Site icon Vistara News

Varun Gandhi: ಸಂಸದ ಅಲ್ಲದಿದ್ದರೂ ನಿಮ್ಮ ಮಗ; ಜನಕ್ಕೆ ಟಿಕೆಟ್‌ ವಂಚಿತ ವರುಣ್‌ ಗಾಂಧಿ ಭಾವುಕ ಪತ್ರ!

Varun Gandhi

If Not As MP, Then As Son: Dropped By BJP, Varun Gandhi's Vow To Pilibhit

ನವದೆಹಲಿ: ಒಂದು ಕಾಲದಲ್ಲಿ ಬಿಜೆಪಿಯ ಫೈರ್‌ಬ್ರ್ಯಾಂಡ್‌ ನಾಯಕರಾಗಿದ್ದ ವರುಣ್‌ ಗಾಂಧಿ (Varun Gandhi) ಅವರಿಗೆ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಪಕ್ಷವು ಟಿಕೆಟ್‌ ನಿರಾಕರಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಕಡು ಟೀಕೆ ಮಾಡುತ್ತಿದ್ದ ವರುಣ್‌ ಗಾಂಧಿ ಅವರಿಗೆ ಪಕ್ಷವು ಟಿಕೆಟ್‌ ನೀಡಿಲ್ಲ. ಇದರ ಬೆನ್ನಲ್ಲೇ ಅವರು, ತಮ್ಮ ಪಿಲಿಭಿಟ್‌ ಕ್ಷೇತ್ರದ ಜನರಿಗೆ ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ. “ಸಂಸದನಾಗಿ ಅಲ್ಲದಿದ್ದರೂ ನಾನು ನಿಮ್ಮ ಮಗನಾಗಿ ಇರುತ್ತೇನೆ” ಎಂದು ವರುಣ್‌ ಗಾಂಧಿ ಪತ್ರ ಬರೆದಿದ್ದಾರೆ.

“ಪಿಲಿಭಿಟ್‌ ಲೋಕಸಭೆ ಕ್ಷೇತ್ರದ ಸದಸ್ಯನಾಗಿ ನನ್ನ ಅವಧಿಯು ಮುಗಿಯುತ್ತ ಬಂದಿದೆ. ಆದರೇನಂತೆ, ಮುಂದಿನ ದಿನಗಳಲ್ಲಿ ನಾನು ನಿಮಗೆ ಸಂಸದನಾಗಿ ಇರದಿದ್ದರೂ, ಮಗನಾಗಿ ಇರುತ್ತೇನೆ. ಸಂಸದನಾಗಿ ಪಿಲಿಭಿಟ್‌ ಜನರೊಂದಿಗಿನ ಸಂಪರ್ಕ ಮುಕ್ತಾಯವಾಗಬಹುದು. ಆದರೆ, ಒಬ್ಬ ವ್ಯಕ್ತಿಯಾಗಿ ನನ್ನ ಕೊನೆಯ ಉಸಿರಿರುವವರೆಗೆ ಪಿಲಿಭಿಟ್‌ ಜನರೊಂದಿಗೆ ನಾನು ಇರುತ್ತೇನೆ” ಎಂಬುದಾಗಿ ವರುಣ್‌ ಗಾಂಧಿ ಪತ್ರ ಬರೆದಿದ್ದಾರೆ.

ಸೇವೆ ಮಾಡಿದ ಖುಷಿ ಇದೆ

“ಪಿಲಿಭಿಟ್‌ ಜನರು ಅದ್ಭುತ. ಅವರ ವರ್ತನೆ, ಸರಳ ಜೀವನ, ಉದಾತ್ತ ಚಿಂತನೆಗಳೇ ನನ್ನನ್ನು ಒರೆಗೆ ಹಚ್ಚಿಸುತ್ತವೆ. ಅದರಲ್ಲೂ, ಪಿಲಿಭಿಟ್‌ ಸಂಸದನಾಗಿ ನಾನು ಅವರ ಸೇವೆ ಮಾಡಿರುವ ತೃಪ್ತಿ ಇದೆ. ನನ್ನ ಅವಧಿಯಲ್ಲಿ ಪಿಲಿಭಿಟ್‌ ಕ್ಷೇತ್ರದ ಅಭಿವೃದ್ಧಿಗೆ ಇನ್ನಿಲ್ಲದಂತೆ ಶ್ರಮಿಸಿದ್ದೇನೆ. ನಿಮ್ಮನ್ನೆಲ್ಲ ನಾನು ಪ್ರತಿನಿಧಿಸಿದೆ ಎಂಬ ಸಂಗತಿಯೇ ನನಗೆ ಹೆಚ್ಚು ಖುಷಿ ಕೊಡುತ್ತದೆ. ನನಗೆ ಇದಕ್ಕಿಂತ ಸೌಭಾಗ್ಯ ಇನ್ನೊಂದಿಲ್ಲ” ಎಂದು ಪತ್ರದಲ್ಲಿ ವರುಣ್‌ ಗಾಂಧಿ ಉಲ್ಲೇಖಿಸಿದ್ದಾರೆ.

“ನಾನು ಚುನಾವಣೆ ರಾಜಕೀಯ ಪ್ರವೇಶಿಸಿದ ಬಳಿಕ ಸಾಮಾನ್ಯ ಜನರ ಧ್ವನಿಯಾಗಿ ಕಾರ್ಯನಿರ್ವಹಿಸಿದೆ. ಇಡೀ ಕ್ಷೇತ್ರದ ಏಳಿಗೆಗೆ ಶ್ರಮ ವಹಿಸಿದೆ. ಹತ್ತಾರು ಯೋಜನೆಗಳನ್ನು ಜಾರಿಗೆ ತಂದೆ. ಆದರೆ, ಇನ್ನು ಮುಂದೆ ನಿಮ್ಮ ಜತೆ ನಾನು ಎಂಪಿಯಾಗಿ ಇರುವುದಿಲ್ಲ. ಆದರೆ, ಕೊನೆಯವರೆಗೂ ನಿಮ್ಮ ಮಗನಾಗಿ ಇರುತ್ತೇನೆ. ನಿಮಗಾಗಿ ನನ್ನ ಮನೆಯ ಬಾಗಿಲುಗಳು ಎಂದಿಗೂ ತೆರೆದಿರುತ್ತವೆ. ಈಗ ನಿಮ್ಮ ಆಶೀರ್ವಾದವನ್ನಷ್ಟೇ ನಾನು ಬೇಡುತ್ತಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: Narendra Modi : ಸಂದೇಶ್​ಖಾಲಿ ಸಂತ್ರಸ್ತೆಯನ್ನು ‘ಶಕ್ತಿ ಸ್ವರೂಪ’ ಎಂದು ಕರೆದ ಪ್ರಧಾನಿ ಮೋದಿ

ವರುಣ್‌ ಗಾಂಧಿ ಅವರು ಪಿಲಿಭಿಟ್‌ ಕ್ಷೇತ್ರದಿಂದ 2009 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಇವರು 2014ರಲ್ಲಿ ಸುಲ್ತಾನ್‌ಪುರದಿಂದಲೂ ಸ್ಪರ್ಧಿಸಿ ಜಯ ಕಂಡಿದ್ದರು. 2019ರಲ್ಲಿ ಸುಲ್ತಾನ್‌ಪುರದಲ್ಲಿ ವರುಣ್‌ ಗಾಂಧಿ ಅವರ ತಾಯಿ ಮನೇಕಾ ಗಾಂಧಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಈಗ ಪಿಲಿಭಿಟ್‌ ಕ್ಷೇತ್ರದಲ್ಲಿ ಬಿಜೆಪಿಯು ವರುಣ್‌ ಗಾಂಧಿ ಅವರ ಬದಲು ಜಿತಿನ್‌ ಪ್ರಸಾದ ಅವರಿಗೆ ಟಿಕೆಟ್‌ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version