ಬೆಂಗಳೂರು: ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿರುವ ಕೆನ್ಸಿಂಗ್ಟನ್ ಓವಲ್ನಲ್ಲಿ ಜೂನ್ 29 ರಂದು ನಡೆದ ಟಿ 20 ವಿಶ್ವಕಪ್ 2024 ರ ಫೈನಲ್ನಲ್ಲಿ(T20 World Cup Final ) ಭಾರತವು ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸಿ ವಿಶ್ವ ಕಪ್ ಗೆದ್ದಿತು. ಈ ಸಂಭ್ರಮದ ನಡುವೆ ವಿರಾಟ್ ಕೊಹ್ಲಿ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಪಡೆದರು. ಸ್ವಲ್ಪ ಹೊತ್ತಿನಲ್ಲಿ ನಾಯಕ ರೋಹಿತ್ ಶರ್ಮಾ ಕೂಡ ಈ ಮಾದರಿಯಲ್ಲಿ ತಮಗಿದು ಕೊನೇ ಪಂದ್ಯ ಎಂದು ಘೋಷಿಸಿದರು. ವಿರಾಟ್ ಕೊಹ್ಲಿ (Virat Kohli) ಟೂರ್ನಿಯಲ್ಲಿ ಪ್ರದರ್ಶನ ನೀಡಿದ್ದರು. ಆದರೆ, ನಿರ್ಣಾಯಕ ಫೈನಲ್ನಲ್ಲಿ ಅರ್ಧಶತಕ ಬಾರಿಸಿ ಗೆಲುವಿಗೆ ಕೊಡುಗೆ ಕೊಟ್ಟರು. ಕೊಹ್ಲಿ 59 ಎಸೆತಗಳಲ್ಲಿ 76 ರನ್ ಗಳಿಸಿ ಭಾರತ ಒಟ್ಟು 176 ರನ್ ಗಳಿಸಲು ನೆರವಾದರು. ಇದೇ ವೇಳೆ ರೋಹಿತ್ ಶರ್ಮಾ ಸೂಪರ್ 8 ಹಾಗೂ ಸೆಮಿ ಫೈನಲ್ ಪಂದ್ಯದಲ್ಲಿ ಮಿಂಚಿದ್ದರು. ಈ ಇಬ್ಬರು ದಿಗ್ಗಜರ ನಿವೃತ್ತಿ ಭಾರತ ತಂಡದ ಬಲ ಕುಗ್ಗಿಸಲಿದೆ. ಆದಾಗ್ಯೂ ಹೊಸ ಪೀಳಿಗೆಗೆ ಅವಕಾಶ ಕೊಡುವುದು ಅನಿವಾರ್ಯ.
ಈ ಇಬ್ಬರು ಶ್ರೇಷ್ಠ ಕ್ರಿಕೆಟ್ ಆಟಗಾರರ ನಿವೃತ್ತಿಯ ಹಿನ್ನೆಲೆಯಲ್ಲಿ ಅವರು ಟಿ20 ಕ್ರಿಕೆಟ್ನಲ್ಲಿ ಮಾಡಿರುವ ಸಾಧನೆಗಳ ಕುರಿತ ಸಮಗ್ರ ವಿವರ ಇಲ್ಲಿ ಕೊಡಲಾಗಿದೆ. ಅವರಿಬ್ಬರು ಚುಟುಕು ಮಾದರಿಯಲ್ಲಿ ಮಾಡಿರುವ ರನ್ಗಳು, ರೆಕಾರ್ಡ್ಗಳು ಹಾಗೂ ಸೃಷ್ಟಿಸಿರುವ ಹೊಸ ಮಾದರಿಗಳ ಬಗ್ಗೆ ಗಮನ ಹರಿಸೋಣ.
ವಿರಾಟ್ ಕೊಹ್ಲಿ
4188 ರನ್: ಕೊಹ್ಲಿ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 4188 ರನ್ ಗಳಿಸಿದ್ದಾರೆ. ಇದು ರೋಹಿತ್ ಶರ್ಮಾ ಅವರ 4231 ರನ್ಗಳ ನಂತರ ಎರಡನೇ ಅತಿ ಹೆಚ್ಚು ಸ್ಕೋರ್. ವಿಶೇಷವೆಂದರೆ, ಕೊಹ್ಲಿ ರೋಹಿತ್ಗಿಂತ 34 ಕಡಿಮೆ ಇನ್ನಿಂಗ್ಸ್ಗಳಲ್ಲಿ ಇಷ್ಟು ಸ್ಕೋರ್ ಮಾಡಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಎಲ್ಲಾ ಮೂರು ಅಂತರರಾಷ್ಟ್ರೀಯ ಕ್ರಿಕೆಟ್ ಸ್ವರೂಪಗಳಲ್ಲಿ 4000ಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರ.
48.69 ಸರಾಸರಿ: ಟಿ20ಐನಲ್ಲಿ ಕೊಹ್ಲಿಯ ಸರಾಸರಿ 48.69 ಆಗಿದ್ದು, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ (48.72ಸರಾಸರಿ) ಅವರ ನಂತರದ ಸ್ಥಾನದಲ್ಲಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿ: ಕೊಹ್ಲಿ ಟಿ20ಐ ಮಾದರಿಯಲ್ಲಿ 16 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದು ಸೂರ್ಯಕುಮಾರ್ ಯಾದವ್ ಅವರಿಗಿಂತ ಒಂದು ಪ್ರಶಸ್ತಿ ಮುಂದಿದೆ. 2014, 2016ರ ಟಿ20 ವಿಶ್ವಕಪ್ ಸೇರಿದಂತೆ ಆರು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: Jasprit Bumrah : ಮಗನ ಮುಂದೆ ವಿಶ್ವ ಕಪ್ ಗೆದ್ದಿದ್ದು ದೊಡ್ಡ ಖುಷಿ ಎಂದ ಜಸ್ಪ್ರಿತ್ ಬುಮ್ರಾ
ವಿಶ್ವ ಕಪ್ ರನ್ಗಳು: ಟಿ 20 ವಿಶ್ವಕಪ್ ಇತಿಹಾಸದಲ್ಲಿ ಕೊಹ್ಲಿ 1292 ರನ್ ಗಳಿಸಿದ್ದಾರೆ. ಇದು ಗರಿಷ್ಠ ರನ್. 2014ರ ಆವೃತ್ತಿಯಲ್ಲಿ 319 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. 2022ರ ಆವೃತ್ತಿಯಲ್ಲಿ ಅವರು 296 ರನ್ಗಳ ಸಮೇತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.
Now Virat Kohli has both odi wc trophy, ODI WC POTT and T20 WC trophy, T20 WC POTT pic.twitter.com/rRODwxXrru
— leisha (@katyxkohli17) June 30, 2024
ಗರಿಷ್ಠ ಸರಾಸರಿ: ಟಿ 20 ವಿಶ್ವಕಪ್ನಲ್ಲಿ ಕೊಹ್ಲಿಯ ಸರಾಸರಿ 58.72. ಪಂದ್ಯಾವಳಿಯಲ್ಲಿ 500ಕ್ಕಿಂತಲೂ ಹೆಚ್ಚು ರನ್ ಗಳಿಸಿದ 34 ಆಟಗಾರರಲ್ಲಿ ಇವರು ಅಗ್ರರು. ಅವರು 33 ಇನ್ನಿಂಗ್ಸ್ಗಳಲ್ಲಿ 15 ಬಾರಿ 50+ ರನ್ ಬಾರಿಸಿದ್ದಾರೆ. ರೋಹಿತ್ 13 ಬಾರಿ 50ಕ್ಕಿಂತ ಹೆಚ್ಚು ಸ್ಕೋರ್ ಮಾಡಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿಗಳು: ಟಿ 20 ವಿಶ್ವಕಪ್ ಇತಿಹಾಸದಲ್ಲಿ ಕೊಹ್ಲಿ 8 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಕೊಹ್ಲಿ. ಮಹೇಲಾ ಜಯವರ್ಧನೆ, ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್ ಮತ್ತು ಆಡಮ್ ಜಂಪಾ ಈ ಪಟ್ಟಿಯಲ್ಲಿ ಐದು ಪ್ರಶಸ್ತಿ ಗೆದ್ದಿದ್ದಾರೆ.
ಎರಡು ವಿಶ್ವ ಕಪ್ನ ಉತ್ತಮ ಆಟಗಾರ : ಕೊಹ್ಲಿ ಟಿ20 ವಿಶ್ವ ಕಪ್ನಲ್ಲಿ ಎರಡು ಬಾರಿ ಟೂರ್ನಿಯ ಉತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ.
67.10 ಸರಾಸರಿ: ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯದ ರನ್ ಚೇಸಿಂಗ್ನಲ್ಲಿ 67.10 ಸರಾಸರಿ ಹೊಂದಿದ್ದಾರೆ. ಟಿ 20 ಮಾದರಿಯಲ್ಲಿ ಚೇಸಿಂಗ್ ಮಾಡುವಾಗ ಕನಿಷ್ಠ 500 ರನ್ ಗಳಿಸಿದ ಆಟಗಾರರಲ್ಲಿ ಇದು ಗರಿಷ್ಠ. ಸೂರ್ಯಕುಮಾರ್ ಯಾದವ್ ಮಾತ್ರ ರನ್ ಚೇಸಿಂಗ್ನಲ್ಲಿ 50+ ಸರಾಸರಿ ಹೊಂದಿದ್ದಾರೆ.
42 ಗೆಲುವು: ಕೊಹ್ಲಿ ಆಡಿದ 52 ಟಿ 20 ಪಂದ್ಯಗಳಲ್ಲಿ ಭಾರತವು 42 ಬಾರಿ ಯಶಸ್ವಿಯಾಗಿ ರನ್ ಚೇಸ್ ಮಾಡಿದೆ. ಕೊಹ್ಲಿ 18 ಬಾರಿ ರನ್ ಚೇಸಿಂಗ್ನಲ್ಲಿ ಅಜೇಯರಾಗಿ ಉಳಿದಿದ್ದಾರೆ. ಭಾರತವು ಆ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಅವರು 48 ಇನ್ನಿಂಗ್ಸ್ಗಳಲ್ಲಿ 20 ಬಾರಿ ರನ್ ಚೇಸಿಂಗ್ನಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ನಾಯಕತ್ವದ ಸಾಧನೆ: ತಂಡದ ನಾಯಕನಾಗಿ ಬ್ಯಾಟಿಂಗ್ನಲ್ಲಿ 47.57 ಸರಾಸರಿ ಹೊಂದಿದ್ದ ಕೊಹ್ಲಿ ಸರಾಸರಿ ಕನಿಷ್ಠ 1000 ರನ್ ಗಳಿಸಿದ ಯಾವುದೇ ನಾಯಕನಿಗಿಂತ ಗರಿಷ್ಠ ಸಾಧನೆಯಾಗಿದೆ.
ಅಂಡರ್-19 ವಿಶ್ವಕಪ್ (2008), ಏಕದಿನ ವಿಶ್ವಕಪ್ (2011), ಚಾಂಪಿಯನ್ಸ್ ಟ್ರೋಫಿ (2013) ಮತ್ತು ಟಿ 20 ವಿಶ್ವಕಪ್ (2024) ಸೇರಿದಂತೆ ಎಲ್ಲಾ ನಾಲ್ಕು ಪ್ರಮುಖ ಐಸಿಸಿ ವೈಟ್ ಬಾಲ್ ಕ್ರಿಕೆಟ್ನ ಎಲ್ಲ ಮಾದರಿಯ ಫೈನಲ್ ಆಡಿದ ಏಕೈಕ ಆಟಗಾರ.
ರೋಹಿತ್ ಶರ್ಮಾ
ಅತಿ ಹೆಚ್ಚು ಪಂದ್ಯಗಳು: ರೋಹಿತ್ ಶರ್ಮಾ 159 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಪಟ್ಟಿಯ ಅಗ್ರಸ್ಥಾನಿ. ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್ (145) ಮತ್ತು ಜಾರ್ಜ್ ಡಾಕ್ರೆಲ್ (139) ನಂತರದಲ್ಲಿದ್ದಾರೆ. ಭಾರತದ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ (166) ರೋಹಿತ್ಗಿಂತ ಮುಂದಿದ್ದಾರೆ.
ಟಿ20ಐನಲ್ಲಿ 111 ಗೆಲುವುಗಳು: ರೋಹಿತ್ ಶರ್ಮಾ ಟಿ20ಐನಲ್ಲಿ 111 ಗೆಲುವುಗಳೊಂದಿಗೆ ಅತಿ ಹೆಚ್ಚು ಗೆಲುವು ಸಾಧಿಸಿದ ದಾಖಲೆ ಹೊಂದಿದ್ದಾರೆ. ಶೋಯೆಬ್ ಮಲಿಕ್ 87 ನಂತರದ ಸ್ಥಾನ ಹೊಂದಿದ್ದಾರೆ.
4231 ರನ್: ರೋಹಿತ್ ಟಿ20 ಅಂತಾರಾಷ್ಟ್ರೀಯ ಮಾದರಿಯಲ್ಲಿ 4231 ರನ್ ಬಾರಿಸಿದ್ದಾರೆ. ಅವರು ವಿರಾಟ್ ಕೊಹ್ಲಿ (4188) ಅವರಿಗಿಂತ ಸ್ವಲ್ಪ ಮುಂದಿದ್ದಾರೆ.
ಅತಿ ಹೆಚ್ಚು ಶತಕಗಳು: ಟಿ20ಐನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಗ್ಲೆನ್ ಮ್ಯಾಕ್ಸ್ವೆಲ್ (5) ಅವರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ (4) ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿ ಮತ್ತು ಬಾಬರ್ ಅಜಮ್ (ತಲಾ 39) ನಂತರ ರೋಹಿತ್ 37 ಅರ್ಧಶತಕಗಳನ್ನು ಗಳಿಸಿದ್ದಾರೆ.
ಅತಿ ಹೆಚ್ಚು ಸಿಕ್ಸರ್: ರೋಹಿತ್ ಶರ್ಮಾ ಟಿ20ಐನಲ್ಲಿ 205 ಸಿಕ್ಸರ್ಗಳನ್ನು ಬಾರಿಸಿದ್ದು, ಮಾರ್ಟಿನ್ ಗಪ್ಟಿಲ್ (173) ಅವರಿಗಿಂತ ಮುಂದಿದ್ದಾರೆ.
ದಾಖಲೆಯ ಜೊತೆಯಾಟ: 2024 ರ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಭಾರತ ಮತ್ತು ಅಫಘಾನಿಸ್ಥಾನ ನಡುವಿನ 3ನೇ ಟಿ 20 ಪಂದ್ಯದಲ್ಲಿ ರೋಹಿತ್ ಮತ್ತು ರಿಂಕು ಸಿಂಗ್ ಐದನೇ ವಿಕೆಟ್ಗೆ 190 ರನ್ಗಳ ಜೊತೆಯಾಟ ಆಡಿದ್ದರು.
ನಾಯಕನಾಗಿ 50 ಗೆಲುವುಗಳು: ಟಿ 20 ಪಂದ್ಯಗಳಲ್ಲಿ 50 ಗೆಲುವುಗಳನ್ನು ಸಾಧಿಸಿದ ಮೊದಲ ನಾಯಕ ರೋಹಿತ್, (50 ಗೆಲುವು ಮತ್ತು 12 ಸೋಲು) ಪ್ರಭಾವಶಾಲಿ ಗೆಲುವು-ಸೋಲಿನ ಅನುಪಾತ ಹೊಂದಿದ್ದಾರೆ ಅವರು.
ಅತಿ ಹೆಚ್ಚು ಪಂದ್ಯಗಳು: ಟಿ 20 ವಿಶ್ವಕಪ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (47) ಆಡಿದ ದಾಖಲೆಯನ್ನು ರೋಹಿತ್ ಹೊಂದಿದ್ದಾರೆ. ಶಕೀಬ್ ಅಲ್ ಹಸನ್ (43) ಅವರನ್ನು ಹಿಂದಿಕ್ಕಿದ್ದಾರೆ.
ಹಿರಿಯ ನಾಯಕ: ಹಾಲಿ ವಿಶ್ವ ಕಪ್ನ ಕೊನೇ ಪಂದ್ಯಕ್ಕೆ 37 ವರ್ಷ 60 ದಿನಗಳಾಗಿದ್ದ ರೋಹಿತ್, , ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ಅವರನ್ನು ಹಿಂದಿಕ್ಕಿ ವಿಶ್ವ ಕಪ್ನಲ್ಲಿ ತಂಡವನ್ನು ಮುನ್ನಡೆಸಿದ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಏಕೈಕ ಭಾರತೀಯ: ರೋಹಿತ್ ಶರ್ಮಾ ಎರಡು ಬಾರಿ ಟಿ 20 ವಿಶ್ವಕಪ್ ಗೆದ್ದ ಏಕೈಕ ಭಾರತೀಯ ಆಟಗಾರ. 2007ರಲ್ಲೂ ಅವರು ಭಾರತ ತಂಡದಲ್ಲಿ ಆಡಿದ್ದರು.