Site icon Vistara News

Bomb Threat : ಗೃಹ ಸಚಿವಾಲಯಕ್ಕೆ ಬಾಂಬ್ ಬೆದರಿಕೆ; ದೆಹಲಿಯಲ್ಲಿ ಆತಂಕ

Bomb Threat

ನವ ದೆಹಲಿ: ಲೋಕಸಭಾ ಚುನಾವಣೆ ನಡೆಯುತ್ತಿರುವ ಮಧ್ಯೆಯೇ ದೇಶದ ಅಲ್ಲಲ್ಲಿ ಹುಸಿ ಬಾಂಬ್​ ಕರೆಗಳನ್ನು ಸ್ವೀಕರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದಕ್ಕೊಂದು ಮಿತಿಯೇ ಇಲ್ಲದಂತಾಗಿದೆ. ಈ ಹಿಂದೆ ದೆಹಲಿ ಶಾಲೆಗಳು, ನಂತರ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ ಬಂದಿದ್ದವು. ಇದೀಗ ಈಗ ಸಚಿವ ಅಮಿತ್ ಶಾ ಅವರ ನಿಯಂತ್ರಣದಲ್ಲಿರುವ ಗೃಹ ಸಚಿವಾಲಯವನ್ನು ಸ್ಫೋಟಿಸುವುದಾಗಿ ಮೇಲ್ ಬೆದರಿಕೆ (Bomb Threat ) ಬಂದಿದೆ. ಇದು ಕೆಲವು ಕ್ಷಣ ಆತಂಕಕ್ಕೆ ಕಾರಣವಾಯಿತಾದರೂ ಹುಸಿ ಎಂಬುದು ಪೊಲೀಸರು ಸ್ಪಷ್ಟಪಡಿಸಿದ ಬಳಿಕ ನಿರಾಳತೆ ಮೂಡಿತು.

ಬೆದರಿಕೆ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಇರುವ ನಾರ್ತ್ ಬ್ಲಾಕ್​ನ ಕೆಂಪು ಕಲ್ಲಿನ ಕಟ್ಟಡದಲ್ಲಿ ಪೊಲೀಸರು ಸಮಗ್ರ ಶೋಧ ನಡೆಸಿದ್ದಾರೆ. ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ತನಿಖಾ ತಂಡವೊಂದರ ಮೂಲಗಳು ತಿಳಿಸಿವೆ.

ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಬೆದರಿಕೆ ಮೇಲ್ ಸ್ವೀಕರಿಸಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸರಿಗೆ ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸಂಪೂರ್ಣವಾಗಿ ತನಿಖೆ ನಡೆಸಿ ಹುಸಿ ಬಾಂಬ್​ ಕರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಶೋಧ ಮುಂದವರಿಸಿದ್ದಾರೆ.

ಇದನ್ನೂ ಓದಿ: WhatsApp Update: ವಾಟ್ಸ್ ಆಪ್ ಬಳಕೆದಾರರಿಗೆ ಸಂತಸದ ಸುದ್ದಿ; ಮೆಸೆಜ್‌ಗೆ ಸಂಬಂಧಿಸಿ ಮಹತ್ವದ ಅಪ್‌ಡೇಟ್‌!

ಈ ತಿಂಗಳ ಆರಂಭದಲ್ಲಿ ದೆಹಲಿ-ಎನ್​ಸಿಆರ್​ನ ಸುಮಾರು 150 ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ ಇಮೇಲ್​​ಗಳನ್ನು ಕಳುಹಿಸಲಾಗಿತ್ತು. ಹಂಗೇರಿಯ ರಾಜಧಾನಿ ಬುಡಾಪೆಸ್ಟ್​​ನಿಂದ ಕಳುಹಿಸಲಾಗಿದೆ ಎಂದು ಶಂಕಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ದೆಹಲಿ ಪೊಲೀಸರು ಶೀಘ್ರದಲ್ಲೇ ಹಂಗೇರಿಯಲ್ಲಿರುವ ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಲಾ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಹೇಳಲಾಗಿತ್ತು. ಭಯಭೀತರಾದ ಶಾಲಾ ಮಕ್ಕಳ ಪೋಷಕರು ಮೇ 1 ರಂದು ತಮ್ಮ ಮಕ್ಕಳನ್ನು ಕರೆದೊಯ್ಯಲು ಏಕಾಏಕಿ ಧಾವಿಸಿದ್ದರು. ಇದು ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು. ಶಾಲೆಗಳಲ್ಲಿ ಆಕ್ಷೇಪಾರ್ಹ ಏನೂ ಕಂಡುಬರದ ಕಾರಣ ಇದನ್ನು ನಂತರ ಹುಸಿ ಎಂದು ಘೋಷಿಸಲಾಗಿತ್ತು.

Exit mobile version