ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಭಾನುವಾರ ಸಂಜೆ ಏಕಾಏಕಿ ಭರ್ಜರಿ (Bangalore Rain News) ಮಳೆಯಾಯಿತು. ಸಂಜೆ 6 ಗಂಟೆಯ ಬಳಿಕ ಬೆಂಗಳೂರಿನ ನಗರ ವ್ಯಾಪ್ತಿಯ ಬಹುತೇಕ ಕಡೆ ಜೋರು ಮಳೆಯಾಯಿತು. ಈ ಮಳೆಯ ಅಬ್ಬರಕ್ಕೆ ನಗರದಲ್ಲಿ ಹಲವು ಮರಗಳು ಉರುಳಿ ಬಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಮರಗಳು ಉರುಳಿ ಬಿದ್ದ ಮರಗಳಿಂದಾಗಿ ವಾಹನಗಳಿಗೆ ಹಾನಿ ಉಂಟಾದವು. ಅದೇ ರೀತಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಕಾರಣ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಸಂಜೆ ಶುರುವಾರ ಮಳೆ ರಾತ್ರಿ 12 ಗಂಟೆಯ ವರೆಗೆ ಬಿಡದೇ ಸುರಿಯಿತು. ಹೀಗಾಗಿ ಭಾನುವಾರದ ವಾರಾಂತ್ಯದ ಸಂಚಾರಕ್ಕೆ ಹೊರಗಡೆ ಬಂದಿದ್ದ ನಗರದ ಮಂದಿ ಅಲ್ಲಲ್ಲೇ ಉಳಿಯುವಂತಾಯಿತು. ಅವರ ಖುಷಿಗೆ ಮಳೆರಾಯನ ಅಡಚಣೆಯೂ ಉಂಟಾಯಿತು. ವಾಹನ ಸಂಚಾರಕ್ಕೆ ಅಡಚಣೆಯಾದ ಕಾರಣ ಕುಟುಂಬ ಸಮೇತ ಹೊರಟಿದ್ದವರು ರಸ್ತೆಯ ಬದಿಯಲ್ಲಿ ಕಾಯುವ ಪರಿಸ್ಥಿತಿ ಸೃಷ್ಟಿಯಾಯಿತು. ಬಸ್ ಸಂಚಾರವೂ ನಿಧಾಗೊಂಡಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಹರಸಾಹಸಪಟ್ಟರು.
ಮೆಟ್ರೊ ಸಂಚಾರ ಬಂದ್
ಮಳೆರಾಯನ ಅಬ್ಬರಕ್ಕೆ ಬೆಂಗಳೂರಿನ ಜೀವನಾಡಿಯಾಗಿರುವ ಮೆಟ್ರೊ ಸಂಚಾರಕ್ಕೂ ಅಡಚಣೆ ಉಂಟಾಯಿತು. ನೇರಳೆ ಲೈನ್ನ ಇಂದಿರಾನಗರ ಮತ್ತು ಎಂಜಿ ರಸ್ತೆಯ ನಡುವಿನ ಮೆಟ್ರೊ ಬ್ರಿಜ್ ಮೇಲೆ ಮರವೊಂದು ಉರುಳಿ ಬಿತ್ತು. ಹೀಗಾಗಿ ಮೆಟ್ರೊ ಸಂಚಾರವನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. ಇದರಿಂದಾಗಿ ಬೆಂಗಳೂರಿನ ಹೃದಯ ಭಾಗವಾಗಿರುವ ಎಂಜಿ ರಸ್ತೆಯ ನಿಲ್ದಾಣದಲ್ಲಿ ಪ್ರಯಾಣಿಕ ಕಿಕ್ಕಿರಿದು ತುಂಬಿಕೊಂಡರು. ಒಂದು ಕಡೆ ಹೊರಗಡೆ ಸುರಿಯುತ್ತಿರುವ ಮಳೆ ಮತ್ತೊಂಡೆದೆ ರೈಲು ಸಂಚಾರ ಬಂದ್. ಹೀಗಾಗಿ ಜನರ ಎಲ್ಲಿಗೂ ಹೋಗಲು ಸಾಧ್ಯವಾಗದೇ ಪರಿತಪಿಸಿದರು.
ಮನೆಗಳಿಗೆ ನುಗ್ಗಿದ ನೀರು
ಕೆ.ಪಿ ಅಗ್ರಹಾರ, ಇಂದಿರಾನಗರ, ಬಸವೇಶ್ವರ ನಗರ, ಮಂತ್ರಿ ಮಾಲ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತು. ಏಕಾಏಕಿ ಕುಂಭದ್ರೋಣ ಮಳೆ ಸುರಿದ ಕಾರಣ ಚರಂಡಿಯಲ್ಲಿ ನೀರು ಹೋಗದೇ ಸಮೀಪದ ಮನೆಗಳಿಗೆ ನುಗ್ಗಿದವು. ಬಿಬಿಎಂಪಿ ಅಧಿಕಾರಿಗಳು ಮಳೆಗಾಲದ ಮುನ್ಸೂಚನೆಯ ಹೊರತಾಗಿಯೂ ಒಳಚರಂಡಿಗಳು ಹಾಗೂ ಮಳೆ ನೀರು ಕಾಲುವೆಗಳನ್ನು ಸರಿಯಾದ ಸಮಯಕ್ಕೆ ಸರಿಪಡಿಸಿಲ್ಲ. ಇದರಿಂದಾಗಿ ಮನೆಗಳಿಗೆ ಹಾಗೂ ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ ಎಂದು ಜನರು ಆರೋಪಿಸಿದರು.
ಉರುಳಿ ಬಿದ್ದ ಮರಗಳು
ಮಳೆಯ ಜತೆಗೆ ಮಾರುತವೂ ಜೋರಾಗಿತ್ತು. ಹೀಗಾಗಿ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದವು. ಅಧಿಕಾರಿಗಳ ಪ್ರಕಾರ ಒಂದೇ ರಾತ್ರಿಯಲ್ಲಿ 100ಕ್ಕೂ ಅಧಿಕ ಮರಗಳು ಧರಾಶಾಹಿಯಾಗಿವೆ. ಬಸವೇಶ್ವರ ನಗರ ವ್ಯಾಪ್ತಿಯೊಂದರಲ್ಲೇ 40 ಮರಗಳು ಉರುಳಿ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರಗಳು ಬೀಳುವ ಸಮಯದಲ್ಲಿ ವಿದ್ಯುತ್ ತಂತಿಗಳು ಕೂಡ ತುಂಡಾದ ಕಾರಣ ಬೆಂಗಳೂರಿನ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಯಿತು. ನಾಗರಿಕರು ರಾತ್ರಿಯೆಲ್ಲ ಕತ್ತಲೆಯಲ್ಲಿ ಕಳೆಯುವಂತಾಯಿತು.
ಇದನ್ನೂ ಓದಿ: Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್, 20 ಪ್ರಯಾಣಿಕರ ರಕ್ಷಣೆ
ಟ್ರಾಫಿಕ್ ಜಾಮ್
ವಿಪರೀತ ಮಳೆಗೆ ನಗರದ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಾಫಿಕ್ ಜಾಮ್ ನಿಂದ ಜನರು ಪರದಾಡುವಂತಾಯಿತು. ಹೆಬ್ಬಾಳದಿಂದ ಕೋಡಿಗೆಹಳ್ಳಿವರೆಗೂ ಟ್ರಾಫಿಕ್ ಜಾಮ್ ಉಂಟಾಯಿತು. ಎಂಜಿ ರೋಡ್, ಮಾಗಡಿ ರೋಡ್, ಮೈಸೂರು ರೋಡ್, ಕೆಂಗೇರಿಯವರೆಗೆ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ತುಮಕೂರು ರೋಡ್ ನಲ್ಲಿ ಟ್ರಾಫಿಕ್ ಜಾಮ್ ಜೋರಾಯಿತು. ಮಳೆ ಕಡಿಮೆಯಾಗಿದ್ದರೂ ರಾತ್ರಿಯವರೆಗೂ ಟ್ರಾಫಿಕ್ ಜಾಮ್ ಕಂಡು ಬಂತು. ಅಲ್ಲಲ್ಲಿ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಅದರ ಮೇಲೆ ಓಡಾಡಿದ ವಾಹಗಳು ಅಲ್ಲಲ್ಲಿ ಕೆಟ್ಟು ನಿಂತವು.
ಅಂಡರ್ ಪಾಸ್ಗಳಲ್ಲಿ ಕೆಟ್ಟು ನಿಂತ ವಾಹನಗಳು
ಬೆಂಗಳೂರಿನ ಹವಲಾರು ಕಡೆಗಳಲ್ಲಿ ಅಂಡರ್ ಪಾಸ್ ಕೆಳಗೆ ತುಂಬಿದ್ದ ನೀರಿನಲ್ಲಿ ವಾಹನಗಳು ಕೆಟ್ಟು ನಿಂತವು. ಇಂಥ ಪ್ರಕರಣಗಳಲ್ಲಿ ಹಲವಾರು ಮಂದಿ ಪ್ರಾಣಾಪಾಯಿಂದ ಪಾರಾದರು. ಶೇಷಾದ್ರಿಪುರದಲ್ಲಿ ಬಿಎಂಟಿಸಿ ಬಸ್ ಕೆಟ್ಟು ನಿಂತ ಕಾರಣ ಆತಂಕ ಸೃಷ್ಟಿಯಾಗಿತ್ತು. ಸ್ಥಳೀಯರು ಬಸ್ನಲ್ಲಿದ್ದ 22 ಮಂದಿಯನ್ನು ಕಾಪಾಡಿದರು.
ದಾಖಲಾದ ಮಳೆ (ಮಿಲಿಮೀಟರ್‌ಗಳಲ್ಲಿ)
ಹೊರಮಾವು(2) (ಮಹದೇವಪುರ): 80 ಮಿ.ಮೀ, ಕೊಡಿಗೇಹಳ್ಳಿ (ಯಲಹಂಕ): 78ಮಿ.ಮೀ, ವಿದ್ಯಾಪೀಠ (ದಕ್ಷಿಣ ವಲಯ) : 65.5 ಮಿ.ಮೀ, ಜಕ್ಕೂರು(1) (ಯಲಹಂಕ): 56 ಮಿ.ಮೀ, ಕಾಟನ್‌ಪೇಟೆ (ಪಶ್ಚಿಮ ವಲಯ): 55.5 ಮಿ.ಮೀ.
ಕೊಟ್ಟಿಗೆಪಾಳ್ಯ (ಆರ್‌ಆರ್‌ನಗರ): 54 ಮಿ.ಮೀ, ನಂದಿನಿಲೇಔಟ್ (ಪಶ್ಚಿಮ ವಲಯ): 52.5 ಮಿ.ಮೀ, ದಯಾನಂದನಗರ (ಪಶ್ಚಿಮ ವಲಯ): 49 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ (ಪಶ್ಚಿಮ ವಲಯ): 47.5 ಮಿ.ಮೀ, ಪೀಣ್ಯ ಸ್ಥಳೀಯ ಪ್ರದೇಶ (ದಾಸರಹಳ್ಳಿ): 45.5 ಮಿ.ಮೀ, ಯಲಹಂಕ (ಯಲಹಂಕ): 45.5 ಮಿ.ಮೀ, ವಿಶ್ವನಾಥ ನಾಗೇನಹಳ್ಳಿ (ಪೂರ್ವವಲಯ): 44.5 ಮಿ.ಮೀ, ಬೊಮ್ಮನಹಳ್ಳಿ (ಬೊಮ್ಮನಹಳ್ಳಿ ವಲಯ): 43.5 ಮಿ.ಮೀ, ಮಾರುತಿ ಮಂದಿರ ವಾರ್ಡ್ (ಪಶ್ಚಿಮ ವಲಯ): 43 ಮಿ.ಮೀ, ನಾಗಾಪುರ (ಪಶ್ಚಿಮ ವಲಯ): 41.5 ಮಿ.ಮೀ, ಹಂಪಿ ನಗರ (ದಕ್ಷಿಣ ವಲಯ): 40.5 ಮಿ.ಮೀ, ಸಂಪಂಗಿ ರಾಮನಗರ (1) (ಪೂರ್ವವಲಯ): 40 ಮಿ.ಮೀ, ಚೌಡೇಶ್ವರಿ ವಾರ್ಡ್ (ಯಲಹಂಕ): 39 ಮಿ.ಮೀ, ಬಿಟಿಎಂ ಲೇಔಟ್ (ದಕ್ಷಿಣ ವಲಯ): 38 ಮಿ.ಮೀ, ನಾಯಂಡಹಳ್ಳಿ (ಪಶ್ಚಿಮ ವಲಯ): 37 ಮಿ.ಮೀ, ಚಾಮರಾಜಪೇಟೆ (ಪಶ್ಚಿಮ ವಲಯ): 36.5 ಮಿ.ಮೀ, ಪುಲಕೇಶಿನಗರ (ಪೂರ್ವವಲಯ): 34.5 ಮಿ.ಮೀ, ಹೇರೋಹಳ್ಳಿ 33.5 ಮಿ.ಮೀ, ರಾಜಾಜಿನಗರ (ಪಶ್ಚಿಮ ವಲಯ): 33 ಮಿ.ಮೀ, ರಾಜರಾಜೇಶ್ವರಿ ನಗರ 31.5 ಮಿ.ಮೀ, ಉತ್ತರಹಳ್ಳಿ: 28 ಮಿ.ಮೀ, ಎಚ್ಎಸ್ಆರ್ ಲೇಔಟ್ ದಾಖಲಾದ 27.5 ಮಿ.ಮೀ, ಬಿಳೇಕಹಳ್ಳಿ (ಬೊಮ್ಮನಹಳ್ಳಿ ವಲಯ): 25.5 ಮಿ.ಮೀ, ದೊರೆಸಾನಿಪಾಳ್ಯ: 24.5 ಮಿ.ಮೀ, ಹೆಮ್ಮಿಗೆಪುರ 23.5 ಮಿ.ಮೀ, ಪಟ್ಟಾಭಿರಾಮನಗರ: 22 ಮಿ.ಮೀ, ಕುಶಾಲನಗರ 21 ಮಿ.ಮೀ, ಕೋಣನಕುಂಟೆ: 19.5 ಮಿ.ಮೀ.
ಸಿಂಗಸಂದ್ರ-2: 18.5 ಮಿ.ಮೀ, ಅರಕೆರೆ: 18.5 ಮಿ.ಮೀ, ರಾಜರಾಜೇಶ್ವರಿನಗರ: 18 ಮಿ.ಮೀ, ವಿದ್ಯಾರಣ್ಯಪುರ: 17.5 ಮಿ.ಮೀ, ದೊಡ್ಡನೆಕ್ಕುಂದಿ: 16.5 ಮಿ.ಮೀ, ಬಾಣಸವಾಡಿ: 15 ಮಿ.ಮೀ, ಮನೋರಾಯನಪಾಳ್ಯ: 15 ಮಿ.ಮೀ
ವನ್ನರಪೇಟ್: 14.5 ಮಿ.ಮೀ, ಹೆಮ್ಮಿಗೆಪುರ: 14 ಮಿ.ಮೀ, ಬೆಳ್ಳಂದೂರು: 13 ಮಿ.ಮೀ, ಹೊಯ್ಸಳನಗರ: 12 ಮಿ.ಮೀ, ಎಚ್.ಗೊಲ್ಲಹಳ್ಳಿ: 11.5 ಮಿ.ಮೀ, ಚೊಕ್ಕಸಂದ್ರ: 11 ಮಿ.ಮೀ, ಕಮ್ಮನಹಳ್ಳಿ: 10 ಮಿ.ಮೀ, ಹಾಲ್ ವಿಮಾನ ನಿಲ್ದಾಣ: 10 ಮಿ.ಮೀ, ಕೆಂಗೇರಿ: 10 ಮಿ.ಮೀ, ಎಚ್ಎ ವಿಮಾನ ನಿಲ್ದಾಣ-2: 10 ಮಿ.ಮೀ, ಮಾರತ್ತಹಳ್ಳಿ: 10 ಮಿ.ಮೀ.