿಗಳನ್ನು ದುಷ್ಕರ್ಮಿಗಳು ಲೂಟಿ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಗುರುಗ್ರಾಮ್ ಜಿಲ್ಲಾಧಿಕಾರಿ ನಿಶಾಂತ್ ಯಾದವ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಚಿಲ್ಲರೆಯಾಗಿ ಪೆಟ್ರೋಲ್ ಮತ್ತು ಡಿಸೇಲ್ ಮಾರಾಟವನ್ನು ನಿಷೇಧಿಸಿದ್ದಾರೆ. ಹರ್ಯಾಣದ ನುಹ್ ಜಿಲ್ಲೆ ಮತ್ತು ಗುರುಗ್ರಾಮ್ ಗಡಿಯಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರವು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದ್ದು, ಸಾರ್ವಜನಿಕ ಶಾಂತಿ ಕಾಪಾಡಲು ಅಗತ್ಯವಿರುವ ಕ್ರಮಗಳನ್ನು ಜಿಲ್ಲಾಡಳಿತವು ಕೈಗೊಂಡಿದೆ ಎಂದು ಹೇಳಿದ್ದಾರೆ.
ಏನಿದು ಕೋಮು ಗಲಭೆ?
ಹರ್ಯಾಣದಲ್ಲಿ ಸೋಮವಾರ ಸಾಯಂಕಾಲ (Haryana Violence) ಧಾರ್ಮಿಕ ಮೆರವಣಿಗೆ ಮೇಲೆ ಕಲ್ಲು ತೂರಾಟ (Stone Pelting) ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ ಗುಂಪೊಂದು ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಗೃಹರಕ್ಷಕರು ಮೃತಪಟ್ಟಿದ್ದು(Home Guards Killed), ಏಳು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಹಿಂಸಾಚಾರ ನಡೆಸುತ್ತಿದ್ದ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಇಂಟರ್ನೆಟ್ (internet Shutdown) ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಕರ್ಫ್ಯೂ ಹೇರಲಾಗಿದೆ. ಏತನ್ಮಧ್ಯೆ, ಹಿಂಸಾಚಾರದಿಂದಾಗಿ ಗುರುಗ್ರಾಮ್ (Gurugram) ಬಳಿಯ ನೂಲ್ಹರ್ ಮಹಾದೇವ್ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದ ಸುಮಾರು 2,500 ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಪೊಲೀಸರು ರಕ್ಷಿಸಿ, ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿದ್ದಾರೆ. ಇವರೆಲ್ಲರೂ ಧಾರ್ಮಿಕ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.
ಗುರುಗ್ರಾಮ್ಗೆ ಹೊಂದಿಕೊಂಡಿರುವ ನುಹ್ನಲ್ಲಿ ಧಾರ್ಮಿಕ ಮೆರವಣಿಗೆ ನಡೆಯುತ್ತಿತ್ತು. ವಿಶ್ವ ಹಿಂದೂ ಪರಿಷತ್ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಆಯೋಜಿಸಿತ್ತು. ಯುವಕರಿದ್ದ ಗುಂಪೊಂದು ಗುರಗ್ರಾಮ್-ಅಲ್ವಾರ್ ರಾಷ್ಟ್ರೀಯ ಹೆದ್ದಾರಿ ಧಾರ್ಮಿಕ ಮೆರವಣಿಗೆಯನ್ನು ತಡೆದು, ಕಲ್ಲು ತೂರಾಟ ನಡೆಸಿತು. ಹಿಂಸಾಚಾರ ಭುಗಿಲೇಳುತ್ತಿದ್ದಂತೆ ಹೆದ್ದಾರಿಯಲ್ಲಿದ್ದ ಖಾಸಗಿ ಹಾಗೂ ಸರ್ಕಾರಿ ವಾಹನಗಳಿಗೆ ಗುಂಪು ಬೆಂಕಿ ಹಚ್ಚಿತು.
ಈ ಸುದ್ದಿಯನ್ನೂ ಓದಿ: Haryana Violence: ಹರ್ಯಾಣದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ; ಇಬ್ಬರು ಹೋಮ್ಗಾರ್ಡ್ಸ್ ಸಾವು, 7 ಪೊಲೀಸರಿಗೆ ಗಾಯ
ಸಂಜೆಯ ಹೊತ್ತಿಗೆ ಹಿಂಸಾಚಾರವು ಗುರುಗ್ರಾಮ್-ಸೋಹ್ನಾ ಹೆದ್ದಾರಿಗೆ ಹರಡಿತು. ಅಲ್ಲಿ ಹಲವಾರು ಕಾರುಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆಯಲಾಯಿತು ಎಂದು ಮೂಲಗಳು ತಿಳಿಸಿವೆ. ಬಜರಂಗ ದಳ ಕಾರ್ಯಕರ್ತರೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಅವಹೇಳನಕಾರಿ ಪೋಸ್ಟ್ ಈ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.