Site icon Vistara News

IND vs SL : ಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲೂ ಭಾರತಕ್ಕೆ ಜಯ, ಸರಣಿ ಕ್ಲೀನ್ ಸ್ವೀಪ್ ಮಾಡಿದ ಸೂರ್ಯಕುಮಾರ್ ಪಡೆ

IND vs SL

ಪಲ್ಲೆಕೆಲೆ: ಮೂರು ಪಂದ್ಯಗಳ ಟಿ20 ಸರಣಿಯ (IND vs SL) ಕೊನೇ ಪಂದ್ಯದಲ್ಲೂ ಭಾರತ ತಂಡ ಶ್ರೀಲಂಕಾ ವಿರುದ್ಧ ಗೆದ್ದಿದೆ. ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಸೂಪರ್​ ಓವರ್​ ಮೂಲಕ ಭಾರತ ಜಯ ಕಂಡಿದೆ. ನಿಗದಿತ ಓವರ್​ಗಳ ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಮೊರೆ ಹೋಗಲಾಯಿತು. ಭಾರತ ಅತ್ಯಂತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಅಲ್ಲದೆ, ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಸರಣಿಯ ಮೂಲಕ ನಾಯಕ ಸೂರ್ಯಕುಮಾರ್ ಯಾದವ್​ ಮೊದಲ ಸರಣಿಯಲ್ಲೇ ಯಶಸ್ಸು ಕಂಡರೆ, ಕೋಚ್​ ಗೌತಮ್ ಗಂಭೀರ್​ಗೂ ಶುಭಾರಂಭದ ಸಿಹಿ ದೊರೆಯಿತು.

ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ವೈಫಲ್ಯ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳು ಮುಗಿಯುವ ವೇಳೆ 8 ವಿಕೆಟ್ ಕಳೆದುಕೊಂಡು 137 ರನ್ ಬಾರಿಸಿತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್​ ಮೊರೆ ಹೋಗಲಾಯಿತು. ಮೊದಲು ಬ್ಯಾಟ್ ಮಾಡಿದ ಲಂಕಾ 1 ರನ್ ಬಾರಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ತಮ್ಮ ಅವಕಾಶವನ್ನು ಕೊನೆಗೊಳಿಸಿತು. ಭಾರತ ಪರ ಸೂರ್ಯಕುಮಾರ್ ಮೊದಲ ಎಸೆತಕ್ಕೆ ಫೋರ್ ಬಾರಿಸಿ ಜಯ ತಂದುಕೊಟ್ಟರು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡಕ್ಕೆ ಉತ್ತಮ ಆರಂಭ ದೊರಕಿತು. ಮೊದಲ ವಿಕೆಟ್​ಗೆ 58 ರನ್ ಬಾರಿಸಿತು. ಪಾಥುಮ್ ನಿಸ್ಸಾಂಕ 26 ರನ್ ಬಾರಿಸಿದರೆ ಕುಸಾಲ್ ಮೆಂಡಿಸ್​ 43 ರನ್ ಬಾರಿಸಿದರು. ಇವರಿಬ್ಬರ ಆಟದಿಂದಾಗಿ ಲಂಕಾಗೆ ಉತ್ತಮ ಲಾಭ ದೊರಕಿತು. ಬಳಿಕ ಕುಸಾಲ್ ಪೆರೆರಾ 34 ಎಸೆತಕ್ಕೆ 44 ರನ್ ಬಾರಿಸಿ ಗುರಿಯ ಸಮೀಪಕ್ಕೆ ರನ್ ತಂದಿಟ್ಟರು. ವಾನಿಂದು ಹಸರಂಗ 3 ರನ್ ಗೆ ಔಟಾದರೆ ಚರಿತ್ ಅಸಲಂಕಾ ಶೂನ್ಯಕ್ಕೆ ಔಟಾದರು. ಅಲ್ಲಿಂದ ಲಂಕಾ ತಂಡದ ಪತನ ಶುರುವಾಯಿತು.110 ರನ್​ಗೆ 2 ವಿಕೆಟ್ ನಷ್ಟ ಮಾಡಿಕೊಂಡಿದ್ದ ಲಂಕಾ ಮುಂದಿನ 22 ರನ್ ಮಾಡುವಷ್ಟರಲ್ಲಿ 6 ವಿಕೆಟ್ ನಷ್ಟ ಮಾಡಿಕೊಂಡಿತು. ರಿಂಕ ಸಿಂಗ್​, ಸೂರ್ಯಕುಮಾರ್ ಯಾದವ್​, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಉರುಳಿಸಿ ಮಿಂಚಿದರು. ಸೂಪರ್ ಓವರ್​ನಲ್ಲೂ ಬಿಷ್ಣೋಯಿ 2 ವಿಕೆಟ್ ಪಡೆದು ಭಾರತದ ಗೆಲುವನ್ನು ಸುಲಭವಾಗಿಸಿದರು.

ಭಾರತದ ಬ್ಯಾಟಿಂಗ್ ವೈಫಲ್ಯ

ಭಾರತ ತಂಡ ಬ್ಯಾಟಿಂಗ್​ನಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ.. 11 ರನ್​ಗೆ ಮೊದಲ ವಿಕೆಟ್​ ನಷ್ಟ ಮಾಡಿಕೊಂಡಿತು. ಯಶಸ್ವಿ ಜೈಸ್ವಾಲ್​ 10 ರನ್​ಗೆ ಸೀಮಿತಗೊಂಡರು. ಶುಭ್​ಮನ್ ಗಿಲ್​ 39 ರನ್ ಬಾರಿಸಿ ಚೈತನ್ಯ ತಂದರೂ ಅವರಿಗೆ ಹೆಚ್ಚು ಹೊತ್ತು ಇನಿಂಗ್ಸ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಅವರಿಬ್ಬರು ಔಟಾದ ಬಳಿಕ ಭಾರತ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಸಂಜು ಸ್ಯಾಮ್ಸನ್​ ಮತ್ತೊಂದು ಬಾರಿ ಶೂನ್ಯಕ್ಕೆ ಔಟಾದರು. ಅವರು ಎರಡನೇ ಪಂದ್ಯದಲ್ಲೂ ಡಕ್​ಔಟ್ ಆಗಿದ್ದರು. ಈ ಮೂಲಕ ಅಭಿಮಾನಿಗಳ ಕೋಪಕ್ಕೆ ಕಾರಣರಾದರು.

ಇದನ್ನೂ ಓದಿ: ICC T20 ranking : ಐಸಿಸಿ ರ್ಯಾಂಕಿಂಗ್​ನಲ್ಲಿ ಸ್ಮೃತಿ ಮಂಧಾನಾ, ರೇಣುಕಾಗೆ ಭರ್ಜರಿ ಲಾಭ

ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದುಕೊಂಡ ರಿಂಕು ಸಿಂಗ್ ನಿರಾಸೆ ಮೂಡಿಸಿ ಒಂದು ರನ್​ಗೆ ಔಟಾದರು. ಬಳಿಕ ಬಂದ ನಾಯಕ ಸೂರ್ಯಕುಮಾರ್​ ಯಾದವ್ ಕೂಡ 8 ರನ್​ಗೆ ಸೀಮಿತಗೊಂಡರು. ಈ ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದ ಶಿವಂ ದುಬೆ 13 ರನ್ ಬಾರಿಸಿ ನಿರ್ಗಮಿಸಿದರು. ಬಳಿಕ ರಿಯಾನ್ ಪರಾಗ್​ 26 ರನ್ ಹಾಗೂ ವಾಷಿಂಗ್ಟನ್ ಸುಂದರ್​ 25 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.

Exit mobile version