ಮೈಸೂರು: ಮನೆಯಲ್ಲಿ ಮಕ್ಕಳು ಸ್ವಲ್ಪ ಮೇಲೆ ಬಂದಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಸಾಮಾನ್ಯವಾಗಿ ತಾಯಿಯ ವರ್ತನೆಗಳೇ ಬೇರೆಯಾಗುತ್ತವೆ. ಅದು ಸಹಜ ಕೂಡ. ಆದರೆ ಈ ದೇಶಕ್ಕೆ ಪ್ರಧಾನಿಯನ್ನು ಕೊಟ್ಟ ಆ ತಾಯಿ ಒಂದೇ ಒಂದು ಕ್ಷಣವೂ ಬಿಡದಂತೆ ಸಾಮಾನ್ಯ ವ್ಯಕ್ತಿಯಂತೆ ಜೀವನಪೂರ್ತಿ ಬಾಳಿದವರು. (Heeraben Modi ) ಅವರ ಸರಳತೆಯ ಆದರ್ಶ ದೊಡ್ಡದು ಎಂದು ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರನ್ನು ಸ್ಮರಿಸಿದವರು ಮಾಜಿ ಸಚಿವ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ ರಾಮದಾಸ್.
ಮೈಸೂರಿಗೆ ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಂದಿದ್ದಾಗ ತಮ್ಮ ಜತೆ ಮಾತನಾಡಿದ ಸಂದರ್ಭವನ್ನು ರಾಮದಾಸ್ ಸ್ಮರಿಸಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ರಾಜ್ಯಪಾಲರು, ಸಿಎಂ ಸೇರಿ ಅನೇಕ ಗಣ್ಯರಿದ್ದರು. ಪ್ರಧಾನಿ ಮೋದಿಯವರು ರಾಜ್ಯಪಾಲರಿಗೆ ನನ್ನನ್ನು ತೋರಿಸಿ ಒಂದು ಮಾತು ಹೇಳಿದ್ರು- ಇವರ ತಾಯಿ ನನಗೂ ತಾಯಿಯಂತಿದ್ದರು. ನನಗೆ ಆತಿಥ್ಯ ನೀಡುತ್ತಿದ್ದರು, ಬಹುಮಾನ ನೀಡಿದ್ದರು. ತಾಯಿ ಇಲ್ಲದಿದ್ದರೆ ಏನೂ ಸಿಗುವುದಿಲ್ಲ ಎಂದು ಪ್ರಧಾನಿ ಹೇಳಿದ್ದನ್ನು ನೆನೆದಾಗ ದುಃಖವಾಗುತ್ತದೆ ಎಂದು ಶಾಸಕ ರಾಮದಾಸ್ ಗದ್ಗದಿತರಾದರು.
ವಿಶ್ವದ ಮನುಕುಲವನ್ನು ಕಾಪಾಡಪ್ಪ ಎಂದು ಮೋದಿಯವರಿಗೆ ಆಶೀರ್ವದಿಸಿದ್ದರು ಹೀರಾಬೆನ್
ಹೀರಾಬೆನ್ ಅವರು ಶತಾಯುಷಿಯಾಗಿದ್ದಾಗ ಆಶೀರ್ವಾದ ಕೋರಿ ಬಂದಿದ್ದ ಮಗ ನರೇಂದ್ರ ಮೋದಿಗೆ, ವಿಶ್ವದ ಮನುಕುಲವನ್ನು ಕಾಪಾಡಪ್ಪಾ ಎಂದು ಆಶೀರ್ವದಿಸಿದ್ದರು. ಕೈಯಾರೆ ಮಗುವಿಗೆ ತಿನ್ನಿಸುವಂತೆ ಆಹಾರವನ್ನು ಕೊಟ್ಟಿದ್ದರು. ತಲೆ ನೇವರಿಸಿ ಆಶೀರ್ವದಿಸಿ ಕಳಿಸಿದ್ದರು. ಅಂಥ ಮಹಾನ್ ಚೇತನ ಇವತ್ತು ನಮ್ಮೊಂದಿಗಿಲ್ಲ ಎನ್ನುವುದೇ ದುಃಖದ ವಿಚಾರ ಎಂದು ರಾಮ್ ದಾಸ್ ಕಂಬನಿ ಮಿಡಿದರು.