Site icon Vistara News

Bharat Rice: ಭಾರತ್ ಅಕ್ಕಿಗೆ ಭರ್ಜರಿ ಬೇಡಿಕೆ; ಖರೀದಿಗೆ ಮುಗಿಬಿದ್ದ ಜನ, ಎಲ್ಲೆಲ್ಲಿ ಸಿಗುತ್ತೆ?

Bharat rice 2

ಬೆಂಗಳೂರು: ಆಹಾರ ಸಾಮಗ್ರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ತುಸು ಪರಿಹಾರ ನೀಡಲು ರಿಯಾಯಿತಿ ದರದಲ್ಲಿ ಗುಣಮಟ್ಟದ ಅಕ್ಕಿ, ಗೋಧಿ ಹಿಟ್ಟು, ಬೇಳೆ ಕಾಳು ವಿತರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಭಾರತ್‌ ಬ್ರ್ಯಾಂಡ್‌ನಲ್ಲಿ ಅಕ್ಕಿ ಮಾರಾಟಕ್ಕೆ ಮಂಗಳವಾರ ಚಾಲನೆ ನೀಡಲಾಗಿತ್ತು. ಇದರಿಂದ ದೇಶದ ಎಲ್ಲೆಡೆ ಭಾರತ್‌ ಅಕ್ಕಿಗೆ (Bharat Rice) ಭಾರಿ ಬೇಡಿಕೆ ಉಂಟಾಗಿದ್ದು, ರಾಜ್ಯದಲ್ಲೂ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡುಬಂದಿದೆ.

ಕೋಲಾರದಲ್ಲಿ ಭಾರತ್‌ ಅಕ್ಕಿ ಖರೀದಿಗಾಗಿ ನಿಂತಿರುವ ಜನರು.

‘ಭಾರತ್‌’ ಅಕ್ಕಿ 5 ಕೆ.ಜಿ, 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ಮಾರಾಟವಾಗುತ್ತಿದ್ದು, ಪ್ರತಿ ಕೆ.ಜಿ.ಗೆ 29 ರೂ. ನಿಗದಿ ಪಡಿಸಲಾಗಿದೆ. ಕೋಲಾರದಲ್ಲಿ ಬುಧವಾರ ಭಾರತ್ ಅಕ್ಕಿಗಾಗಿ ಜನರು ಮುಗಿಬಿದ್ದದ್ದು ಕಂಡುಬಂತು. ಹತ್ತು ಕೆ.ಜಿ. ಬ್ಯಾಗ್‌ಗೆ 290 ರೂ ಹಣ ಕೊಟ್ಟು ಜನರು ಭಾರತ್ ಅಕ್ಕಿ ಖರೀದಿಸಿದರು.

ಇದನ್ನೂ ಓದಿ | Bharat Dal : 60 ರೂ.ಗೆ ಮೋದಿಯ ಭಾರತ್​ ದಾಲ್​; ಖರೀದಿ ಮಾಡುವುದು ಹೇಗೆ?

ಗ್ರಾಹಕರಿಗೆ ರಿಯಾಯಿತಿ ದರದ ಭಾರತ್‌ ಅಕ್ಕಿ ವಿತರಣೆ ಮಾಡಲಾಯಿತು.

ಕೋಲಾರ ನಗರದಲ್ಲಿ ಮೊದಲ ಹಂತದಲ್ಲಿ 10 ಕೆ.ಜಿ.ಯ ಸಾವಿರ ಬ್ಯಾಗ್‌ಗಳು ಮಾರಾಟವಾಗಿವೆ. ನಾಳೆಯಿಂದ ಭಾರತ್‌ ಬ್ರ್ಯಾಂಡ್‌ನ ಗೋಧಿ ಹಿಟ್ಟು, ಬೇಳೆ ಕಾಳು ರಿಯಾಯಿತಿ ದರದಲ್ಲಿ ಸಿಗಲಿವೆ. ಇದು ಮೋದಿ ಸರ್ಕಾರದ ಮಹತ್ವದ ಕೊಡುಗೆ. ಈ ಭಾರತ್ ಅಕ್ಕಿ ವಿತರಣೆಯಲ್ಲಿ ಯಾವುದೇ ರಾಜಕೀಯ, ಭೇದ ಭಾವ ಇಲ್ಲ. ಸಮಸ್ತ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕೋಲಾರದ ಬಿಜೆಪಿ ಮುಖಂಡ ಓಂ ಶಕ್ತಿ ಚಲಪತಿ ತಿಳಿಸಿದ್ದಾರೆ.

ರಿಯಾಯಿತಿ ದರದಲ್ಲಿ ಭಾರತ್‌ ಅಟ್ಟಾ, ಬೇಳೆ ಮಾರಾಟ

ಭಾರತ್‌ ಅಕ್ಕಿಯನ್ನು ಪ್ರತಿ ಕೆ.ಜಿ. 29 ರೂ.ಗಳಿಗೆ ಮಾರಾಟ ಮಾಡುತ್ತಿದ್ದರೆ, ಭಾರತ್‌ ಅಟ್ಟಾ (ಗೋಧಿ ಹಿಟ್ಟು) ಪ್ರತಿ ಕೆ.ಜಿ 27.5 ರೂ., ಭಾರತ್‌ ದಾಲ್‌(ಕಡಲೆ ಬೇಳೆ) 60 ರೂ.ಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕಡಲೆ ಬೇಳೆಯನ್ನು 1 ಕೆ.ಜಿ ಪ್ಯಾಕ್​ಗೆ ಪ್ರತಿ ಕೆ.ಜಿ.ಗೆ 60 ರೂ., 30 ಕೆ.ಜಿಯ ಪ್ಯಾಕ್​ಗೆ ಪ್ರತಿ ಕೆ.ಜಿ.ಗೆ 55 ರೂ.ಗಳ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಎಲ್ಲೆಲ್ಲಿ ಭಾರತ್‌ ಅಕ್ಕಿ ಸಿಗಲಿದೆ?

ಮೊದಲ ಹಂತದಲ್ಲಿ ಭಾರತೀಯ ಆಹಾರ ನಿಗಮವು (Food Corporation of India – FCI – ಎಫ್‌ಸಿಐ) ಎರಡು ಸಹಕಾರಿ ಸಂಸ್ಥೆಗಳಾದ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ (NCCF) ಹಾಗೂ ಚಿಲ್ಲರೆ ಸರಪಳಿ ಕೇಂದ್ರೀಯ ಭಂಡಾರ್‌ ನಿರ್ವಹಿಸುವ ಮಳಿಗೆಗಳಿಗೆ 5 ಲಕ್ಷ ಟನ್ ಅಕ್ಕಿಯನ್ನು ನೀಡುತ್ತದೆ.

ಈ ಏಜೆನ್ಸಿಗಳು ಅಕ್ಕಿಯನ್ನು 5 ಕೆಜಿ ಮತ್ತು 10 ಕೆಜಿಗಳಲ್ಲಿ ಪ್ಯಾಕ್ ಮಾಡುತ್ತವೆ ಮತ್ತು “ಭಾರತ್” ಬ್ರಾಂಡ್‌ನ ಅಡಿಯಲ್ಲಿ ತಮ್ಮ ಔಟ್‌ಲೆಟ್‌ಗಳ ಮೂಲಕ ಚಿಲ್ಲರೆ ಮಾರಾಟ ಮಾಡುತ್ತವೆ. ಅಕ್ಕಿಯನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಮಾರಾಟ ಮಾಡಲಾಗುತ್ತದೆ.

ಇದನ್ನೂ ಓದಿ | Bharat Atta: ಕೇಂದ್ರದಿಂದ 27 ರೂ.ಗೆ ‘ಭಾರತ್’‌ ಗೋಧಿ ಹಿಟ್ಟು ಮಾರಾಟ; ಹೀಗೆ ಖರೀದಿಸಿ

ಇದಲ್ಲದೆ ಸೆಂಟ್ರಲ್ ಸ್ಟೋರ್‌ಗಳಲ್ಲಿಯೂ ಭಾರತ್ ರೈಸ್ ಲಭ್ಯವಿದೆ. ಸರ್ಕಾರ ಮೊಬೈಲ್ ವ್ಯಾನ್ ಮೂಲಕವೂ ಮಾರಾಟ ಮಾಡುತ್ತಿದೆ. ಸಹಕಾರ ಸಂಸ್ಥೆಗಳು ಮಾತ್ರವಲ್ಲದೆ ಭಾರತ್ ಬ್ರ್ಯಾಂಡ್‌ನ ಗೋಧಿ ಹಿಟ್ಟು 2000 ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ. ಮದರ್ ಡೈರಿ, ಸಫಲ್ ಮುಂತಾದ ಮಳಿಗೆಗಳಿಂದಲೂ ಇದನ್ನು ಖರೀದಿಸಬಹುದು.

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದೇ?

ಭಾರತ್‌ ದಾಲ್‌ ಮತ್ತು ಗೋಧಿ ಹಿಟ್ಟು ಈಗಾಗಲೇ ಆನ್‌ಲೈನ್‌ ಸ್ಟೋರ್‌ಗಳಲ್ಲಿ ಸಿಗುತ್ತಿದೆ. ಆದರೆ, ಪ್ರಸ್ತುತ ಭಾರತ್‌ ಅಕ್ಕಿ ಮಾತ್ರ ಆನ್‌ಲೈನ್ ಮಾರಾಟ ಸೌಲಭ್ಯವಿಲ್ಲ. ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ಸರ್ಕಾರ ಶೀಘ್ರದಲ್ಲೇ ರಿಲಯನ್ಸ್‌ ಜಿಯೋ ಮಾರ್ಟ್, ಫ್ಲಿಪ್‌ಕಾರ್ಟ್‌, ಬಿಗ್‌ ಬಾಸ್ಕೆಟ್‌ ಸೇರಿ ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಲಿದೆ.

Exit mobile version