Site icon Vistara News

ಹಿಂದು ಧರ್ಮದ ಆಶಯದಂತೆ ಕಾಂಗ್ರೆಸ್‌ ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತು ಎಂದ ಪ್ರಿಯಾಂಕಾ ವಾದ್ರಾ!

Priyanka Vadra

How can Congress be anti-Hindu? Priyanka Vadra junks BJP's charge, Mentions Mahatma Gandhi's Hey Ram

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಧರ್ಮ, ಜಾತಿ, ರಾಮಮಂದಿರ, ಮೀಸಲಾತಿ ಸೇರಿ ಹತ್ತಾರು ವಿಷಯಗಳು ಮುನ್ನೆಲೆಗೆ ಬಂದಿವೆ. ಅದರಲ್ಲೂ, ಕಾಂಗ್ರೆಸ್‌ ಹಿಂದು ವಿರೋಧಿ ಎಂಬುದಾಗಿ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ (Priyanka Vadra) ತಿರುಗೇಟು ನೀಡಿದ್ದಾರೆ. “ಮಹಾತ್ಮ ಗಾಂಧೀಜಿ (Mahatma Gandhi) ಅವರು ಕೊನೆಯುಸಿರೆಳೆಯುವ ಮೊದಲೂ ಹೇ ರಾಮ್‌ ಎಂದಿದ್ದರು. ಕಾಂಗ್ರೆಸ್‌ ಹೇಗೆ ಹಿಂದು ವಿರೋಧಿಯಾಗುತ್ತದೆ? ಹಾಗೆಯೇ, ಹಿಂದು ಧರ್ಮದ ಆಶಯಗಳಂತೆ ಸ್ವಾತಂತ್ರ್ಯ ಹೋರಾಟ ಮಾಡಲಾಗಿದೆ” ಎಂದಿದ್ದಾರೆ.

ಇಂಡಿಯಾ ಟುಡೇಗೆ ಸಂದರ್ಶನ ನೀಡಿದ ವೇಳೆ ಅವರು ಈ ರೀತಿಯ ಪ್ರಸ್ತಾಪ ಮಾಡಿದ್ದಾರೆ. “ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್‌ ಹಿಂದು ವಿರೋಧಿ ಎಂಬಂತೆ ಬ್ರ್ಯಾಂಡ್‌ ಮಾಡಲಾಗುತ್ತಿದೆ. ಅಷ್ಟಕ್ಕೂ ನಮ್ಮ ಪಕ್ಷದ ದೊಡ್ಡ ನಾಯಕ ಯಾರು? ಮಹಾತ್ಮ ಗಾಂಧೀಜಿ ಅವರು ನಮ್ಮ ಪಕ್ಷದ ಧುರೀಣರು. ಸತ್ಯ ಹಾಗೂ ಅಹಿಂಸೆಯ ಆಧಾರದ ಮೇಲೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯಿತು. ಸತ್ಯಮೇವ ಜಯತೆ ಎಂಬ ತತ್ವದಂತೆ ಹೋರಾಟ ಮಾಡಲಾಯಿತು. ಹಿಂದು ಧರ್ಮದ ಬೋಧನೆ, ಆಶಯಗಳಂತೆ ಹೋರಾಟ ಮಾಡಲಾಯಿತು” ಎಂದು ಹೇಳಿದರು.

“ಸ್ವಾತಂತ್ರ್ಯ ಹೋರಾಟದ ವೇಳೆ ದೇಶಕ್ಕಾಗಿ ಎಲ್ಲರೂ ತ್ಯಾಗ ಮಾಡಿದರು. ಜವಾಹರ ಲಾಲ್‌ ನೆಹರು ಸೇರಿ ಹಲವು ನಾಯಕರು 13-14 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಮಹಾತ್ಮ ಗಾಂಧೀಜಿ ಅವರಿಗೆ ಗುಂಡು ತಗುಲಿ, ಅವರು ಇನ್ನೇನು ಪ್ರಾಣ ಬಿಡಬೇಕು ಎನ್ನುವ ಮೊದಲು, ಅವರು ಹೇ ರಾಮ್‌ ಎಂದು ಹೇಳಿದ್ದರು. ಇಷ್ಟೆಲ್ಲ ಇರುವಾಗ ಕಾಂಗ್ರೆಸ್‌ ಹೇಗೆ ಹಿಂದು ವಿರೋಧಿಯಾಗುತ್ತದೆ? ಖಂಡಿತವಾಗಿಯೂ ನಾವು ಹಿಂದು ವಿರೋಧಿಗಳು ಅಲ್ಲ. ರಾಹುಲ್‌ ಗಾಂಧಿ ಅವರು ಬೇರೆಯವರಿಗಿಂತ ಹಿಂದುತ್ವವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ” ಎಂದು ಸಂದರ್ಶನದ ವೇಳೆ ಪ್ರಿಯಾಂಕಾ ವಾದ್ರಾ ಸ್ಪಷ್ಟಪಡಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ತೆರಳದಿರುವ ಕುರಿತು ಬಿಜೆಪಿ ಆರೋಪಗಳ ಬಗೆಗಿನ ಪ್ರಶ್ನೆಗೂ ಪ್ರಿಯಾಂಕಾ ವಾದ್ರಾ ಉತ್ತರಿಸಿದರು. “ಬಿಜೆಪಿಯು ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆಯಿತು. ಇದಾದ ಬಳಿಕ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳಲಾಯಿತು. ಹಾಗಾಗಿ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಹೋಗದಿರುವುದು ತಪ್ಪು ನಿರ್ಧಾರ ಎಂಬುದಾಗಿ ಹೇಳಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. “ದೇಶದಲ್ಲಿ ಧರ್ಮ ಸೇರಿ ಹಲವು ಸೂಕ್ಷ್ಮ ವಿಚಾರಗಳನ್ನು ಬಿಜೆಪಿ, ನರೇಂದ್ರ ಮೋದಿ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಧರ್ಮರಹಿತವಾಗಿ ಎಲ್ಲರಿಗೂ ಯೋಜನೆಗಳನ್ನು ಕಲ್ಪಿಸುವುದು ಕಾಂಗ್ರೆಸ್‌ ಗ್ಯಾರಂಟಿಯಾಗಿದೆ” ಎಂದರು.

ಇದನ್ನೂ ಓದಿ: Kangana Ranaut: ಚುನಾವಣೆಯಲ್ಲಿ ಗೆದ್ದರೆ ನಟನೆಗೆ ವಿದಾಯ; ನಟಿ ಕಂಗನಾ ರಣಾವತ್‌ ಘೋಷಣೆ

Exit mobile version