ನವದೆಹಲಿ: 2024 ರ ಟಿ 20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ (IND vs PAK) ನಡೆಯುತ್ತಿರುವ ನಡುವೆಯೇ ಚಾಂಪಿಯನ್ಸ್ ಟ್ರೋಫಿಯ ಸಂಘಟಕರಾದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಪಂದ್ಯಾವಳಿಯ 2025 ರ ಆವೃತ್ತಿಗೆ 20 ದಿನಗಳನ್ನು ನಿಗದಿ ಮಾಡಿದೆ. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಮಾರ್ಚ್ 09 ರವರೆಗೆ ನಡೆಯಲಿದ್ದು, ಇದು 19 ದಿನಗಳ (+1 ಮೀಸಲು ದಿನ) ಟೂರ್ನಿಯಾಗಿದೆ.
2017 ರ ಫೈನಲ್ ತಲುಪಿದ ಭಾರತೀಯ ತಂಡವು ಟೂರ್ನಿಯ ಆತಿಥ್ಯ ವಹಿಸಿರುವ ಪಾಕಿಸ್ತಾನಕ್ಕೆ ಹೋಗುವ ಸಾಧ್ಯತೆಗಳು ಇಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಲೋಕ ಸಭಾ ಚುನಾವಣೆಯ ನಂತರ ಬಿಜೆಪಿ ನೇತೃತ್ವದ ಎನ್ಡಿಎಗೆ ಅಧಿಕಾರಕ್ಕೆ ಏರಿದ ಬಳಿಕ ಈ ಸುದ್ದಿ ಪ್ರಕಟಗೊಂಡಿದೆ. ಈ ಬಾರಿ ಬಿಜೆಪಿ ಸರಳ ಬಹುಮತ ಪಡೆದಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಆದಾಗ್ಯೂ ಈ ಸರ್ಕಾರದ ವಿದೇಶಾಂಗ ನೀತಿ ಬದಲಾಗುವ ಸಾಧ್ಯತೆಗಳು ಇಲ್ಲದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಖಚಿತವಲ್ಲ ಎಂದು ಕ್ರಿಕ್ಬಜ್ ವರದಿ ಮಾಡಿದೆ.
2014ರಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನೆರೆಯ ರಾಷ್ಟ್ರದೊಂದಿಗೆ ಯಾವುದೇ ಸ್ನೇಹಪರ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಶತ್ರು ದೇಶದ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪುಲ್ವಾಮಾ ಮತ್ತು ಉರಿ ದಾಳಿಯ ನಂತರ ಎರಡೂ ದೇಶಗಳ ಸಂಬಂಧ ಹದಗೆಟ್ಟಿದೆ. ಇದರ ಪರಿಣಾಮವಾಗಿ, 2012-13ರಲ್ಲಿ ಪಾಕಿಸ್ತಾನವು ಬಹು-ಸ್ವರೂಪದ ಸರಣಿಗಾಗಿ ಭಾರತಕ್ಕೆ ಭೇಟಿ ನೀಡಿದ ನಂತರ ಉಭಯ ದೇಶಗಳು ಯಾವುದೇ ದ್ವಿಪಕ್ಷೀಯ ಸ್ಪರ್ಧೆಗಳಲ್ಲಿ ಭಾಗಿಯಾಗಿಲ್ಲ. ಅದರ ನಂತರ, ಎರಡೂ ತಂಡಗಳು ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ.
ಈ ಬಾರಿಯೂ ಸಾಧ್ಯವಿಲ್ಲ
ಪಕ್ಷವು ದೇಶದಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದರಿಂದ, ಪಾಕಿಸ್ತಾನವನ್ನು ಪರಕೀಯ ರಾಷ್ಟ್ರವಾಗಿ ನೋಡುವ ಭಾರತದ ದೃಷ್ಟಿಕೋನವು ಬದಲಾಗದೆ ಉಳಿಯುವ ಸಾಧ್ಯತೆಯಿದೆ ಎಂದು ವರದಿ ಸೂಚಿಸಿದೆ. ಪಂದ್ಯಾವಳಿಯ ಆತಿಥ್ಯ ವಹಿಸಲು ಐಸಿಸಿ ಹೈಬ್ರಿಡ್ ಮಾದರಿಯನ್ನು ಬಳಸಲು ಹೇಳಬಹುದು. ಯುಎಇ ಸಹ-ಆತಿಥ್ಯ ಪಡೆಯುವ ಸಾಧ್ಯತೆಗಳಿವೆ.
ಮುಂದಿನ ಎರಡು ತಿಂಗಳಲ್ಲಿ ಸ್ಪಷ್ಟತೆ
ವಾಘಾ ಗಡಿಗೆ ಹತ್ತಿರದ ಸ್ಥಳವಾದ ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಭಾರತ ತಂಡ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಆಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈಗಾಗಲೇ ದೃಢಪಡಿಸಿದೆ. ಇದು ಭಾರತಕ್ಕೆ ಕನಿಷ್ಠ ವ್ಯವಸ್ಥಾಪನಾ ಮತ್ತು ಭದ್ರತಾ ಸವಾಲುಗಳನ್ನು ಒಡ್ಡಿದೆ. ಅಭಿಮಾನಿಗಳಿಗೆ ಪಂದ್ಯಗಳನ್ನು ವೀಕ್ಷಿಸಲು ಗಡಿಯಾಚೆಗಿನ ಅನುಭವ ನೀಡಲಿದೆ.
ಇದನ್ನೂ ಓದಿ: IND vs PAK : ವಿರಾಟ್ ಕೊಹ್ಲಿಯ ಚಪ್ಪಲಿಗೂ ಸಮವಲ್ಲ ಬಾಬರ್ ಅಜಂ; ಪಾಕಿಸ್ತಾನದ ಮಾಜಿ ಆಟಗಾರನ ಟೀಕೆ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಹಿಂದೆ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆ ಮತ್ತು ಮಂಡಳಿಯು ಇದನ್ನು ಈ ಬಾರಿಯೂ ಅನುಸರಿಸುವ ನಿರೀಕ್ಷೆಯಿದೆ. “ಮುಂದಿನ ಎರಡು ತಿಂಗಳಲ್ಲಿ ನಾವು ಕೆಲವು ಆಲೋಚನೆಗಳನ್ನು ಹೊಂದಿದ್ದೇವೆ” ಎಂದು ಮೂಲಗಳು ತಿಳಿಸಿವೆ.
ಕೊಲಂಬೊದಲ್ಲಿ ಜುಲೈನಲ್ಲಿ ನಡೆಯಲಿರುವ ವಾರ್ಷಿಕ ಸಮ್ಮೇಳನದ ನಂತರ ಅಂತಿಮ ನಿರ್ಧಾರಕ್ಕೆ ಬರಲು ಸರ್ಕಾರದೊಂದಿಗೆ ಸಂವಹನ ನಡೆಸುವಂತೆ ಐಸಿಸಿ ಈಗಾಗಲೇ ಭಾರತೀಯ ಮಂಡಳಿಗೆ ತಿಳಿಸಿರಬೇಕು ಎಂದು ನಿರೀಕ್ಷಿಸಲಾಗಿದೆ.