Site icon Vistara News

IND vs SA: ದಕ್ಷಿಣ ಆಫ್ರಿಕಾದ ಬೌಲಿಂಗ್​ ಶಕ್ತಿ ಭಾರತದ ಬ್ಯಾಟಿಂಗ್​ಗೆ ಲೆಕ್ಕಕ್ಕೇ ಇಲ್ಲ; ಮಾಜಿ ಆಟಗಾರನ ಭವಿಷ್ಯ

IND vs SA

ಬೆಂಗಳೂರು: ಬಾರ್ಬಡೋಸ್​​ನಲ್ಲಿ ಶನಿವಾರ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ 20 ವಿಶ್ವಕಪ್ ಫೈನಲ್ ಪಂದ್ಯವು ಕ್ರಿಕೆಟ್​ ಜಗತ್ತಿನ ಗಮನ ಸೆಳೆದಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಹಣಾಹಣಿಯಲ್ಲಿ ಗೆಲ್ಲುವ ಸಾಧ್ಯತೆ ಯಾರಿಗೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಏತನ್ಮಧ್ಯೆ, ಈ ಪಂದ್ಯದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಪ್ರಬಲ ಬೌಲಿಂಗ್​ ಘಟಕವು ಭಾರತಕ್ಕೆ ಲೆಕ್ಕಕ್ಕೇ ಇಲ್ಲ ಎಂದು ಹೇಳಿದ್ದಾರೆ.

ಟೂರ್ನಿಯಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ಗೆ ಪ್ರವೇಶಿಸಿದರೆ, ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನವನ್ನು ಹೀನಾಯವಾಗಿ ಮಣಿಸಿತ್ತು. ಗಯಾನಾದಲ್ಲಿ ನಡೆದ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ 56 ರನ್​ಗಳಿಗೆ ಆಲೌಟ್ ಆಗಿದ್ದರೆ, ಭಾರತ ಇಂಗ್ಲೆಂಡ್ ವಿರುದ್ಧ ಪ್ರಾಬಲ್ಯ ಸಾಧಿಸಿ ಗೆದ್ದಿತು.

ಟಿ 20 ವಿಶ್ವಕಪ್​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಇಲ್ಲಿಯವರೆಗೆ ಅಜೇಯವಾಗಿವೆ. ದಕ್ಷಿಣ ಆಫ್ರಿಕಾ ಎಂಟು ಪಂದ್ಯಗಳನ್ನು ಗೆದ್ದಿದ್ದರೆ, ಮೆನ್ ಇನ್ ಬ್ಲೂ ಏಳು ಪಂದ್ಯಗಳನ್ನು ಗೆದ್ದಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ತಂಡ ತನ್ನ ಪ್ರಬಲ ಬೌಲಿಂಗ್ ವಿಭಾಗದ ನೆರವಿನಿಂದೇ ಗೆದ್ದಿದೆ. ಈ ಬಗ್ಗೆ ಮಾತನಾಡಿದ ಮಂಜ್ರೇಕರ್, ಭಾರತೀಯ ಬ್ಯಾಟರ್​ಗಳು ದಕ್ಷಿಣ ಆಫ್ರಿಕಾದ ಬೌಲರ್​ಗಳ ನಡುವಿನ ಪಂದ್ಯ ಇದು ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಬೌಲಿಂಗ್ ದಾಳಿಯು ಗಮನ ಸೆಳೆದಿದೆ. ಆ್ಯನ್ರಿಚ್ ನೋರ್ಜೆ 13, ಕಗಿಸೊ ರಬಾಡ 12, ತಬ್ರೈಜ್ ಶಮ್ಸಿ 10 ಮತ್ತು ಕೇಶವ್ ಮಹಾರಾಜ್ 9 ವಿಕೆಟ್ ಪಡೆದಿದ್ದಾರೆ. ಭಾರತದಲ್ಲಿ ಅರ್ಶ್​​ದೀಪ್​ ಸಿಂಗ್ 15, ಜಸ್ಪ್ರೀತ್ ಬುಮ್ರಾ 13, ಕುಲದೀಪ್ ಯಾದವ್ 10, ಹಾರ್ದಿಕ್ ಪಾಂಡ್ಯ 7 ವಿಕೆಟ್​ಗಳನ್ನು ಉರುಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಬೌಲಿಂಗ್ ದಾಳಿಯನ್ನು ಭಾರತ ಹಿಮ್ಮೆಟ್ಟಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜಯ್ ಮಂಜ್ರೇಕರ್, “ಆಸ್ಟ್ರೇಲಿಯಾ ತುಂಬಾ ಉತ್ತಮವಾಗಿತ್ತು ಎಂದು ನಾನು ಭಾವಿಸುತ್ತೇನೆ. ಇಂಗ್ಲೆಂಡ್ ಬಹುಶಃ ಅಷ್ಟೊಂದು ಆಗಿರಲಿಲ್ಲ. ದಕ್ಷಿಣ ಆಫ್ರಿಕಾವು ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ. ಆದರೆ, ಭಾರತೀಯ ಬ್ಯಾಟಿಂಗ್​ ಕೂಡ ಉತ್ತಮವಾಗಿದೆ. ಏಕೆಂದರೆ ತಂಡಕ್ಕೆ ಸವಾಲನ್ನು ಮೀರಲು ಹಲವು ಆಟಗಾರರು ನೆರವಾಗಿದ್ದಾರೆ ಎಂದು ಹೇಳಿದ್ದಾರೆ.

ಭಾರತವು ವಿಭಿನ್ನ ಪಂದ್ಯಗಳಲ್ಲಿ ವಿಭಿನ್ನ ಮ್ಯಾಚ್ ವಿನ್ನರ್​ಗಳನ್ನು ಕಂಡುಕೊಂಡಿದೆ ಎಂದು ಮಂಜ್ರೇಕರ್ ಹೇಳಿದ್ದಾರೆ. ಈ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ವೈಫಲ್ಯದ ಹೊರತಾಗಿಯೂ. ರೋಹಿತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ತಂಡಕ್ಕೆ ನೆರವಾಗಿದ್ದಾರೆ. ರೋಹಿತ್ ಶರ್ಮಾ 248, ರಿಷಭ್ ಪಂತ್ 171 ರನ್ ಗಳಿಸಿದ್ದಾರೆ. ಪಾಂಡ್ಯ ಕೂಡ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಭಾವ ಬೀರಿದ್ದಾರೆ. ಯಾರದರೂ ಒಬ್ಬರು ಪರಿಸ್ಥಿತಿ ನಿಭಾಯಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಭಾರತದ ಸ್ಪಿನ್ನರ್​ಗಳು ಕಾಡುತ್ತಾರೆ

ವ್ಯತಿರಿಕ್ತವಾಗಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಬಲವನ್ನು ಭಾರತೀಯ ಸ್ಪಿನ್ನರ್​ಗಳು ಕುಗ್ಗಿಸಲಿದ್ದಾರೆ ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟರು. ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರು ಇಂಗ್ಲೆಂಡ್ ಬ್ಯಾಟರ್​ಗಳಿಗೆ ಮಾರಕವಾಗಿದ್ದರು. ದಕ್ಷಿಣ ಆಫ್ರಿಕಾದ ಬ್ಯಾಟರ್​ಗಳಿಗೆ ಅದೇ ಸವಾಲು ಇದೆ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಪಂದ್ಯದ ಹಣೆಬರಹ ಮತ್ತು ಉಭಯ ತಂಡಗಳ ನಡುವಿನ ವ್ಯತ್ಯಾಸ ನಿರ್ಧರಿಸುವ ಪ್ರಮುಖ ವಿಷಯ ಎಂದು ಮಂಜ್ರೇಕರ್ ಹೇಳಿದರು.

Exit mobile version