ಬೆಂಗಳೂರು : ಅಖಂಡ ಆಂಧ್ರಪ್ರದೇಶವನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶವವೆಂದು ಮರು ವಿಂಗಡಣೆ ಮಾಡುವ ಕಾಯ್ದೆ, 2014 ರ ಪ್ರಕಾರ ಮುತ್ತಿನ ನಗರವಾಗಿರುವ ಹೈದರಾಬಾದ್ (Hyderabad City), ಭಾನುವಾರದಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಜಂಟಿ ರಾಜಧಾನಿಯಾಗಿರುವುದಿಲ್ಲ. ಜೂನ್ 2 ರಿಂದ ಹೈದರಾಬಾದ್ ಕೇವಲ ತೆಲಂಗಾಣದ ರಾಜಧಾನಿಯಾಗಿರಲಿದೆ.
2014ರಲ್ಲಿ ಅವಿಭಜಿತ ಆಂಧ್ರಪ್ರದೇಶದ ವಿಭಜನೆಯಾದಾಗ ಹೈದರಾಬಾದ್ ಅನ್ನು 10 ವರ್ಷಗಳ ಕಾಲ ಎರಡು ರಾಜ್ಯಗಳ ರಾಜಧಾನಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಅಂತೆಯೇ ತೆಲಂಗಾಣ ಜೂನ್ 2, 2014 ರಂದು ಅಸ್ತಿತ್ವಕ್ಕೆ ಬಂದಿತ್ತು.
ನಿಗದಿತ ದಿನದಂದು (ಜೂನ್ 2ರಂದು) ಅಸ್ತಿತ್ವದಲ್ಲಿರುವ ಆಂಧ್ರಪ್ರದೇಶದ ಹೈದರಾಬಾದ್, ಹತ್ತು ವರ್ಷಗಳ ಕಾಲ ಮೀರದೇ ತೆಲಂಗಾಣ ರಾಜ್ಯ ಮತ್ತು ಆಂಧ್ರಪ್ರದೇಶ ರಾಜ್ಯದ ಸಾಮಾನ್ಯ ರಾಜಧಾನಿಯಾಗಲಿದೆ” ಎಂದು ಆಂಧ್ರಪ್ರದೇಶ ಮರುವಿಂಗಡಣೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
“ಉಪ-ವಿಭಾಗ (1) ರಲ್ಲಿ ಉಲ್ಲೇಖಿಸಲಾದ ಅವಧಿ ಮುಗಿದ ನಂತರ, ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿಯಾಗಲಿದೆ ಮತ್ತು ಆಂಧ್ರಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿ ಇರುತ್ತದೆ” ಎಂದು ಅದು ಹೇಳಿದೆ. ಅಮರಾವತಿ ನಗರವನ್ನು ಆಂಧ್ರಪ್ರದೇಶ ತನ್ನ ರಾಜಧಾನಿಯಾಗಿ ಆಯ್ಕೆ ಮಾಡಿದೆ.
ಫೆಬ್ರವರಿ 2014ರಲ್ಲಿ ಸಂಸತ್ತಿನಲ್ಲಿ ಆಂಧ್ರಪ್ರದೇಶ ಮರುಸಂಘಟನೆ ಮಸೂದೆಯನ್ನು ಅಂಗೀಕರಿಸಲಾಗಿತ್ತು. ನಂತರ ಜೂನ್ 2, 2014 ರಂದು ತೆಲಂಗಾಣ ರಚನೆಯು ದಶಕಗಳ ಬೇಡಿಕೆಯ ಈಡೇರಿಕೆಯಾಗಿತ್ತು. ಆಂಧ್ರಪ್ರದೇಶದ ಆಡಳಿತಕ್ಕಾಗಿ 10 ವರ್ಷಗಳ ಅವಧಿಗೆ ನೀಡಲಾದ ಹೈದರಾಬಾದ್ನ ಲೇಕ್ ವ್ಯೂ ಸರ್ಕಾರಿ ಅತಿಥಿ ಗೃಹದಂತಹ ಕಟ್ಟಡಗಳನ್ನು ಜೂನ್ 2 ರ ನಂತರ ಸ್ವಾಧೀನಪಡಿಸಿಕೊಳ್ಳುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕಳೆದ ತಿಂಗಳು ಅಧಿಕಾರಿಗಳಿಗೆ ತಿಳಿಸಿದ್ದರು.
ಇದನ್ನೂ ಓದಿ: Lok Sabha Election 2024: ಮತ ಎಣಿಕೆಗೆ 1 ದಿನವಷ್ಟೇ ಬಾಕಿ; ಚುನಾವಣಾ ಆಯೋಗದ ಕದ ತಟ್ಟಿದ ಎನ್‌ಡಿಎ, ʼಇಂಡಿಯಾʼ ಮೈತ್ರಿಕೂಟ
ಪ್ರತ್ಯೇಕಗೊಂಡು ಹತ್ತು ವರ್ಷಗಳ ನಂತರವೂ, ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಆಸ್ತಿಗಳ ವಿಭಜನೆಯಂತಹ ಹಲವಾರು ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ತೆಲಂಗಾಣ ಸರ್ಕಾರವು ಕ್ಯಾಬಿನೆಟ್ ಸಭೆಯಲ್ಲಿ ವಿಭಜನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಪ್ರಯತ್ನಿಸಿತ್ತು. ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯನ್ಮಾನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಅದಕ್ಕೆ ಅನುಮೋದನೆ ನೀಡಿಲ್ಲ.