ಬೆಂಗಳೂರು: ಲೋಕಸಭೆ ಚುನಾವಣೆ (Parliament Flashback) ಫಲಿತಾಂಶವೇ ಅಚ್ಚರಿದಾಯಕ. ಕರ್ನಾಟಕ ಅಗ್ರ ರಾಜಕೀಯ ನಾಯಕ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಟಿವಿ ಪತ್ರಕರ್ತೆ ಎದುರು ಹೀನಾಯವಾಗಿ ಸೋತು ಹೋಗಿದ್ದರು.
2004ರ ಲೋಕಸಭೆ ಚುನಾವಣೆ ಹೊತ್ತಿಗೆ ಎಚ್ ಡಿ ದೇವೇಗೌಡರ ಕುಟುಂಬ ಮತ್ತು ಡಿ ಕೆ ಶಿವಕುಮಾರ್ ನಡುವಿನ ಮೇಲಾಟ ಬಿರುಸಾಗಿತ್ತು. ಡಿ ಕೆ ಶಿವಕುಮಾರ್ ಅವರಿಗೆ ಟಕ್ಕರ್ ಕೊಡಲು ದೇವೇಗೌಡರು ಆ ವರ್ಷ ಹಾಸನದಿಂದ ಮಾತ್ರವಲ್ಲ, ಕನಕಪುರ (ಈಗಿನ ಬೆಂಗಳೂರು ಗ್ರಾಮಾಂತರ) ಲೋಕಸಭೆ ಕ್ಷೇತ್ರದಲ್ಲೂ ನಾಮಪತ್ರ ಸಲ್ಲಿಸಿದರು!
ದೇವೇಗೌಡರಂಥ ದೇವೇಗೌಡರ ಎದುರು ಯಾರನ್ನು ನಿಲ್ಲಿಸೋದು ಎಂದು ಕಾಂಗ್ರೆಸ್ ಹೈಕಮಾಂಡ್ ಚಿಂತಿತವಾಗಿದ್ದಾಗ ಡಿಕೆಶಿ ಅವರು ಅಚ್ಚರಿಯ ಹೆಸರೊಂದನ್ನು ಮುಂದಿಟ್ಟರು. ಅವರೇ ತೇಜಸ್ವಿನಿ ಗೌಡ! ತೇಜಸ್ವಿನಿ ಆಗ ಉದಯ ಟಿವಿಯ ʼಮುಖಾಮುಖಿʼ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿದ್ದರು.
ಮಹಿಳೆಯಿಂದ ಗೌಡರಿಂದ ಆಪತ್ತು ಎಂಬ ಭವಿಷ್ಯ:
ಮಹಿಳೆಯರಿಂದ ದೇವೇಗೌಡರಿಗೆ ಆಪತ್ತು ಎದುರಾಗಲಿದೆ ಎಂದು ಖ್ಯಾತ ಜೋತಿಷಿಯೊಬ್ಬರು ಹೇಳಿರುವುದರ ಹಿನ್ನೆಲೆಯಲ್ಲಿ, ತೇಜಸ್ವಿನಿ ಅವರನ್ನು ಚುನಾವಣೆಗೆ ನಿಲ್ಲಿಸಲಾಯಿತು ಎಂಬ ಮಾತೂ ಕೇಳಿ ಬಂದಿತ್ತು!
ದೇವೇಗೌಡರಿಗೆ ಮೂರನೇ ಸ್ಥಾನ!:
ದೇವೇಗೌಡರು ತೇಜಸ್ವಿನಿ ಎದುರು 1.22 ಲಕ್ಷ ಮತಗಳ ಅಂತರದಿಂದ ಸೋತು ಹೋದರು! ಅಷ್ಟೇ ಅಲ್ಲ, ಅವರು ಬಿಜೆಪಿ ಬಳಿಕ ಮೂರನೇ ಸ್ಥಾನಿಯಾದರು!
ಕಾಂಗ್ರೆಸ್‌ನ ತೇಜಸ್ವಿನಿಗೆ 5,84,238, ಬಿಜೆಪಿಯ ರಾಮಚಂದ್ರ ಗೌಡರಿಗೆ 4,67,575 ಮತಗಳು ಬಂದರೆ, ದೇವೇಗೌಡರಿಗೆ ಸಿಕ್ಕಿದ್ದು 4,62,320 ಮತಗಳು ಮಾತ್ರ.
ದೇವೇಗೌಡರು ಆಗ 71 ವರ್ಷದ ಹಿರಿಯ ರಾಜಕಾರಣಿ. ತೇಜಸ್ವಿನಿ ಅವರಿಗೆ 37 ವರ್ಷ!
ಹಾಸನದಿಂದ ಗೆದ್ದ ಗೌಡರು
ಆದರೆ ದೇವೇಗೌಡರು ಹಾಸನದಲ್ಲಿ ಕಾಂಗ್ರೆಸ್‌ನ ಎಚ್ ಸಿ ಶ್ರೀಕಂಠಯ್ಯ ಅವರನ್ನು 1 ಲಕ್ಷ 90 ಸಾವಿರ ಮತಗಳ ಭಾರಿ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸಿದರು. 2004ರ ಕನಕಪುರ ಲೋಕಸಭೆ ಕ್ಷೇತ್ರದ ಚುನಾವಣೆ ಫಲಿತಾಂಶವನ್ನು ರಾಜಕೀಯಾಸಕ್ತರು ಎಂದೂ ಮರೆಯಲಾರರು!
ಲೋಕಸಭೆ ತೀರ್ಪೇ ಬೇರೆ, ವಿಧಾನಸಭೆ ತೀರ್ಪೇ ಬೇರೆ!
ಮತದಾರರು ಲೋಕಸಭೆಯಲ್ಲಿ ನೀಡುವ ತೀರ್ಪೇ ಬೇರೆ, ವಿಧಾನಸಭೆಯಲ್ಲಿ ನೀಡುವ ತೀರ್ಪೇ ಬೇರೆ ಎನ್ನುವುದಕ್ಕೆ ಕರ್ನಾಟಕವೇ ದೃಷ್ಟಾಂತ. ಹಿಂಬಾಗಿಲ ರಾಜಕಾರಣ, ರಾಜಿ ರಾಜಕಾರಣ, ಆಪರೇಷನ್ ರಾಜಕಾರಣಗಳ ಇತ್ಯಾದಿ ಇಂದಿನ ಅನೀತಿ ಪಾಲಿಟಿಕ್ಸ್‌ಗಳ ನಡುವೆ ನೈತಿಕತೆಯು ಮೌಲ್ಯ ಕಳೆದುಕೊಂಡಿದೆ. ಆದರೆ ರಾಜಕಾರಣದಲ್ಲಿ ʼನೈತಿಕ ಹೊಣೆʼ ಎಂದರೇನು, ಅದೇಕೆ ಮುಖ್ಯ ಎನ್ನುವುದನ್ನು 1985ರಲ್ಲಿ ರಾಮಕೃಷ್ಣ ಹೆಗಡೆ ಅವರು ತೋರಿಸಿಕೊಟ್ಟಿದ್ದರು.
ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು:
1983ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ 82 ಸ್ಥಾನಗಳನ್ನು ಗಳಿಸಿ ಅಧಿಕಾರ ಕಳೆದುಕೊಂಡಿತು. 95 ಸ್ಥಾನಗಳನ್ನು ಗಳಿಸಿದ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಬಂಗಾರಪ್ಪ ಅವರ ಕ್ರಾಂತಿರಂಗ ಪಕ್ಷವು ಜನತಾ ಪಕ್ಷದ ಜತೆಗಿತ್ತು.
ಬಿಜೆಪಿಯ 18, ಸಿಪಿಐಯ 3 ಮತ್ತು 16 ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರಿದರು. ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಅವರು. ಮಾದರಿ ಆಡಳಿತದ ಮೂಲಕ ರಾಮಕೃಷ್ಣ ಹೆಗಡೆ ಅವರು ಅಪಾರ ಜನ ಮನ್ನಣೆ ಗಳಿಸತೊಡಗಿದರು.
ಇಂದಿರಾ ಗಾಂಧಿ ಬಲಿಯಾದಾಗ…:
ಈ ಮಧ್ಯೆ ಪ್ರಧಾನಿ ಇಂದಿರಾ ಗಾಂಧಿ ಅವರು 1984ರಲ್ಲಿ ಸಿಖ್ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಆ ಬಳಿಕ ನಡೆದ 1984ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಅಲೆಯ ಪರಿಣಾಮವಾಗಿ ದೇಶಾದ್ಯಂತ ಕಾಂಗ್ರೆಸ್ ಭರ್ಜರಿ ಜಯ ಗಳಿಸಿತು. 514 ಕ್ಷೇತ್ರಗಳ ಪೈಕಿ 404 ಸ್ಥಾನಗಳು ಕಾಂಗ್ರೆಸ್ ಪಾಲಾದವು.
ಪ್ರತಿಪಕ್ಷಗಳ ಪರಿಸ್ಥಿತಿ ಎಷ್ಟು ಹೀನಾಯವಾಗಿತ್ತೆಂದರೆ, ಆಂಧ್ರ ಪ್ರದೇಶದಲ್ಲಿ 30 ಸ್ಥಾನ ಗಳಿಸಿದ ಎನ್ ಟಿ ರಾಮರಾವ್ ಅವರ ತೆಲುಗು ದೇಶಂ ಪಾರ್ಟಿಯೇ ಎರಡನೇ ಅತಿ ದೊಡ್ಡ ಪಕ್ಷವಾಯಿತು! ಕೇರಳದಲ್ಲಿ 22 ಸ್ಥಾನ ಗಳಿಸಿದ ಇ ಎಂ ಎಸ್ ನಂಬೂದಿರಿಪಾಡ್ ನೇತೃತ್ವದ ಸಿಪಿಐ ಮೂರನೇ ಅತಿ ದೊಡ್ಡ ಪಕ್ಷವಾಯಿತು!
ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 24 ಸ್ಥಾನ ಗೆದ್ದರೆ, ಆಡಳಿತರೂಢ ಜನತಾ ಪಕ್ಷಕ್ಕೆ ಕೇವಲ 4 ಸೀಟುಗಳನ್ನು ಗೆಲ್ಲುವುದಕಷ್ಟೇ ಸಾಧ್ಯವಾಯಿತು. ಈ ಸೋಲಿಗೆ ತಾವೇ ಹೊಣೆ ಹೊತ್ತು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ರಾಮಕೃಷ್ಣ ಹೆಗಡೆ ಅವರು ಮತ್ತೊಮ್ಮೆ ಜನತೆಯ ತೀರ್ಪು ಪಡೆಯಲು ವಿಧಾನಸಭೆ ಚುನಾವಣೆ ಎದುರಿಸಿದರು.
ಈಗಷ್ಟೇ ಲೋಕಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಧೂಳಿಪಟವಾಗಿದೆ. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರು ಸರ್ಕಾರ ವಿಸರ್ಜನೆ ಮಾಡಿದ್ದು “ಆತ್ಮಹತ್ಯೆಯ ನಿರ್ಧಾರʼ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟರು. ಸಾಲದೆಂಬಂತೆ ಜನತಾ ಪಕ್ಷ ಯಾವುದೇ ಪ್ರಮುಖ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಕಣಕ್ಕಿಳಿಯಿತು. ಆದರೆ ರಿಸಲ್ಟ್ ಬಂದಾಗ ಅಚ್ಚರಿ ಕಾದಿತ್ತು. ಭರ್ತಿ 139 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜನತಾ ಪಕ್ಷ ಪ್ರಚಂಡ ಜಯ ಸಾಧಿಸಿತು. ಕಾಂಗ್ರೆಸ್ ಕೇವಲ 65 ಸ್ಥಾನಗಳಲ್ಲಿ ಗೆದ್ದು ಹೀನಾಯವಾಗಿ ಸೋತಿತು.
ಆ ಚುನಾವಣೆಯಲ್ಲಿ 116 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಕೇವಲ ಎರಡು ಕಡೆ ಗೆದ್ದರೆ, ಸಿಪಿಐಗೆ 3 ಸ್ಥಾನಗಳು ಲಭಿಸಿದವು.
ರಾಮಕೃಷ್ಣ ಹೆಗಡೆ ಮತ್ತೊಮ್ಮೆ ಮುಖ್ಯಮಂತ್ರಿ:
ನಾಡಿನ ಜನತೆಯ ಹೊಸ ತೀರ್ಪಿನೊಂದಿಗೆ ರಾಮಕೃಷ್ಣ ಹೆಗಡೆ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ದೇಶದ ರಾಜಕೀಯ ಇತಿಹಾಸದಲ್ಲಿ ಇದೊಂದು ಅಪರೂಪದ ಮತ್ತು ಮಹತ್ವದ ಅಧ್ಯಾಯವಾಗಿ ದಾಖಲಾಯಿತು.