Site icon Vistara News

Hebbal flyover: ಬಿಡಿಎ ಕಾಮಗಾರಿ; ಹೆಬ್ಬಾಳ ಮೇಲ್ಸೇತುವೆಗೆ ಕೆ.ಆರ್.ಪುರಂನಿಂದ ಬರುವ ವಾಹನಗಳಿಗೆ ನಿರ್ಬಂಧ

Hebbal Flyover

ಬೆಂಗಳೂರು: ಬಿಡಿಎ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳ ಮೇಲ್ಸೇತುವೆಯ ಕೆ.ಆರ್.ಪುರಂ ಅಪ್ ರ‍್ಯಾಂಪ್ ಮುಚ್ಚಲಾಗಿದ್ದು, ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ಎಲ್ಲಾ ವಾಹನಗಳಿಗೆ ಫ್ಲೈ ಓವರ್ (Hebbal flyover) ಮೇಲೆ ಸಂಚಾರ ನಿರ್ಬಂಧಿಸಲಾಗಿದೆ. ಏಪ್ರಿಲ್ 17ರಿಂದ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳಿಗೆ ನಿರ್ಬಂಧ ಇತ್ತು. ಈಗ ಎಲ್ಲಾ ರೀತಿಯ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಈ ಮಾರ್ಗದ ವಾಹನಗಳಿಗೆ ಪರ್ಯಾಯ ಮಾರ್ಗ ನಿಗದಿ ಮಾಡಲಾಗಿದೆ.

ಹೆಬ್ಬಾಳ ಮೇಲ್ಸೇತುವೆಗೆ ಎರಡು ಹೊಸ ಟ್ರ್ಯಾಕ್‌ಗಳನ್ನು ಸೇರಿಸಲು ಬಿ.ಡಿ.ಎ ಕಾಮಗಾರಿ ಆರಂಭಿಸಿರುವುದರಿಂದ ಈಗಾಗಲೇ ಏ.17ರಿಂದ ಕೆ.ಆರ್.ಪುರ ಲೂಪ್ ಸೇರುವ ಟ್ರ್ಯಾಕ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಇದೀಗ ಮೇ 14ರಿಂದ ಕೆ.ಆರ್.ಪುರಂ ಕಡೆಯಿಂದ ಬರುವ ಲೂಪ್ ಹೆಬ್ಬಾಳ ಫ್ಲೈ ಓವರ್‌ನ ಮುಖ್ಯ ಟ್ರ್ಯಾಕ್‌ಗೆ ಸೇರಿಸುವ ಎರಡು ಲಿಂಕ್ ಸ್ಪ್ಯಾನ್‌ಗಳನ್ನು ತೆಗೆದುಹಾಕುತ್ತಿರುವುದರಿಂದ ರ‍್ಯಾಂಪ್ ಮತ್ತು ಮುಖ್ಯ ಟ್ರ್ಯಾಕ್‌ಗೆ ಸಂಪರ್ಕ ಕಡಿತವಾಗಲಿದೆ. ಹೀಗಾಗಿ ಯಾವುದೇ ರೀತಿಯ ವಾಹನ ಸಂಚಾರ ಸಾಧ್ಯವಿರದ ಹಿನ್ನೆಲೆಯಲ್ಲಿ, ಕಾಮಗಾರಿ ಮುಕ್ತಾಯವಾಗುವವರೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸಂಚಾರ ವಿಭಾಗದಿಂದ ಈ ಕೆಳಕಂಡ ಮಾರ್ಪಾಡುಗಳನ್ನು ಮಾಡಲಾಗಿದೆ.

ಇದನ್ನೂ ಓದಿ | Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

ಮೇ 14ರಿಂದ ಹೆಬ್ಬಾಳ ಫ್ಲೈ ಓವರ್‌ನ ಕೆ.ಆರ್. ಪುರಂ ಅಪ್ ರ‍್ಯಾಂಪ್ ಮುಚ್ಚುತ್ತಿರುವುದರಿಂದ ಕೆ.ಆರ್‌.ಪುರಂ., ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಮೇಲ್ಸೇತುವೆ ಮೇಲೆ ನಿರ್ಬಂಧಿಸಲಾಗಿದೆ.

ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

  1. ನಾಗವಾರ(ಔಟರ್‌ರಿಂಗ್ ರಸ್ತೆ) ಕಡೆಯಿಂದ ನಗರದ ಒಳಗೆ ಮೇಖ್ರಿ ಸರ್ಕಲ್ ಮುಖಾಂತರ ಸಂಚರಿಸುವ ವಾಹನಗಳು ಹೆಬ್ಬಾಳ ಸರ್ಕಲ್‌ನಲ್ಲಿ ಫ್ಲೈ ಓವರ್ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೇಹಳ್ಳಿ ಜಂಕ್ಷನ್ ಬಳಿ ಯೂ ಟರ್ನ್ ಪಡೆದು ಸರ್ವಿಸ್ ರಸ್ತೆಯಿಂದ ಹೆಬ್ಬಾಳ ಫ್ಲೈ ಓವರ್‌ನ ರ‍್ಯಾಂಪ್ ಮುಖೇನ ನಗರದ ಕಡೆಗೆ ಚಲಿಸಬಹುದಾಗಿರುತ್ತದೆ.
  2. ಕೆ.ಆರ್. ಪುರಂ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ಈ ಕೆಳಕಂಡ ರಸ್ತೆಗಳ ಮೂಲಕ ನಗರ ಪ್ರವೇಶಿಸಬಹುದಾಗಿದೆ.
    ಐ.ಒ.ಸಿ. ಮುಕುಂದ ಥಿಯೇಟರ್ ರಸ್ತೆ,
    ಲಿಂಗರಾಜಪುರ ಮೇಲ್ಸೇತುವೆ ಮಾರ್ಗ,
    ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ
  3. ಹೆಗಡೆನಗರ-ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿ.ಕೆ.ವಿಕೆ-ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದಾಗಿದೆ.
  4. ಕೆ.ಆ‌ರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈ ಓವರ್ ಕೆಳಗಡೆ ನೇರವಾಗಿ ಬಿ.ಇ.ಎಲ್. ಸರ್ಕಲ್ ತಲುಪಿ ಎಡತಿರುವು ಪಡೆದು ಸದಾಶಿವನಗರ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಐ.ಐ.ಎಸ್.ಸಿ. ಮುಖಾಂತರ ಚಲಿಸಬಹುದಾಗಿದೆ.
  5. ಕೆ.ಆ‌ರ್.ಪುರಂ, ಹೆಣ್ಣೂರು, ಎಚ್.ಆರ್.ಬಿ.ಆರ್. ಲೇಔಟ್, ಕೆ.ಜಿ.ಹಳ್ಳಿ, ಬಾಣಸವಾಡಿ ಕಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಸಂಚರಿಸುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆಯ ಮುಖಾಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ.

Exit mobile version