Site icon Vistara News

ವಿಸ್ತಾರ ಸಂಪಾದಕೀಯ: ಜಿಡಿಪಿಯಲ್ಲಿ ನಿರೀಕ್ಷೆ ಮೀರಿದ ಬೆಳವಣಿಗೆ ಹರ್ಷದಾಯಕ

GDP Growth

ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP Growth) ಶೇಕಡಾ 8.4ಕ್ಕೆ ಏರಿಕೆಯಾಗಿದೆ ಎಂದು ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಗುರುವಾರ ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.4.3ರಷ್ಟಿತ್ತು. ಹೀಗಾಗಿ ನಿರೀಕ್ಷೆ ಮೀರಿದ ಬೆಳವಣಿಗೆಯಾಗಿದೆ. “2023-24ರ ಮೂರನೇ ತ್ರೈಮಾಸಿಕದಲ್ಲಿ 8.4% ಜಿಡಿಪಿ ಬೆಳವಣಿಗೆಯು ಭಾರತೀಯ ಆರ್ಥಿಕತೆಯ ಶಕ್ತಿ ಮತ್ತು ಅದರ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ತ್ವರಿತ ಆರ್ಥಿಕ ಬೆಳವಣಿಗೆಯನ್ನು ಕಾಣಲು ನಮ್ಮ ಪ್ರಯತ್ನಗಳು ಮುಂದುವರಿಯಲಿದೆ. ಇದು 140 ಕೋಟಿ ಭಾರತೀಯರಿಗೆ ಉತ್ತಮ ಜೀವನವನ್ನು ನಡೆಸಲು, ವಿಕಸಿತ​ ಭಾರತದ ಬೆಳವಣಿಗೆಗೆ ಸಹಾಯ ಮಾಡುತ್ತದೆ” ಎಂದು ಪ್ರಧಾನಿ ಹೇಳಿದ್ದಾರೆ.

2023-24ರ ಮೂರನೇ ತ್ರೈಮಾಸಿಕದಲ್ಲಿ ಸ್ಥಿರ (2011-12) ದರಗಳಲ್ಲಿ ಜಿಡಿಪಿ 43.72 ಲಕ್ಷ ಕೋಟಿ ರೂ.ಗೆ ಅಂದಾಜಿಸಲಾಗಿದೆ. ಇದು 2022-23ರ ಮೂರನೇ ತ್ರೈಮಾಸಿಕದಲ್ಲಿ 40.35 ಲಕ್ಷ ಕೋಟಿ ರೂ ಆಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ 8.4ರಷ್ಟು ಬೆಳವಣಿಗೆಯ ದರವನ್ನು ತೋರಿಸಿದೆ. ವಿಶ್ಲೇಷಕರು ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7ಕ್ಕಿಂತ ಕಡಿಮೆ ಎಂದು ಅಂದಾಜಿಸಿದ್ದರು. ಆದರೆ, ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶವು ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ತೋರಿಸಿದೆ. ನಿರ್ಮಾಣ ಕ್ಷೇತ್ರದ ಎರಡಂಕಿ ಬೆಳವಣಿಗೆ ದರ (ಶೇ.10.7), ಉತ್ಪಾದನಾ ವಲಯದ ಬೆಳವಣಿಗೆ ದರ (ಶೇ.8.5) 2024ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಿದೆ ಎಂದು ಸರಕಾರ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 8.4ರಷ್ಟು ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣವೇ ಈ ಕ್ಷೇತ್ರಗಳಲ್ಲಿನ ಬೆಳವಣಿಗೆಯಾಗಿದೆ. ಹೀಗಾಗಿ, ಈಗ ಪೂರ್ಣ ವರ್ಷದ ಜಿಡಿಪಿ ಬೆಳವಣಿಗೆ ಅಂದಾಜು ಶೇಕಡಾ 7.3ಕ್ಕಿಂತ ಹೆಚ್ಚಾಗುತ್ತದೆ ಎಂದು ಸಾಂಖ್ಯಿಕ ಸಚಿವಾಲಯ ನಿರೀಕ್ಷಿಸಿದೆ. ಇದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಭಾರತದ ಸ್ಥಾನಮಾನವನ್ನು ದೃಢಪಡಿಸಿದೆ.

ಪ್ರತಿ ತ್ರೈಮಾಸಿಕದಲ್ಲೂ ದೇಶದ ಜಿಡಿಪಿಯನ್ನು ಅಂದಾಜಿಸಲಾಗುತ್ತದೆ. ಏರಿಳಿತ ಇರುವುದೇ ಆಗಿರುತ್ತದೆ. ಸಾಮಾನ್ಯವಾಗಿ ಒಂದು ವರ್ಷದಿಂದ ಇನ್ನೊಂದಕ್ಕೆ 1-2ಕ್ಕಿಂತ ಅಧಿಕ ಜಿಡಿಪಿ ವ್ಯತ್ಯಾಸ ಆಗುವುದು ಅಪರೂಪ. ಆದರೆ ಭಾರತದ ಆರ್ಥಿಕ ಕ್ಷೇತ್ರದ ಬೆಳವಣಿಗೆ ಬಹಳಷ್ಟು ವೇಗವಾಗಿದೆ. ಹೀಗಾಗಿ ಕ್ಷಿಪ್ರಗತಿಯ ಜಿಡಿಪಿ ಬೆಳವಣಿಗೆ ಕಾಣಿಸಿದೆ. ಇದನ್ನೇ ಷೇರು ಮಾರುಕಟ್ಟೆಯಲ್ಲೂ ಕಾಣಬಹುದು. ಕಳೆದ ಒಂದು ವರ್ಷದಿಂದ ದೇಶದ ಷೇರು ಮಾರುಕಟ್ಟೆ ಗಣನೀಯವಾಗಿ ಕುಸಿದಿಲ್ಲ. ಆದರೆ ಗಣನೀಯ ಹೆಚ್ಚಳಗಳು ಆಗಿವೆ. ಇದು ದೇಶದ ವಾಣಿಜ್ಯ ವಹಿವಾಟಿನಲ್ಲಿ, ಕೈಗಾರಿಕಾ ವಲಯದ ಮೇಲೆ ಬಂಡವಾಳೋದ್ಯಮಿಗಳು ಹಾಗೂ ಷೇರುದಾರರು ಇಟ್ಟಿರುವ ಭರವಸೆಯನ್ನು ತೋರಿಸುತ್ತದೆ. ಹಣದುಬ್ಬರದ ಕಾಲದಲ್ಲೂ ದೇಶ ತನ್ನ ಜಿಡಿಪಿಯ ಗತಿಯನ್ನು ಕಾಯ್ದುಕೊಂಡಿದೆ. ಇದು ಶ್ಲಾಘನೀಯ. ಜಿಡಿಪಿ ಸತತವಾಗಿ ಏರುತ್ತಿದ್ದಾಗ, ಸಾಮಾನ್ಯ ಮನುಷ್ಯನ ಕೈಗೂ ಸಾಕಷ್ಟು ಹಣದ ಹರಿವು ಇರುತ್ತದೆ. ಹೀಗಾಗಿ ಹಣದುಬ್ಬರದ ದುಷ್ಪರಿಣಾಮ ಅಷ್ಟಾಗಿ ತಟ್ಟುವುದಿಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

ಒಂದು ದೇಶದ ಮಾರುಕಟ್ಟೆಯಲ್ಲಿ ಈ ಪ್ರಮಾಣದ ಬೆಳವಣಿಗೆಯಾಗುವುದು, ಜಿಡಿಪಿ ನಿರಂತರವಾಗಿ ಪ್ರಗತಿ ತೋರಿಸುವುದು ಯಾವಾಗ ಎಂದರೆ, ಆ ದೇಶದ ಮಾರುಕಟ್ಟೆಯಲ್ಲಿ ಒಳಗಿನ ಹಾಗೂ ಹೊರಗಿನ ಹೂಡಿಕೆದಾರರ ವಿಶ್ವಾಸ ಹೆಚ್ಚಿದಾಗ. ಅಂದರೆ ಇಲ್ಲಿ ಒಳ್ಳೆಯ ಹೂಡಿಕೆ ಮಾಡಬಹುದು, ಸುರಕ್ಷಿತ ವಾತಾವರಣವಿದೆ, ಇಲ್ಲಿ ಪ್ರಗತಿಯ ಸಾಧ್ಯತೆಯಿದೆ ಎಂದು ತೋರಿದಾಗ ಮಾತ್ರ ಅಂಥಲ್ಲಿ ಹಣ ಹೂಡಲಾಗುತ್ತದೆ. ಇಂತಹ ಆತ್ಮವಿಶ್ವಾಸದ ಪರಿಣಾಮವಾಗಿಯೇ ದೇಶದ ಜಿಡಿಪಿ ಏರಿಕೆಯಾಗಿದೆ ಹಾಗೂ ಈಕ್ವಿಟಿ ಮಾರುಕಟ್ಟೆ ಉತ್ತುಂಗ ಮುಟ್ಟಿದೆ. ನಾವು ವಿಶ್ವದ ದೊಡ್ಡ ದೇಶಗಳನ್ನು ಮಿತ್ರರನ್ನಾಗಿಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳನ್ನು ನಮ್ಮ ದೇಶದ ಮಾರುಕಟ್ಟೆಗೆ ಬೇಕಾದಂತೆ ಕುಣಿಸುತ್ತಿದ್ದೇವೆ. ನಮ್ಮ ಜನಸಂಖ್ಯಾ ಬಂಡವಾಳ, ದುಡಿಯುವ ವರ್ಗ ನಮ್ಮ ಮಾರುಕಟ್ಟೆಗೆ ಪೂರಕವಾಗಿದೆ. ಇಲ್ಲಿನ ಪ್ರತಿಭೆಗಳು ಯುಎಸ್‌, ಯುಕೆಯ ಆರ್ಥಿಕತೆಗಳನ್ನು ಕಟ್ಟುತ್ತಿವೆ. ಜಿಡಿಪಿ ಏರಿಕೆಯ ಪರಿಣಾಮವು, ಪ್ರಧಾನಿಯವರು ಹೇಳಿದಂತೆ ನಮ್ಮ ಜನತೆಯ ಬಡತನದ ತ್ವರಿತ ನಿರ್ಮೂಲನೆ ಮತ್ತು ಬದುಕಿನ ಸ್ಥಿತಿಗತಿ ಸುಧಾರಣೆಗೂ ಮೂಲವಾಗಬೇಕು. ಆಗ ಜಿಡಿಪಿ ಬೆಳವಣಿಗೆಗೆ ಹೆಚ್ಚಿನ ಅರ್ಥ ಬರುತ್ತದೆ.

Exit mobile version