ನವದೆಹಲಿ: ಅಫಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ಗೆ ಐಸಿಸಿ ದಂಡ ವಿಧಿಸಿದೆ. ಟಿ 20 ವಿಶ್ವಕಪ್ 2024ರಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯದ ಸಮಯದಲ್ಲಿ ಅವರು ತೋರಿದ ವರ್ತನೆಗೆ ಈ ದಂಡ ವಿಧಿಸಲಾಗಿದೆ. ತನ್ನ ತಂಡದ ಸಹ ಆಟಗಾರನ ವಿರುದ್ಧವೇ ಮೈದಾನದಲ್ಲೇ ಕೋಪಗೊಂಡಿದ್ದಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಬಾಂಗ್ಲಾದೇಶ ವಿರುದ್ಧದ ಅಫ್ಘಾನಿಸ್ತಾನ ಪಂದ್ಯದ ವೇಳೆ ಈ ತಪ್ಪು ಮಾಡಿದ್ದಾರೆ. ಇನ್ನಿಂಗ್ಸ್ನ ಅಂತಿಮ ಓವರ್ನಲ್ಲಿ ರಶೀದ್ ಖಾನ್ ಮತ್ತು ಕರೀಮ್ ಜನತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಓವರ್ನ ಮೂರನೇ ಎಸೆತದಲ್ಲಿ, ರಶೀದ್ ಖಾನ್ ಕವರ್ ಕಡೆಗೆ ಒಂದು ಶಾಟ್ ಹೊಡೆದರು. ಅವರು ಅದಕ್ಕೆ ಎರಡು ರನ್ ಓಡಿ ಸ್ಟ್ರೈಕ್ ಪಡೆಯಲು ಯತ್ನಿಸಿದರು. ಆದರೆ ಕರೀಂ ಓಡಿರಲಿಲ್ಲ. ಇದಕ್ಕೆ ಕೋಪಗೊಂಡ ಅವರು ಬ್ಯಾಟ್ ಎಸೆದಿದ್ದರು.
ಮೊದಲ ಓಟವನ್ನು ತ್ವರಿತವಾಗಿ ಪೂರ್ಣಗೊಳಿಸಿದ ರಶೀದ್ , ಅವರು ಎರಡನೇ ಓಟಕ್ಕೆ ಮುಂದಾರು. ಆಗಲೇ ಅರ್ಧದಷ್ಟು ಪಿಚ್ ದಾಟಿದ್ದರು. ಆದರೆ ಜನತ್ ಅವರನ್ನು ಹಿಂದಕ್ಕೆ ಕಳುಹಿಸಿದ್ದರು. ಅಫ್ಘಾನ್ ಸೂಪಸ್ಟಾರ್ಗೆ ಇದು ಇಷ್ಟವಾಗಲಿಲ್ಲ. ಅವರು ತಾಳ್ಮೆ ಕಳೆದುಕೊಂಡರು. ಹತಾಶೆಗೊಂಡ ರಶೀದ್ ಖಾನ್ ಕ್ರೀಸ್ಗೆ ಮರಳುವ ಮೊದಲು ತಮ್ಮ ಬ್ಯಾಟ್ ಅನ್ನು ನೆಲದ ಮೇಲೆ ಎಸೆಯುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದರು.
ಜನತ್ ಬ್ಯಾಟ್ ತೆಗೆದುಕೊಂಡು ಅದನ್ನು ತನ್ನ ರಶೀದ್ಗೆ ಕೊಟ್ಟರು. ಆದರೂ ಅವರ ಕೋಪ ತಣ್ಣಗಾಗಿರಲಿಲ್ಲ. ಇದು ಐಸಿಸಿ ನಿಯಮ ಉಲ್ಲಂಘನೆಯಾಗಿದೆ. ಅವರು ತಮ್ಮ ನಡವಳಿಕೆಗಾಗಿ ಅಧಿಕೃತ ಛೀಮಾರಿ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ. ಇದು 24 ತಿಂಗಳ ಅವಧಿಯಲ್ಲಿ ಅವರ ಮೊದಲ ಅಪರಾಧವಾಗಿದೆ.
ರಶೀದ್ ಖಾನ್ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರನ ಮೇಲೆ ಅಥವಾ ಹತ್ತಿರ ಚೆಂಡು ಅಥವಾ ಇತರ ಯಾವುದೇ ಕ್ರಿಕೆಟ್ ಉಪಕರಣಗಳನ್ನು ಅನುಚಿತ ಅಥವಾ ಅಪಾಯಕಾರಿ ರೀತಿಯಲ್ಲಿ ಎಸೆಯುವುದು ಆರ್ಟಿಕಲ್ 2.9 ರಲ್ಲಿ ಉಲ್ಲಂಘನೆಯಾಗಿದೆ.
ಅಫಘಾನಿಸ್ತಾನವನ್ನು 9 ವಿಕೆಟ್ಗಳಿಂದ ಸೋಲಿಸಿ ಫೈನಲ್ಗೇರಿದ ದಕ್ಷಿಣ ಆಫ್ರಿಕಾ ತಂಡ
ಮಾರಕ ಬೌಲಿಂಗ್ ಸಂಘಟಿಸಿದ ದಕ್ಷಿಣ ಆಫ್ರಿಕಾ ತಂಡದ ಇದೇ ಮೊದಲ ಬಾರಿಗೆ ಟಿ20 ವಿಶ್ವ ಕಪ್ನಲ್ಲಿ (T20 World Cup 2024: ) ಸೆಮಿಫೈನಲ್ಗೇರಿದ್ದ ಅಫಘಾನಿಸ್ತಾನ ತಂಡವನ್ನು ಸುಲಭವಾಗಿ 9 ವಿಕೆಟ್ಗಳಿಂದ ಸೋಲಿಸಿದ ಫೈನಲ್ಗೇರಿದೆ. ಈ ಮೂಲಕ 2024ರ ಟಿ20 ವಿಶ್ವ ಕಪ್ನ ಫೈನಲ್ ಹಣಾಹಣಿಗೆ ಸ್ಥಾನ ಭದ್ರ ಮಾಡಿಕೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲಿ ಮಿಂಚಿದ ದಕ್ಷಿಣ ಆಫ್ರಿಕಾ ತಂಡ ಅರ್ಹವಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ. ಇದೇ ವೇಳೆ ಮೊದಲ ಬಾರಿಗೆ ಫೈನಲ್ಗೆ ಪ್ರವೇಶ ಮಾಡಲು ತಮಗಿದ್ದ ಅವಕಾಶವನ್ನು ಅಫಘಾನಿಸ್ತಾನ ತಂಡ ಕಳೆದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿದ್ದ ರಶೀದ್ ಖಾನ್ ಬಳಗ ಪ್ರಮುಖ ವೇದಿಕೆಯಲ್ಲಿ ಬ್ಯಾಟಿಂಗ್ನಲ್ಲಿ ಕಳಾಹೀನ ಪ್ರದರ್ಶನ ನೀಡಿತು.
ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿದ್ದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫಘಾನಿಸ್ತಾನ ತಂಡ 11.5 ಓವರ್ಗಳಲ್ಲಿ ಕೇವಲ 56 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಹರಿಣಗಳ ಪಡೆ 8.5 ಓವರ್ಗಳಲ್ಲಿ 1 ವಿಕೆಟ್ ನಷ್ಟ ಮಾಡಿಕೊಂಡು 60 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಇಂದು ಸಂಜೆ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ತಂಡದ ಪಂದ್ಯದ ಬಳಿಕ ಜೂನ್ 29ರಂದು ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎದುರಾಳಿ ಯಾರು ಎಂಬುದು ನಿರ್ಧಾರವಾಗಲಿದೆ.