Site icon Vistara News

Haryana Violence: ಹರ್ಯಾಣದ ಗಲಭೆಗೆ ಕಾರಣನಾಗಿರುವ ಮೋನು ಮನೇಸರ್ ಯಾರು?

Monu Manesar

ನವದೆಹಲಿ: ಹರ್ಯಾಣದ ಗುರುಗ್ರಾಮ್ (Gurugram) ಬಳಿಯ ನುಹ್‌ನಲ್ಲಿ ಸೋಮವಾರ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ (Haryana Violence) ಏನು ಕಾರಣ? ಈ ಕುರಿತು ಜಿಲ್ಲಾಡಳಿತವೂ ತನಿಖೆಗೆ ಮುಂದಾಗಿದೆ. ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಈ ವರ್ಷಾರಂಭದಲ್ಲಿ ಇಬ್ಬರು ಮುಸ್ಲಿಮ್ ವ್ಯಕ್ತಿಗಳ ಕೊಲೆ ಕೇಸಿನಲ್ಲಿ ಪೊಲೀಸರಿಗೆ ಬೇಕಾಗಿದ್ದ ಬಜರಂಗದಳದ (Bajrang dal) ನಾಯಕ ಮೋನು ಮಾನೇಸರ್‌ (Monu Manesar) ನುಹ್‌ಗೆ ಆಗಮಿಸಿದ್ದೇ ಹಿಂಸಾಚಾರ ಭುಗಿಲೇಳಲು ಕಾರಣ ಎನ್ನಲಾಗುತ್ತಿದೆ. ಸೋಮವಾರ ಸಾಯಂಕಾಲ ಸಂಭವಿಸಿದ ಈ ಗಲಭೆಯಲ್ಲಿ ಇಬ್ಬರು ಹೋಮ್ ಗಾರ್ಡ್ಸ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಕನಿಷ್ಠ 30 ಜನರು ಗಾಯಗೊಂಡಿದ್ದಾರೆ. ನುಹ್‌ನಲ್ಲಿ ಆರಂಭವಾದ ಗಲಭೆ ಗುರುಗ್ರಾಮ್‌ಕ್ಕೂ ತಲುಪಿ ರಾತ್ರೋರಾತ್ರಿ ಮಸೀದಿಗೆ ಬೆಂಕಿ ಹಚ್ಚಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಮೋನು ಮನೇಸರ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದ. ಈ ವಿಡಿಯೋದಲ್ಲಿ ಆತ ನುಹ್ ಧಾರ್ಮಿಕ ಮೆರವಣಿಗೆಯಲ್ಲಿ ಭಾಗವಹಿಸಲಿದ್ದೇನೆ. ತಮ್ಮ ಬೆಂಬಲಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದ. ಆದರೆ, ಸೋಷಿಯಲ್ ಮೀಡಿಯಾಗಳಿಂದ ದೂರ ಇರುವಂತೆ ಆತನಿಗೆ ತಾಕೀತು ಮಾಡಲಾಗಿತ್ತು ಎನ್ನಲಾಗಿತ್ತು.

ವಿಶ್ವ ಹಿಂದೂ ಪರಿಷತ್ ಸಲಹೆ ಮೇರೆಗೆ ತಾನು ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಮನೇಸರ್ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಮನೇಸರ್ ಪಾಲ್ಗೊಳ್ಳುವುದರಿಂದ ಪರಿಸ್ಥಿತಿ ಕೈಮೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪಾಲ್ಗೊಳ್ಳದಂತೆ ವಿಎಚ್‌ಪಿ ಸೂಚಿಸಿತ್ತು ಎನ್ನಲಾಗಿದೆ. ಭಿವಾನಿಯಲ್ಲಿ ಫೆಬ್ರವರಿಯಲ್ಲಿ ಸುಟ್ಟ ಕಾರಿನಲ್ಲಿ ಶವವಾಗಿ ಪತ್ತೆಯಾದ ಇಬ್ಬರು ಮುಸ್ಲಿಂ ಪುರುಷರನ್ನು ಅಪಹರಿಸಿ ಹತ್ಯೆ ಮಾಡಿದ ಆರೋಪದ ಮೇಲೆ 30 ವರ್ಷದ ಮೋನು ಮಾನೇಸರ್ ಪೊಲೀಸರಿಂದ ತಲೆಮರೆಸಿಕೊಂಡು ತಿರುಗುತ್ತಿದ್ದಾನೆ.

ಭಿವಾನಿಯಲ್ಲಿ ಸುಟ್ಟು ಕರಕಲಾದ ಕಾರಿನಲ್ಲಿ ದನ ವ್ಯಾಪಾರಿಗಳಾದ ಜುನೈದ್ ಮತ್ತು ನಾಸೀರ್ ಅವರ ಶವಗಳು ಪತ್ತೆಯಾಗಿದ್ದವು. ಬಜರಂಗದಳ ಕಾರ್ಯಕರ್ತರೇ ಹಲ್ಲೆ ಮಾಡಿ, ಜೀವಂತವಾಗಿ ಸುಟ್ಟು ಹಾಕಿದ್ದಾರೆಂದು ಮೃತರ ಕುಟುಂಬದ ಸದಸ್ಯರು ಆರೋಪಿಸಿದ್ದರು. ಆದರೆ, ಈ ಆರೋಪವನ್ನು ಬಜರಂಗದಳ ತಳ್ಳಿ ಹಾಕಿತ್ತು. ಈ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ಮನೇಸರ್‌ನ ಇನ್ನೇನು ಸಿಕ್ಕಿ ಬೀಳಲಿದ್ದಾನೆ ಎನ್ನುವಷ್ಟರಲ್ಲಿ ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Haryana Violence: ಗುರುಗ್ರಾಮ್‌ನಲ್ಲಿ ಅಂಗಡಿಗಳಿಗೆ ಬೆಂಕಿ, ಇನ್ನೂ ತೀರದ ಗಲಭೆಯ ದಾಹ

ಮೋನು ಮಾನೇಸರ್ ಮೇವಾತ್‌ನಲ್ಲಿ ಗೋರಕ್ಷಕರ ಗುಂಪನ್ನು ಕಟ್ಟಿಕೊಂಡಿದ್ದಾನೆ. ಗೋರಕ್ಷಕರ ಮೇಲೆ ದಾಳಿ ನಡೆಸಿ, ಅವುಗಳ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಕ್ಕೆ ಕುಖ್ಯಾತನಾಗಿದ್ದಾನೆ. ಇಷ್ಟೇ ಅಲ್ಲದೇ, ಲವ್ ಜಿಹಾದ್ ವಿರುದ್ಧ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದ. ವಿಶೇಷ ಎಂದರೆ, 2015ರಲ್ಲಿ ಗೋ ರಕ್ಷಣೆ ಸಂಬಂಧ ಹರ್ಯಾಣ ಸರ್ಕಾರವು ಕಾಯ್ದೆಯಲ್ಲಿ ತಿದ್ದುಪಡಿ ತಂದು ಜಿಲ್ಲಾ ಗೋ ರಕ್ಷಣೆ ಟಾಸ್ಕ್ ಪೋರ್ಸ್ ಸ್ಥಾಪಿಸಿತ್ತು. ಮನೇಸರ್ ಈ ಕಾರ್ಯಪಡೆಯ ಸದಸ್ಯ ಕೂಡ ಆಗಿದ್ದ! ಯುಟ್ಯೂಬ್, ಫೇಸ್‌ಬುಕ್‌ಗಳಲ್ಲಿ ಮನೇಸರ್‌ಗೆ ಸಾವಿರಾರು ಫಾಲೋವರ್ಸ್ ಇದ್ದಾರೆ. ಈತ ಆಗಾಗ, ಆಯುಧಗಳೊಂದಿಗೆ ತಾನಿರುವ ವಿಡಿಯೋಗಳನ್ನ ಪೋಸ್ಟ್ ಮಾಡುತ್ತಾನೆ. ಕಾರುಗಳೊಂದಿಗೆ ವಿಡಿಯೋಗಳನ್ನು ಷೇರ್ ಮಾಡುತ್ತಿರುತ್ತಾನೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version