ಬೆಂಗಳೂರು : ಆತಿಥೇಯ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ (IND vs SL ODI ) ಎರಡನೇ ಪಂದ್ಯದಲ್ಲಿ ಭಾರತ ತಂಡ 32 ರನ್ಗಳ ಸೋಲಿಗೆ ಒಳಗಾಗಿದೆ. ಲಂಕಾದ ಸ್ಪಿನ್ನರ್ಗಳ ದಾಳಿಗೆ ನಲುಗಿದ ಭಾರತೀಯ ಬ್ಯಾಟರ್ಗಳು ಸುಲಭವಾಗಿ ಶರಣಾದರು. ಪ್ರಮುಖವಾಗಿ ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬಂದವು. ಭಾರತ ಹಾಗೂ ಲಂಕಾ ನಡುವಿನ ಮೊದಲ ಪಂದ್ಯವು ಟೈ ಆಗಿತ್ತು. ಹೀಗಾಗಿ ಈ ಗೆಲುವಿನೊಂದಿಗೆ ಲಂಕಾ ತಂಡವು ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ ಭಾರತ ತಂಡದ ಮರ್ಯಾದೆ ಉಳಿಯಬಹುದು. ಇಲ್ಲವಾದರೆ ರೋಹಿತ್ ಶರ್ಮಾ ಬಳಗ ಮುಖಭಂಗ ಅನುಭವಿಸುವ ಎಲ್ಲ ಸಾಧ್ಯತೆಗಳಿವೆ.
ಕೊಲೊಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ಗೆ 240 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ.. ಓವರ್ಗಳಲ್ಲಿ 42.2 ಓವರ್ಗಳಲ್ಲಿ 208 ರನ್ಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು. ಜೆಫ್ರಿ ವಂಡರ್ಸೆ 6 ವಿಕೆಟ್ ಹಾಗೂ ಚರಿತ್ ಅಸಲಂಕಾ 3 ವಿಕೆಟ್ ಉರುಳಿಸಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಲಂಕಾ ಸ್ಪಿನ್ನರ್ಗಳ ದಾಳಿಗೆ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ನಿರಾಸೆಗೆ ಒಳಗಾಯಿತು.
Sri Lanka win the 2nd ODI by 32 runs.#TeamIndia will look to bounce back in the 3rd and Final #SLvIND ODI.
— BCCI (@BCCI) August 4, 2024
Scorecard ▶️ https://t.co/KTwPVvU9s9 pic.twitter.com/wx1GiTimXp
ಸ್ಪಿನ್ ಪಿಚ್ನಲ್ಲಿ ಸವಾಲಿನ ಮೊತ್ತವೇ ಅಗಿದ್ದ 241 ರನ್ಗಳನ್ನು ಬೆನ್ನಟ್ಟಲು ಹೊರಟ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್ ಶರ್ಮಾ ಮತ್ತೊಂದು ಬಾರಿ ಅರ್ಧ ಶತಕ (64 ರನ್, 44 ಎಸೆತ, 5 ಫೊರ್, 4 ಸಿಕ್ಸರ್) ಉತ್ತಮ ಆರಂಭ ತಂದುಕೊಟ್ಟರು. ಶುಭ್ ಮನ್ ಗಿಲ್ ಕೂಡ 35 ರನ್ ಬಾರಿಸಿ ಅವರಿಗೆ ನೆರವಾದರು. ರೋಹಿತ್ ತಮ್ಮ ವಿಕೆಟ್ ಒಪ್ಪಿಸುವ ಮೊದಲು ಭಾರತ 13.3 ಓವರ್ಗಳಲ್ಲಿ 97 ರನ್ ಬಾರಿಸಿ ನಿಶ್ಚಿಂತೆಯಿಂದ ಇತ್ತು. ಆದರೆ, ಆ ಬಳಿಕ ಭಾರತದ ಬ್ಯಾಟರ್ಗಳು ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿರಾಟ್ ಕೊಹ್ಲಿ 14 ರನ್ಗೆ ಔಟಾದರೆ, ಬಡ್ತಿ ಪಡೆದುಕೊಂಡು ನಾಲ್ಕನೇ ಕ್ರಮಾಂಕದಲ್ಲಿ ಬಂದ ಶಿವಂ ದುಬೆ ಶೂನ್ಯಕ್ಕೆ ಔಟಾದರು.
ಅಕ್ಷರ್ ಪಟೇಲ್ ಆಧಾರ
ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿದ ಅಕ್ಷರ್ ಪಟೇಲ್ ತಂಡಕ್ಕೆ ಸ್ವಲ್ಪ ಹೊತ್ತು ಆಧಾರವಾದರು. ಅವರು 44 ರನ್ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಆದರೆ, ಉಳಿದವರು ಕ್ರೀಸ್ನಲ್ಲಿ ನಿಲ್ಲಲು ಮನಸ್ಸು ಮಾಡಿಲ್ಲ. ಶ್ರೇಯಸ್ ಅಯ್ಯರ್ 7 ರನ್ ಬಾರಿಸಿದರೆ, ಕೆ. ಎಲ್ ರಾಹುಲ್ ಬ್ಯಾಟಿಂಗ್ನಲ್ಲಿ ವೈಫಲ್ಯ ಎದುರಿಸಿ ಶೂನ್ಯಕ್ಕೆ ಔಟಾದರು. ವಾಷಿಂಗ್ಟನ್ ಸುಂದರ್ 15 ರನ್ ಬಾರಿಸಿದರೆ ಕುಲ್ದಿಪ್ ಯಾದವ್ 7 ರನ್, ಕುಲ್ದೀಪ್ ಯಾದವ್ 7 ರನ್, ಮೊಹಮ್ಮದ್ ಶಮಿ 4 ರನ್, ಅರ್ಶ್ದೀಪ್ ಸಿಂಗ್ 3 ರನ್ ಬಾರಿಸಿದರು.
ಇದನ್ನೂ ಓದಿ: Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್
ಲಂಕಾದ ಲಯ ಬದ್ಧ ಬ್ಯಾಟಿಂಗ್
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ಶೂನ್ಯಕ್ಕೆ ಮೊದಲ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಆದರೆ, ನಂತರ ಪ್ರತಿಯೊಬ್ಬರೂ ಲಯಬದ್ಧ ಬ್ಯಾಟಿಂಗ್ ಮಾಡಿದರು. ಅವಿಷ್ಕಾ ಫರ್ನಾಂಡೊ 40 ರನ್ ಬಾರಿಸಿದರೆ, ಕುಸಾಲ್ ಮೆಂಡಿಸ್ 30 ರನ್ ಗಳಿಸಿದರು. ಚರಿತ್ ಅಸಲಂಕಾ 25 ರನ್, ದುನಿಲ್ ವೆಲ್ಲಾಲಗೆ 39 ರನ್, ಕಮಿಂಡು ಮೆಂಡಿಸ್ 40 ರನ್ ಬಾರಿಸಿ ಭಾರತಕ್ಕೆ ಸ್ಪರ್ಧಾತ್ಮಕ ಗುರಿಯನ್ನು ಒಡ್ಡಲು ತಮ್ಮ ತಂಡಕ್ಕೆ ನೆರವಾದರು.