ಬೆಂಗಳೂರು: ಪಾಕಿಸ್ತಾನ ವಿರುದ್ಧ ಪಂದ್ಯವನ್ನು (IND vs PAK) ಗೆದ್ದ ನಂತರ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ತುಂಬಾ ಖುಷಿಯಲ್ಲಿದ್ದಾರೆ. ಯಾಕೆಂದರೆ ಟಿ20 ವಿಶ್ವ ಕಪ್ನಲ್ಲಿ(T20 World Cup) ಭಾರತ ತಂಡದ ಪಾರಮ್ಯ 8-1 ಕ್ಕೆ ಮುನ್ನಡೆದಿದೆ. ಆದಾಗ್ಯೂ ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನದ ಮೇಲೆ ಕಟ್ಟರ್ ಅಭಿಮಾನಿಗಳಿಗೆ ಕೋಪವಿದೆ. ಆದರೆ, ಬೌಲರ್ಗಳು ತಂಡವನ್ನು ರಕ್ಷಿಸಿರುವ ಪರಿಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ(Rohit Sharma) , ವಿರಾಟ್ ಕೊಹ್ಲಿಯಂಥ ವಿಶ್ವ ದರ್ಜೆಯ ಬ್ಯಾಟರ್ಗಳ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದಾರೆ. ಇವೆಲ್ಲದರ ನಡುವೆಯೂ ನಾಯಕ ರೋಹಿತ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಭಾರತ ಉತ್ತಮ ಆರಂಭವನ್ನು ಪಡೆಯಿತು. ನಾಯಕ ರೋಹಿತ್ ಶರ್ಮಾ ಎಡಗೈ ವೇಗಿ ಶಾಹೀನ್ ಅಫ್ರಿದಿ ವಿರುದ್ಧ ಅಬ್ಬರಿಸಿದರು. ಆದರೆ 13 ರನ್ ಗೆ ಸೀಮಿತಗೊಂಡರು. ಅದಕ್ಕಿಂತ ಮೊದಲು ಅವರು ಇನಿಂಗ್ಸ್ನ ಮೊದಲ ಓವರ್ನಲ್ಲಿಯೇ ಅದ್ಭುತ ಸಿಕ್ಸರ್ ಒಂದನ್ನು ಬಾರಿಸಿದ್ದರು. ಇದು ಅಲ್ಲಿನ ಅಭಿಮಾನಿಗಳ ಕಣ್ಮನ ಸೆಳೆಯಿತು.
ರೋಹಿತ್ ಶರ್ಮಾ ಓವರ್ನ ಮೊದಲ ಎಸೆತದಲ್ಲಿ 2 ರನ್ ಗಳಿಸಿದರು ಮತ್ತು ನಂತರ ಅವರು ಹಿಂತಿರುಗಿ ನೋಡಲಿಲ್ಲ. ಓವರ್ನ ಮೂರನೇ ಎಸೆತದಲ್ಲಿ ಎಡಗೈ ವೇಗಿ ಅಫ್ರಿದಿಗೆ ಅದ್ಭುತ ಸಿಕ್ಸರ್ ಬಾರಿಸಿದರು. ಇದು ಈ ಪಂದ್ಯದ ಅದ್ಭುತ ಸಿಕ್ಸರ್. ಶಾಹಿನ್ ಅಫ್ರಿದಿ ಫುಲ್ ಲೆಂತ್ ಎಸೆತವನ್ನು ಎಸೆದಿದ್ದರು. ಅದು ರೋಹಿತ್ ಪ್ಯಾಡ್ಗಳಿಗೆ ಬಡಿಯಬೇಕಿತ್ತು. ಆದರೆ ಫ್ಲಿಕ್ ಮಾಡಿದ ರೋಹಿತ್ ಸಿಕ್ಸರ್ ಬಾರಿಸಿದರು.
ಶಾಹೀನ್ ಅಫ್ರಿದಿ ವಿರುದ್ಧದ ಮೊದಲ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಶರ್ಮಾ ಇತ್ತಂಡಗಳ ಮುಖಾಮುಖಿ ಇತಿಹಾಸದಲ್ಲಿ ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಅಫ್ರಿದಿ ವಿರುದ್ಧ ವಿಶೇಷ ದಾಖಲೆ ಬರೆದರು. ಎಡಗೈ ವೇಗಿ ವಿರುದ್ಧ ಇನ್ನಿಂಗ್ಸ್ನ ಮೊದಲ ಓವರ್ನಲ್ಲಿ ಎರಡು ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್ ಏಕದಿನ ಮಾದರಿಯಲ್ಲೂ ಅದೇ ದಾಖಲೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ: IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!
ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ 2023 ರ ಸೂಪರ್ ಫೋರ್ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ರೋಹಿತ್ ಅಲ್ಲಿಯೂ ಇದೇ ರೀತಿಯ ಸಿಕ್ಸರ್ ಅನ್ನು ಹೊಡೆದಿದ್ದರು.
ಗೆಲುವು ತಂದುಕೊಟ್ಟ ಬೌಲರ್ಗಳು
ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ಬೌಲಿಂಗ್ ವಿಭಾಗ ಬ್ಯಾಟರ್ಗಳು ಪೇರಿಸಿದ್ದ 119 ರನ್ಗಳ ಸಾಧಾರಣ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿತು ಈ ಭಾರೀ ಜಿದ್ದಾಜಿದ್ದಿನ ಹೋರಾಟಕ್ಕೆ 34,000 ಕ್ಕೂ ಹೆಚ್ಚು ಅಭಿಮಾನಿಗಳು ಸಾಕ್ಷಿಯಾಗಿದ್ದರು. ಬುಮ್ರಾ ಅವರ ಅಸಾಧಾರಣ ಪ್ರದರ್ಶನವು ಪಾಕಿಸ್ತಾನ ವಿರುದ್ಧದ ಭಾರತದ ಗೆಲುವಿನಲ್ಲಿ ನಿರ್ಣಾಯಕ ಅಂಶವೆಂದು ಸಾಬೀತಾಗಿದೆ. ಯಾಕೆಂದರೆ ಈ ಹಂತದಲ್ಲಿ ಪಾಕಿಸ್ತಾನದ ಗೆಲುವಿನ ನಿರೀಕ್ಷೆ ಶೇಕಡಾ 92 ರಷ್ಟು ಇದ್ದರೆ, ಭಾರತದ್ದು ಕೇವಲ 8% ಇತ್ತು. ಆದರೆ, ಫಲಿತಾಂಶ ಮಾತ್ರ ಉಲ್ಟಾ ಆಯಿತು. ವಿಶ್ವ ವೇದಿಕೆಯಲ್ಲಿ ನಾವೇ ಬಾಸ್ ಎಂಬುದನ್ನು ಭಾರತ ಮತ್ತೊಂದು ಬಾರಿ ಸಾಕ್ಷಿ ಸಮೇತ ತೋರಿಸಿತು.
ಭಾರತವು 119 ರನ್ಗಳ ಸಾಧಾರಣ ಮೊತ್ತವನ್ನು ರಕ್ಷಿಸಿದಾಗ, ಅವರ ಪ್ರತಿಭೆ ಅನಾವರಣಗೊಂಡಿತು. 3 ವಿಕೆಟ್ಗೆ 80 ರನ್ ಗಳಿಸಿದ್ದ ಪಾಕಿಸ್ತಾನವು ಅಂತಿಮವಾಗಿ 113 ರನ್ಗೆ ಸೀಮಿತಗೊಂಡಿದ್ದು ಭಾರತ ತಂಡದ ಸಾಮರ್ಥ್ಯಕ್ಕೆ ಸಾಕ್ಷಿ. ಈ ಪ್ರದರ್ಶನವು ಬುಮ್ರಾ ಅವರ ಶ್ರೇಷ್ಠ ವೃತ್ತಿಜೀವನದಲ್ಲಿ ಸ್ಮರಣೀಯ ಎನಿಸಿಕೊಳ್ಳಲಿದೆ. ಪಾಕ್ ತಂಡದ ರನ್ ಎಚ್ಚರಿಕೆಯಿಂದ ಪ್ರಾರಂಭವಾಗಿತ್ತು. ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿ ಇನ್ನಿಂಗ್ಸ್ ಗೆ ಭದ್ರ ಬುನಾದಿ ಹಾಕಿದ್ದರು. ಆದಾಗ್ಯೂ, ನಿಯಮಿತವಾಗಿ ವಿಕೆಟ್ಗಳು ಕಳೆದುಕೊಂಡ ಕಾರಣ ಪಾಕಿಸ್ತಾನದ ವೇಗಕ್ಕೆ ಅಡ್ಡಿಯಾಯಿತು.