ಬ್ರಿಜ್‌ಟೌನ್ (ಬಾರ್ಬಡಾಸ್): ಇಂದು ನಡೆಯುವ ಟಿ20 ವಿಶ್ವಕಪ್(T20 World Cup 2024) ಸೂಪರ್-8 ಕದನಕ್ಕೆ ಭಾರತ(IND vs AFG) ಮತ್ತು ಅಫಘಾನಿಸ್ತಾನ ಸಜ್ಜುಗೊಂಡಿದೆ. ಇತ್ತಂಡಗಳ ಈ ಕಾದಾಟ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ರೋಹಿತ್ ಪಡೆ ಲೀಗ್ ಹಂತದಲ್ಲಿ ಅಜೇಯ ಪ್ರದರ್ಶನ ಕಾಯ್ದುಕೊಂಡು ಬಂದರೂ ಅಪಾಯಕಾರಿ ಅಫಘಾನಿಸ್ಥಾನದ ಸವಾಲು ಅಷ್ಟು ಸುಲಭವಲ್ಲ. ಇಂದಿನ ಪಂದ್ಯದ ಹವಾಮಾನ ವರದಿ(Barbados weather report), ಸಂಭಾವ್ಯ ತಂಡದ ಮಾಹಿತಿ ಇಂತಿದೆ.
ಹವಾಮಾನ ವರದಿ
ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರಗೊಂಡರೂ ಕೂಡ ವೆಸ್ಟ್ ಇಂಡೀಸ್ನಲ್ಲಿ ಈ ಪಂದ್ಯ ಹಗಲು ಪಂದ್ಯವಾಗಿರಲಿದೆ. ಹೀಗಾಗಿ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಪಂದ್ಯದ ಪ್ರಮುಖ ಭಾಗ ಬಿಸಿಲಿನ ವಾತಾವರಣದಿಂದಲೇ ಕೂಡಿರಲಿದೆ. ವಿಂಡೀಸ್ನಲ್ಲಿ ಪಂದ್ಯ ಬೆಳಗ್ಗೆ 10.30 ಆರಂಭಗೊಳ್ಳಲಿದೆ. ತಾಪಮಾನವು ಗರಿಷ್ಠ 30 ರಷ್ಟಿರುತ್ತದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಪಿಚ್ ರಿಪೋರ್ಟ್
ಬ್ರಿಡ್ಜ್‌ಟೌನ್ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಇಲ್ಲಿ ದಾಖಲಾದ ಗರಿಷ್ಠ ಮೊತ್ತ 224 ರನ್. 2022ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಂಡೀಸ್ ಈ ಮೊತ್ತವನ್ನು ಪೇರಿಸಿತ್ತು. ಒಟ್ಟು ಇಲ್ಲಿ ಮೂರು ಬಾರಿ ಟಿ20 ಪಂದ್ಯದಲ್ಲಿ 200 ರನ್ ದಾಖಲಾಗಿದೆ. ಇದರಲ್ಲೊಂದು ಈ ಬಾರಿಯ ಟೂರ್ನಿಯಲ್ಲಿ ದಾಖಲಾದದ್ದು. ಇಂಗ್ಲೆಂಡ್ ವಿರುದ್ಧ ಆಸೀಸ್ 201 ರನ್ ಬಾರಿಸಿತ್ತು. ಹೀಗಾಗಿ ನಾಳಿನ ಪಂದ್ಯ ಕೂಡ ಹೈ ಸ್ಕೋರಿಂಗ್ ಎಂದು ನಿರೀಕ್ಷೆ ಮಾಡಬಹುದು.
ಇದನ್ನೂ ಓದಿ SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ
ಟಿ20 ಮುಖಾಮುಖಿ
ಭಾರತ ಮತ್ತು ಅಫಘಾನಿಸ್ತಾನ ಇದುವರೆಗೆ ಒಟ್ಟು 8 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ 7 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಆಫ್ಘಾನ್ ಎಲ್ಲ ಪಂದ್ಯಗಳನ್ನು ಸೋತಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ. ಹಾಗಂತ ಈ ಸವಾಲನ್ನು ಅಷ್ಟು ಹಗುರವಾಗಿ ಕಾಣಬಾರದು. ಏಕೆಂದರೆ ಬಲಿಷ್ಠ ನ್ಯೂಜಿಲ್ಯಾಂಡ್ ತಂಡವನ್ನು ಕೇವಲ 75 ರನ್ಗೆ ಕೆಡವಿ ಹಾಕಿತ್ತು. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿ ತಂಡವನ್ನು ದರ್ಬಲ ಎಂದು ಪರಿಗಣಿಸಬಾರದು.
ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಭಾರತ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಇದುವರೆಗೆ ಕೇವಲ 2 ಟಿ20 ಪಂದ್ಯವನ್ನು ಮಾತ್ರ ಆಡಿದೆ. ಈ ಎರಡೂ ಪಂದ್ಯಗಳಲಿಲ್ಲಯೂ ಟೀಮ್ ಇಂಡಿಯಾ ಸೋಲು ಕಂಡಿತ್ತು. 2010ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳು ಇದಾಗಿತ್ತು. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಅಂದು ಭಾರತ ಸೋಲು ಕಂಡಿತ್ತು. ಅಲ್ಲದೆ ಲೀಗ್ ಹಂತದಲ್ಲೇ ನಿರ್ಗಮಿಸಿತ್ತು.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೀ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್/ಶಿವಂ ದುಬೆ, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಅಫಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೀ), ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್ (ನಾಯಕ), ಕರೀಮ್ ಜನ್ನತ್, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.