ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಇತ್ತೀಚೆಗೆ ಉಕ್ರೇನ್ ವಾಯುಪಡೆ ತಾನು ರಷ್ಯಾದ ಕಿಂಜಾಲ್ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಅಮೆರಿಕಾ ನಿರ್ಮಿತ ಪ್ಯಾಟ್ರಿಯಟ್ ಏರ್ ಡಿಫೆನ್ಸ್ ಕ್ಷಿಪಣಿ ವ್ಯವಸ್ಥೆಯನ್ನು ಬಳಸಿ ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡಿದೆ. ಉಕ್ರೇನಿನ ಹೇಳಿಕೆಯನ್ನು ಪುಷ್ಟೀಕರಿಸಲು ಯಾವುದೇ ಪುರಾವೆಗಳು ಲಭ್ಯವಿಲ್ಲದಿದ್ದರೂ, ಈ ಘಟನೆ ರಷ್ಯನ್ ವಾಯುಪಡೆಯ ಬಾಂಬರ್ ಯುದ್ಧ ವಿಮಾನಗಳೆದುರು ನಲುಗುತ್ತಿದ್ದ ಉಕ್ರೇನ್ ಜನರು ಮತ್ತು ಸೇನೆಯ ನೈತಿಕ ಸ್ಥೈರ್ಯವನ್ನು ಸಾಕಷ್ಟು ಹೆಚ್ಚಿಸಿದೆ.
ಕಿಂಜಾಲ್ ಕ್ಷಿಪಣಿ: ವೇಗ ಮತ್ತು ಬಹುಮುಖತೆ
ರಷ್ಯಾ ನಿರ್ಮಿತ ಕಿಂಜಾಲ್‌ನಂತಹ ಕ್ಷಿಪಣಿಗಳು ಶಬ್ದದ ವೇಗಕ್ಕಿಂತ ಹತ್ತು ಪಟ್ಟು ಹೆಚ್ಚು ವೇಗದಲ್ಲಿ, ಅಂದರೆ ಪ್ರತಿ ಗಂಟೆಗೆ 8,000 ಮೈಲಿ (12,875 ಕಿಲೋಮೀಟರ್) ವೇಗದಲ್ಲಿ ಚಲಿಸಬಲ್ಲವಾಗಿದ್ದು, ಮುಂದಿನ ತಲೆಮಾರಿನ ಆಯುಧಗಳು ಎಂದು ಪರಿಗಣಿಸಲಾಗಿದೆ. ಅಮೆರಿಕಾ ವಾಯುಪಡೆಯ ಟೊಮಾಹಾಕ್ ರಾಕೆಟ್ ಒಂದು ಸಬ್ ಸಾನಿಕ್ ಆಯುಧವಾಗಿದ್ದು, ಪ್ರತಿ ಗಂಟೆಗೆ ಕೇವಲ 550 ಮೈಲಿ (885 ಕಿಲೋಮೀಟರ್) ಚಲಿಸುತ್ತದೆ.
ಕಿನ್ಜಾಲ್ ಅನ್ನು ಸಾಮಾನ್ಯವಾಗಿ ಮಿಗ್-31ಕೆ ಯುದ್ಧ ವಿಮಾನದಲ್ಲಿ ಕೊಂಡೊಯ್ದು, ದಾಳಿ ನಡೆಸಲಾಗುತ್ತದೆ. ಇದು 1,250 ಮೈಲಿ (2012 ಕಿಲೋಮೀಟರ್) ದೂರದಲ್ಲಿರುವ ಗುರಿಯ ಮೇಲೆ ದಾಳಿ ನಡೆಸಬಲ್ಲದು. ಇವುಗಳ ವೇಗ, ಮಧ್ಯ ದಾರಿಯಲ್ಲಿ ಪಥ ಬದಲಾಯಿಸಬಲ್ಲ ಸಾಮರ್ಥ್ಯ, ಹಾಗೂ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಬಲ್ಲ ಸಾಮರ್ಥ್ಯ ನೆಲದಲ್ಲಿರುವ ಯಾವುದೇ ರೇಡಾರ್‌ಗೂ ಇದನ್ನು ಗುರುತಿಸುವುದು ಕಷ್ಟಕರವಾಗಿಸುತ್ತದೆ. ಅವುಗಳನ್ನು ತಡೆಯುವುದು ಸಾಂಪ್ರದಾಯಿಕ ರಕ್ಷಣಾ ವ್ಯವಸ್ಥೆಗಳಿಗೆ ಬಹುತೇಕ ಅಸಾಧ್ಯವಾಗಿದೆ.
ರಷ್ಯಾದ ಕಿಂಜಾಲ್ ಕ್ಷಿಪಣಿ ಅದರ ಈ ಮೊದಲಿನ ಇಸ್ಕಾಂದರ್ ಕ್ಷಿಪಣಿಯ ರೂಪಾಂತರಿ ಆಯುಧ ಎನ್ನಲಾಗಿದೆ. ರಷ್ಯಾ ಈ ಕ್ಷಿಪಣಿಯನ್ನು ಟಿಯು-22ಎಂ3 ಸ್ಟ್ರಾಟೆಜಿಕ್ ಬಾಂಬರ್ ಹಾಗೂ ಸು-34 ದೀರ್ಘ ವ್ಯಾಪ್ತಿಯ ಯುದ್ಧ ವಿಮಾನಗಳಲ್ಲಿ ಬಳಸುವ ಉದ್ದೇಶ ಹೊಂದಿದೆ. ಕಿಂಜಾಲ್ ಕ್ಷಿಪಣಿಯ ಕುರಿತು ಜಾಗರೂಕತೆ ವಹಿಸಬೇಕಾದ ವಿಚಾರವೆಂದರೆ, ಈ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆ ಹಾಗೂ ಸಾಂಪ್ರದಾಯಿಕ ಸಿಡಿತಲೆಗಳೆರಡನ್ನೂ ಹೊತ್ತೊಯ್ಯಬಲ್ಲದು. ಈಗಾಗಲೇ ಉಕ್ರೇನ್ ಯುದ್ಧ ಒಂದು ವರ್ಷ ಪೂರೈಸಿದೆ. ಯುದ್ಧ ಇನ್ನಷ್ಟು ದೀರ್ಘವಾಗಿ ಮುಂದುವರಿದರೆ, ರಷ್ಯಾ ಅಣ್ವಸ್ತ್ರ ಪ್ರಯೋಗಿಸುವ ಭಯ ಉಂಟುಮಾಡುವ ಕಾರ್ಯತಂತ್ರವೂ ಕಣ್ಣ ಮುಂದಿದೆ.
ಹೈಪರ್‌ಸಾನಿಕ್ ಆಯುಧಗಳನ್ನು ಗುರುತಿಸುವ ಮತ್ತು ತಡೆಯುವ ಸವಾಲುಗಳು
ಹೈಪರ್‌ಸಾನಿಕ್ ಆಯುಧಗಳು ಅತ್ಯಂತ ವೇಗವಾಗಿ ಚಲಿಸುವುದರಿಂದ ಮತ್ತು ನೆಲಕ್ಕೆ ಸಮೀಪ ಹಾರಾಡುವುದರಿಂದ ಅವುಗಳನ್ನು ನೆಲದಿಂದ ಗುರುತಿಸುವುದು ಮತ್ತು ತಡೆಯುವುದು ಅತ್ಯಂತ ಕಷ್ಟಕರವಾಗಿದೆ. ಹೈಪರ್‌ಸಾನಿಕ್ ಕ್ಷಿಪಣಿಗಳ ಹಾರಾಟ ಬಹುತೇಕ ಮುಗಿಯುವ ಹಂತಕ್ಕೆ ಬರುವ ತನಕ ನೆಲದಲ್ಲಿರುವ ರೇಡಾರ್‌ಗಳು ಅವುಗಳನ್ನು ಗುರುತಿಸುವುದಿಲ್ಲ. ಆದ್ದರಿಂದ ಅದನ್ನು ತಡೆಯಲು ಏನು ಮಾಡಬಹುದು, ಯಾವ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಕ್ರಿಯಿಸಲು ಸಮಯ ಇರುವುದಿಲ್ಲ.
ಅಮೆರಿಕಾದ ಕಾಂಗ್ರೆಸ್ ವರದಿಗಳ ಪ್ರಕಾರ, ಈಗ ಅಮೆರಿಕಾದ ಬಳಿ ಇರುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಕಮಾಂಡ್ ಮತ್ತು ಕಂಟ್ರೋಲ್ ಮಾದರಿ ಮಾಹಿತಿಗಳನ್ನು ಅರ್ಥೈಸಿಕೊಂಡು, ಅದಕ್ಕೆ ಪ್ರತಿಕ್ರಿಯಿಸಿ, ಬರುತ್ತಿರುವ ಹೈಪರ್‌ಸಾನಿಕ್ ಆಯುಧವನ್ನು ತಡೆಯುವಷ್ಟು ಶಕ್ತವಾಗಿಲ್ಲ.
ಹೈಪರ್‌ಸಾನಿಕ್ ಆಯುಧ
ಹೈಪರ್‌ಸಾನಿಕ್ ಆಯುಧವನ್ನು ಈಗ ಜಗತ್ತಿನಲ್ಲಿ ರಷ್ಯಾ ಮಾತ್ರವೇ ಹೊಂದಿಲ್ಲ. ಚೀನಾ ಸಹ ಈ ಆಯುಧ ವ್ಯವಸ್ಥೆ ಹೊಂದಿದ್ದು, ಆಗಸ್ಟ್ 2021ರಲ್ಲಿ ಅದರ ಆಯುಧ ಜಗತ್ತಿನ ಸುತ್ತ ಹಾರಾಡಿ, ಒಂದು ನಿರ್ದಿಷ್ಟ ಗುರಿಯ ಮೇಲೆ ಭೂಸ್ಪರ್ಶ ನಡೆಸಿತು.
ಜಾಗತಿಕ ಮಿಲಿಟರಿ ಬತ್ತಳಿಕೆಯಲ್ಲಿ ಹೈಪರ್‌ಸಾನಿಕ್ ಕ್ಷಿಪಣಿಗಳು ಹೆಚ್ಚು ಹೆಚ್ಚು ಮಹತ್ವ ಪಡೆಯುತ್ತಿವೆ. ಇದರಿಂದಾಗಿ ಮುಂದಿನ ತಲೆಮಾರಿನ ಈ ಆಯುಧವನ್ನು ಹೊಂದುವ ಸ್ಪರ್ಧೆ ದಿನೇ ದಿನೇ ಹೆಚ್ಚುತ್ತಿದೆ. ಇತ್ತೀಚೆಗೆ ಉಕ್ರೇನಿನಲ್ಲಿ ನಡೆದ ಘಟನೆ ದಾಳಿ ನಡೆಸುವ ಸಾಮರ್ಥ್ಯದ ಜೊತೆ ಜೊತೆಗೆ, ಜಾಗತಿಕ ಸ್ಥಿರತೆ ಮತ್ತು ಸುರಕ್ಷತೆಗಾಗಿ ರಕ್ಷಣಾ ಸಾಮರ್ಥ್ಯವೂ ಅಭಿವೃದ್ಧಿ ಹೊಂದಬೇಕು ಎನ್ನುವ ಕುರಿತು ಸ್ಪಷ್ಟ ಎಚ್ಚರಿಕೆ ನೀಡಿದೆ.