ಸೇಂಟ್ ಲೂಸಿಯಾ: ರೋಹಿತ್ ಶರ್ಮಾ ಅವರ (92 ರನ್, 41 ಎಸೆತ, 8 ಸಿಕ್ಸರ್, 7 ಫೋರ್) ಪ್ರಚಂಡ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಭಾರತ ತಂಡ ಟಿ20 ವಿಶ್ವ ಕಪ್ನ 2024ನೇ ಆವೃತ್ತಿಯ ಸೂಪರ್ 8 ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ದ (IND vs AUS) ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 205 ರನ್ ಬಾರಿಸಿದೆ. ಇದು ಹಾಲಿ ವಿಶ್ವ ಕಪ್ನಲ್ಲಿ ತಂಡವೊಂದು ಬಾರಿಸಿದ ಗರಿಷ್ಠ ಸ್ಕೋರ್ ಆಗಿದೆ. ಈ ಸಾಧನೆ ಯನ್ನು ಮೀರಬೇಕಾದರೆ ಆಸ್ಟ್ರೇಲಿಯಾ ತಂಡ ಈ ಗುರಿಯನ್ನು ಬೆನ್ನಟ್ಟಬೇಕಾಗುತ್ತದೆ. ಇದಕ್ಕಿಂತ ಹಿಂದೆ ಬಿ ಗುಂಪಿನ ಲೀಗ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಆಸ್ಟ್ರೇಲಿಯಾ 201 ರನ್ ಬಾರಿಸಿ ಗೆಲುವು ಸಾಧಿಸಿತ್ತು.
ಇಲ್ಲಿನ ಡ್ಯಾರೆನ್ ಸಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 5 ವಿಕೆಟ್ ನಷ್ಟಕ್ಕೆ 205 ರನ್ ಬಾರಿಸಿತು. ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿರುವ ಹೊರತಾಗಿಯೂ ಭಾರತ ತಂಡ ದೊಡ್ಡ ಮೊತ್ತ ಪೇರಿಸಿದೆ.
ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆಘಾತ ಕೊಟ್ಟಿದ್ದು ವಿರಾಟ್ ಕೊಹ್ಲಿ. ಐದು ಎಸೆತಗಳನ್ನು ಎದುರಿಸಿದ ಅವರು ಶೂನ್ಯಕ್ಕೆ ಔಟಾಗಿ ಬೇಸರ ಮೂಡಿಸಿದರು. ಆದರೆ, ಇನ್ನೊಂದು ಬದಿಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ರನ್ ಪೇರಿಸುತ್ತಲೇ ಹೋದರು. ಭಾರತ ಕೇವಲ 29 ಎಸೆತಗಳಲ್ಲಿ 50 ರನ್ ಬಾರಿಸಿದರೆ ಬಳಿಕ ರೋಹಿತ್ ಶರ್ಮಾ 19 ಎಸೆತಕ್ಕೆ ಅರ್ಧ ಶತಕ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಭ್ ಪಂತ್ 14 ಎಸೆತಕ್ಕೆ 15 ರನ್ ಬಾರಿಸಿದರು. ಆದರೆ, ನಂತರ ಆಡಲು ಬಂದ ಸೂರ್ಯಕುಮಾರ್ ಯಾದವ್ ರೋಹಿತ್ ಶರ್ಮಾಗೆ ಉತ್ತಮ ಬೆಂಬಲ ಕೊಟ್ಟರು. ಆದರೆ, ಅವರು 16 ಎಸೆತಕ್ಕೆ 36 ರನ್ ಬಾರಿಸಿ ಔಟಾದರು.
ಸೂರ್ಯ ಔಟಾಗುತ್ತಿದ್ದಂತೆ ಭಾರತದ ಸ್ಕೋರ್ ಗಳಿಕೆ ನಿಧಾನಗೊಂಡಿತು. ಆದಾಗ್ಯೂ ಶಿವಂ ದುಬೆ 1 ಸಿಕ್ಸರ್ ಹಾಗೂ 2 ಫೋರ್ ಸಮೇತ 28 ರನ್ ಬಾರಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಔಟಾಗದೇ 17 ಎಸೆತಕ್ಕೆ 27 ರನ್ ಬಾರಿಸಿದರು. ರವೀಂದ್ರೆ ಜಡೇಜಾ 5 ಎಸೆತಕ್ಕೆ 9 ರನ್ ಬಾರಿಸಿದರು.
ಇದನ್ನೂ ಓದಿ: Virat Kohli : ವಿರಾಟ್ ಕೊಹ್ಲಿ ಕತೆ ಮುಗೀತು… ಮತ್ತೆ ಶೂನ್ಯಕ್ಕೆ ಔಟಾದ ಸ್ಟಾರ್ ಬ್ಯಾಟರ್!