Site icon Vistara News

Narendra Modi: ಅಂಬೇಡ್ಕರ್‌ ಇರದಿದ್ದರೆ ಮೀಸಲಾತಿ ಜಾರಿಗೆ ನೆಹರು ಬಿಡುತ್ತಿರಲಿಲ್ಲ ಎಂದ ಮೋದಿ!

Narendra Modi

I Miss A Strong Opposition, It Pains My Heart: Says PM Narendra Modi

ಪಟನಾ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾಂಗ್ರೆಸ್‌ ವಿರುದ್ಧ ಪ್ರತಿ ರ‍್ಯಾಲಿಯಲ್ಲೂ ವಾಗ್ದಾಳಿ, ಆರೋಪ, ಟೀಕೆ, ವ್ಯಂಗ್ಯ ಮಾಡುತ್ತಿದ್ದಾರೆ. ಈಗ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಜವಾಹರ ಲಾಲ್‌ ನೆಹರು (Jawaharlal Nehru) ಅವರನ್ನು ಪ್ರಸ್ತಾಪಿಸಿ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಮೋತಿಹರಿಯಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, “ಅಂಬೇಡ್ಕರ್‌ ಅವರು ಇರದಿದ್ದರೆ ಜವಾಹರ ಲಾಲ್‌ ನೆಹರು ಅವರು ಮೀಸಲಾತಿ ಜಾರಿಗೊಳಿಸಲು ಬಿಡುತ್ತಿರಲಿಲ್ಲ” ಎಂದಿದ್ದಾರೆ.

“ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ (OBC) ಮೀಸಲಾತಿ ನೀಡಲು ಜವಾಹರಲಾಲ್‌ ನೆಹರು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಇದೇ ಕಾರಣಕ್ಕಾಗಿ ಆಗಿನ ಮುಖ್ಯಮಂತ್ರಿಗಳಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿ ಪತ್ರ ಬರೆದಿದ್ದರು. ಹಾಗೊಂದು ವೇಳೆ, ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಇರದಿದ್ದರೆ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ಮೀಸಲಾತಿ ನೀಡಲು ಜವಾಹರ ಲಾಲ್‌ ನೆಹರು ಅವರು ಬಿಡುತ್ತಿರಲಿಲ್ಲ” ಎಂದು ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

“ಕಾಂಗ್ರೆಸ್‌ನಿಂದ ಆಯ್ಕೆಯಾದ ಪ್ರಧಾನಿಗಳು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಯವರಿಗೆ ದ್ರೋಹ ಎಸಗಿದರು. ಇಂದಿರಾ ಗಾಂಧಿ ಆಗಲಿ, ರಾಜೀವ್‌ ಗಾಂಧಿ ಇರಲಿ, ಇವರೆಲ್ಲ ಮೀಸಲಾತಿಯನ್ನು ವಿರೋಧಿಸಿದವರೇ. ಕಾಂಗ್ರೆಸ್‌ನಿಂದ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಯವರಿಗೆ ಎಂದಿಗೂ ಗೌರವ ಸಿಕ್ಕಿಲ್ಲ. ಇಂತಹ ಕಾಂಗ್ರೆಸ್‌ ನಾಯಕರು ಈಗ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸುತ್ತದೆ. ಮೀಸಲಾತಿಯನ್ನು ಕಿತ್ತು ಎಸೆಯಲಾಗುತ್ತಿದೆ ಎಂಬುದಾಗಿ ಸುಳ್ಳು ಹರಡುತ್ತಿದ್ದಾರೆ” ಎಂದು ಹೇಳಿದರು.

“ತುಳಿತಕ್ಕೊಳಗಾದ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಬಿಜೆಪಿಯು ಬದ್ಧವಾಗಿದೆ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯದವರ ಹಕ್ಕುಗಳನ್ನು ಎನ್‌ಡಿಎ ಸರ್ಕಾರವು ರಕ್ಷಿಸುತ್ತಿದೆ. ಆದರೆ, ಇಂಡಿಯಾ ಒಕ್ಕೂಟವು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಹೊರಟಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ಅಂಬೇಡ್ಕರ್‌ ಅವರೂ ವಿರೋಧಿಸಿದ್ದರು. ಆದರೆ, ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ಪಕ್ಷಗಳು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಯವರಿಗೆ ದ್ರೋಹ ಎಸಗುತ್ತಿವೆ” ಎಂದು ತಿಳಿಸಿದರು.

ಇದನ್ನೂ ಓದಿ: ‘ಪುರಿ ಜಗನ್ನಾಥನೇ ಮೋದಿಯ ಭಕ್ತ’ ಹೇಳಿಕೆ; ಪ್ರಾಯಶ್ಚಿತ್ತವಾಗಿ ಸಂಬಿತ್‌ ಪಾತ್ರಾ 3 ದಿನ ಉಪವಾಸ!

Exit mobile version