Site icon Vistara News

IND vs USA: ಅರ್ಶದೀಪ್​ ಮಾರಕ ದಾಳಿಗೆ ಪತರುಗುಟ್ಟಿದ ಅಮೆರಿಕ; ಟೀಮ್​ ಇಂಡಿಯಾ ಸೂಪರ್​-8 ಪ್ರವೇಶ

IND vs USA

IND vs USA: India won by 7 wkts

ನ್ಯೂಯಾರ್ಕ್​: ಎಡಗೈ ವೇಗಿ ಅರ್ಶದೀಪ್​ ಸಿಂಗ್​(9ಕ್ಕೆ 4 ವಿಕೆಟ್​) ಅವರ ಘಾತಕ ಬೌಲಿಂಗ್​ ದಾಳಿ ಮತ್ತು ಸೂರ್ಯಕುಮಾರ್​ ಯಾದವ್(50*) ಹಾಗೂ ಶಿವಂ ದುಬೆ(31*) ಜೋಡಿ​ಯ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ಅಮೆರಿಕ(IND vs USA) ವಿರುದ್ಧ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಜತೆಗೆ ಈ ಗೆಲುವಿನೊಂದಿಗೆ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಪ್ರವೇಶ ಪಡೆದಿದೆ.

ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 110 ರನ್​ ಬಾರಿಸಿತು. ಜವಾಬಿತ್ತ ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್​ ಎದುರಿಸಿ 3 ವಿಕೆಟ್​ ಕಳೆದುಕೊಂಡು 111 ರನ್​ ಬಾರಿಸಿ ಗೆಲುವಿನ ದಡ ಸೇರಿತು.

ಸೂರ್ಯ-ದುಬೆ ಆಸರೆ


ಚೇಸಿಂಗ್​ ವೇಳೆ ಭಾರತ ಕೂಡ ಅಮೆರಿಕದಂತೆ ಆರಂಭಿಕ ಆಘಾತ ಎದುರಿಸಿತು. ವಿರಾಟ್​ ಕೊಹ್ಲಿ(0) ಮತ್ತು ರೋಹಿತ್​ ಶರ್ಮ(3) ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ಬಳಿಕ ಬಂದ ಪಂತ್​ ಕೂಡ ಬಡಬಡನೆ ಒಂದು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 18 ರನ್​ಗೆ ಆಟ ಮುಗಿಸಿದರು. ಪಾಕ್​ ಮೂಲದ ಅಲಿ ಖಾನ್​ ಎಸೆತಕ್ಕೆ ಕ್ಲೀನ್ ಬೌಲ್ಡ್​ ಆದರು. ಅಲ್ಪ ಮೊತ್ತಕ್ಕೆ ಮೂರು ವಿಕೆಟ್​ ಕಳೆದುಕೊಂಡ ಭಾರತ ಒಂದು ಹಂತದಲ್ಲಿ ಈ ಮೊತ್ತವನ್ನು ಬಾರಿಸಲು ಸಾಧ್ಯವೇ ಎಂಬ ಅನುಮಾನ ಕೂಡ ಕಾಡಲಾರಂಭಿಸಿತು. ಆದರೆ, ಹಾರ್ಡ್​ ಹಿಟ್ಟರ್ ಸೂರ್ಯಕುಮಾರ್​ ಯಾದವ್​ ಯಾವುದೇ ಅಪಾಯಕಾರಿ ಹೊಡೆತಗಳಿಗೆ ಮುಂದಾಗದೆ ಸಮಯೋಚಿತ ಬ್ಯಾಟಿಂಗ್​ ನಡೆಸಿ ತಂಡಕ್ಕೆ ನೆರವಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಶಿವಂ ದುಬೆ ಕೂಡ ಉತ್ತಮ ಸಾಥ್​ ನೀಡಿದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸಲು ವಿಫಲವಾಗಿದ್ದ ಸೂರ್ಯಕುಮಾರ್​ ಮತ್ತು ದುಬೆ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕ ಗಮನಸೆಳೆದರು. ಗೆಲುವಿಗೆ 20 ರನ್​ ಬೇಕಿದ್ದಾಗ ಸೂರ್ಯಕುಮಾರ್​ ತಮ್ಮ ಎಂದಿನ ಶೈಲಿಯಾದ ಸ್ಫೋಟಕ ಬ್ಯಾಟಿಂಗ್​ಗೆ ಒಗ್ಗಿಕೊಂಡರು. ಸತತ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ನೆರದಿದ್ದ ಪ್ರೇಕ್ಷರಕರಿಗೆ ಕೊನೆಯ ಕ್ಷಣದಲ್ಲಿ ಮನರಂಜನೆ ನೀಡಿದರು. ಜತೆಗೆ ಅರ್ಧಶತಕ ಬಾರಿಸಿ ಮಿಂಚಿದರು. ದುಬೆ ಮತ್ತು ಸೂರ್ಯ ಜೋಡಿ 4 ವಿಕೆಟ್​ಗೆ ಅಜೇಯ 72 ರನ್​ ಒಟ್ಟುಗೂಡಿಸಿತು. ಸೂರ್ಯಕುಮಾರ್​ 49 ಎಸೆತ ಎದುರಿಸಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ಭರ್ತಿ 50 ರನ್​ ಗಳಿಸಿದರೆ, ದುಬೆ 35 ಎಸೆತಗಳಿಂದ 31 ರನ್​ ಬಾರಿಸಿದರು.

ಕೊಹ್ಲಿ ಮೊದಲ ಗೋಲ್ಡನ್​ ಡಕ್​


ಐರ್ಲೆಂಡ್​ ಮತ್ತು ಪಾಕಿಸ್ತಾನ ವಿರುದ್ಧ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಕೊಹ್ಲಿ ಈ ಪಂದ್ಯದಲ್ಲಿ ಗೋಲ್ಡನ್​ ಡಕ್​ ಸಂಕಟ್ಟಕ್ಕೆ ಸಿಲುಕಿದರು. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇದು ಕೊಹ್ಲಿಯ ಮೊದಲ ಗೋಲ್ಡನ್​ ಡಕ್​. ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಐಪಿಎಲ್​ನಲ್ಲಿ ಶ್ರೇಷ್ಠ ಬ್ಯಾಟಿಂಗ್​ ಮೂಲಕ ಟೂರ್ನಿಯ ಗರಿಷ್ಠ ಸ್ಕೋರರ್​ ಆಗಿದ್ದ ಕೊಹ್ಲಿ ವಿಶ್ವಕಪ್​ ಟೂರ್ನಿಯಲ್ಲಿ ಎಡವುತ್ತಿರುವುದು ನಿಜಕ್ಕೂ ಅವರ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ.

ಪವರ್​ ಪ್ಲೇ ಬಳಿಕ ಚೇತರಿಕೆ ಕಂಡ ಅಮೆರಿಕ


ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಅಮೆರಿಕ ತಂಡ ಭಾರತದ ಬಿಗು ಬೌಲಿಂಗ್​ ದಾಳಿಗೆ ತತ್ತರಿಸಿತು. ಅರ್ಶದೀಪ್ ಸಿಂಗ್​ ಮೊದಲ ಎಸೆತದಲ್ಲೆ ವಿಕೆಟ್​ ಕೆಡವಿದರು. ಮುಂದಿನ ಓವರನಲ್ಲಿ ಮತ್ತೊಂದು ವಿಕೆಟ್​ ಬೇಟೆಯಾಡಿ ಅವಳಿ ಆಘಾತವಿಕ್ಕಿದರು. 3 ರನ್​ಗೆ 2 ವಿಕೆಟ್​ ಕಳೆದುಕೊಂಡ ಅಮೆರಿಕ ಪವರ್​ ಪ್ಲೇಯಲ್ಲಿ ಕೇವಲ 18 ರನ್​ ಮಾತ್ರ ಗಳಿಸಿತು. ಇದು ಟಿ20 ವಿಶ್ವಕಪ್​ ಟೂರ್ನಿಯ ಪವರ್​ ಪ್ಲೇಯಲ್ಲಿ ದಾಖಲಾದ ಕನಿಷ್ಠ ಮೊತ್ತದ 7ನೇ ನಿದರ್ಶನ. 2014ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ವೆಸ್ಟ್​ ಇಂಡೀಸ್​ ವಿರುದ್ಧ 4 ವಿಕೆಟ್​ಗೆ 13 ರನ್​ ಗಳಿಸಿದ್ದು ಸದ್ಯ ಕನಿಷ್ಠ ಮೊತ್ತದ ದಾಖಲೆಯಾಗಿಯೇ ಉಳಿದಿದೆ.

ಇದನ್ನೂ ಓದಿ Virat Kohli: ಟಿ20 ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್​ ಕೊಹ್ಲಿ

ಪವರ್​ ಪ್ಲೇ ಬಳಿಕ ಚೇತರಿಕೆ ಕಂಡ ಅಮೆರಿಕ ಬಿರುಸಿನ ಬ್ಯಾಟಿಂಗ್​ಗೆ ಒತ್ತುಕೊಟ್ಟಿತು. ಅನುಭವಿ ಬೌಲರ್​ಗಳಾದ ಜಸ್​ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್​ ಅವರನ್ನು ಟಾರ್ಗೆಟ್​ ಮಾಡಿ ಸರಿಯಾಗಿ ದಂಡಿಸಿದರು. ಇಬ್ಬರು ನಾಲ್ಕು ಓವರ್​ ಎಸೆದು ತಲಾ 25 ರನ್​ ಬಿಟ್ಟುಕೊಟ್ಟು ವಿಕೆಟ್​ ಲೆಸ್​ ಎನಿಸಿಕೊಂಡರು. ಟೂರ್ನಿಯಲ್ಲಿ ಮೊದಲ ಬಾರಿಗೆ ಓವರ್​ ನಡೆಸಿದ ಶಿವಂ ದುಬೆ ಒಂದೇ ಓವರ್​ಗೆ 11 ರನ್​ ಚಚ್ಚಿಸಿಕೊಂಡರು. ಅಚ್ಚರಿ ಎಂದರೆ ಅನುಭವಿ ಮತ್ತು ಹಿರಿಯ ಸ್ಪಿನ್ನರ್​ ರವೀಂದ್ರ ಜಡೇಜಾಗೆ ಈ ಪಂದ್ಯದಲ್ಲಿ ಓವರ್​ ನೀಡಲೇ ಇಲ್ಲ. ಹಾರ್ದಿಕ್​ ಪಾಂಡ್ಯ ನಾಲ್ಕು ಓವರ್​ ಎಸೆದು ಒಂದು ಮೇಡನ್​ ಸಹಿತ 14 ರನ್​ ವೆಚ್ಚದಲ್ಲಿ 2 ವಿಕೆಟ್​ ಕಿತ್ತರು.

ಸ್ಟೀವನ್ ಟೇಲರ್(24) ಮತ್ತು ಎನ್. ಆರ್ ಕುಮಾರ್(27) ರನ್​ ಬಾರಿಸಿ ತಂಡದ ಪರ ಅತ್ಯಧಿಕ ರನ್​ ಕಲೆ ಹಾಕಿದ ಬ್ಯಾಟರ್​ ಎನಿಸಿಕೊಂಡರು. ನ್ಯೂಜಿಲ್ಯಾಂಡ್​ನ ಮಾಜಿ ಆಟಗಾರ ಕೋರಿ ಆ್ಯಂಡರ್ಸನ್​ ತಲಾ 1 ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 15 ರನ್​ಗೆ ಆಟಮುಗಿಸಿದರು. ಪಂದ್ಯಕ್ಕೂ ಮುನ್ನ ಭಾರತ ವಿರುದ್ಧ ಸ್ಫೋಟಕ ಬ್ಯಾಟಿಂಗ್​ ನಡೆಸುವುದಾಗಿ ಹೇಳಿದ್ದ ನಾಯಕ ಆ್ಯರೋನ್​ ಜೋನ್ಸ್​ ಬರೋಬ್ಬರಿ 22 ಎಸೆತ ಎದುರಿಸಿ ಕೇವಲ 11 ರನ್​ ಗಳಿಸಿ ವಿಫಲರಾದರು.

ಅರ್ಶದೀಪ್​ ಜೀವನಶ್ರೇಷ್ಠ ಬೌಲಿಂಗ್​


ಎಡಗೈ ವೇಗಿ ಅರ್ಶ​ದೀಪ್​ ಸಿಂಗ್​ ಈ ಪಂದ್ಯದಲ್ಲಿ 4 ಓವರ್​ ಎಸೆದು ಕೇವಲ 9 ರನ್​ಗೆ 4 ವಿಕೆಟ್​ ಕಿತ್ತು ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಜತೆಗೆ ಟಿ20 ವಿಶ್ವಕಪ್​ನಲ್ಲಿ ಭಾರತ ಪರ ಶ್ರೇಷ್ಠ ಬೌಲಿಂಗ್​ ನಡೆಸಿದ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಅಶ್ವಿನ್​ ಹೆಸರಿನಲ್ಲಿತ್ತು. ಅಶ್ವಿನ್​ ಅವರು 2014ರ ಟೂರ್ನಿಯಲ್ಲಿ 11ರನ್​ಗೆ 4 ವಿಕೆಟ್​ ಕೆಡವಿದ್ದರು.

Exit mobile version