Site icon Vistara News

IND vs ZIM : ಭಾರತ ತಂಡಕ್ಕೆ 10 ವಿಕೆಟ್​ ಭರ್ಜರಿ ವಿಜಯ, ಸರಣಿ 3-1ರಲ್ಲಿ ಕೈವಶ

IND vs ZIM

ಹರಾರೆ: ಮೊದಲ ಪಂದ್ಯದಲ್ಲಿ ನಾಟಕೀಯವಾಗಿ ಸೋತ ಬಳಿಕ ಪೇಚಿಗೆ ಸಿಲುಕಿದ್ದ ಭಾರತ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ (IND vs ZIM) ಮತ್ತೆ ಪಾರಮ್ಯ ಮೆರೆದಿದೆ. ಸರಣಿಯ ನಾಲ್ಕನೇ ಪಂದ್ಯದಲ್ಲಿ ಸಿಕಂದರ್​ ರಾಜಾ ನೇತೃತ್ವದ ತಂಡದ ವಿರುದ್ಧ 10 ವಿಕೆಟ್​ಗಳ ಭರ್ಜರಿ ವಿಜಯ ತನ್ನದಾಗಿಸಿಕೊಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ. ಭಾನುವಾರ (ಜುಲೈ14ರಂದು) ಭಾರತ ತಂಡ ಈ ಸರಣಿ ಕೊನೇ ಪಂದ್ಯದಲ್ಲಿ ಆಡಲಿದೆ. ಮೂರನೇ ಪಂದ್ಯದಲ್ಲಿ ಅನುಕ್ರಮವಾಗಿ 93 ಹಾಗೂ 58 ರನ್​ಗ ಗಳಿಸಿದ ಆರಂಭಿಕ ಬ್ಯಾಟರ್​ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಶುಭ್​ಮನ್​ ಗಿಲ್​ ಗೆಲುವಿನ ರೂವಾರಿಗಳೆನಿಸಿಕೊಂಡರು.

ಇಲ್ಲಿನ ಹರಾರೆ ಸ್ಪೋರ್ಟ್ಸ್​​ ಕ್ಲಬ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 15.2 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 158 ರನ್​ಗಳಿಸಿ ಅಭೂತಪೂರ್ವ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: MS Dhoni : ಅಂಬಾನಿ ಪುತ್ರನ ಮದುವೆಯಲ್ಲಿ ಬಿಂದಾಸ್​ ​ ಡಾನ್ಸ್ ಮಾಡಿದ ಮಹೇಂದ್ರ ಸಿಂಗ್ ಧೋನಿ

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಪರ ಆರಂಭಿಕ ಬ್ಯಾಟರ್​ಗಳು ಅಬ್ಬರದ ಪ್ರದರ್ಶನ ನೀಡಿದರು. ಯಶಸ್ವಿ ಜೈಸ್ವಾಲ್​ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ 53 ಎಸೆತಗಳಲ್ಲಿ 93 ರನ್ ಬಾರಿಸಿದರು. ಅವರ ಇನಿಂಗ್ಸ್​​ನಲ್ಲಿ 13 ಫೋರ್ ಹಾಗೂ 2 ಸಿಕ್ಸರ್​ಗಳಿದ್ದವು. 7 ರನ್​ಗಳ ಕೊರತೆಯೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಎರಡನೇ ಶತಕ ಬಾರಿಸುವ ಅವಕಾಶ ಮಿಸ್​ ಮಾಡಿಕೊಂಡರು. ಗುರಿ ಇನ್ನೂ ದೊಡ್ಡದಿದ್ದರೆ ಆ ಕನಸು ಈಡೇರುತ್ತಿತ್ತು. ಶುಭ್​ಮನ್ ಗಿಲ್​ ನಾಯಕ ಆಟವಾಡಿ 39 ಎಸೆತಕ್ಕೆ 58 ರನ್ ಕೊಡುಗೆ ಕೊಟ್ಟರು. ಅವರು 6 ಫೋರ್​ ಹಾಗೂ 2 ಸಿಕ್ಸರ್​ ಬಾರಿಸಿದರು.

ಸಿಕಂದರ್ ಉತ್ತಮ ಬ್ಯಾಟಿಂಗ್​

ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ ತನ್ನ ಸಾಮರ್ಥ್ಯಕ್ಕೆ ಪೂರಕವಾಗಿ ಆಡಿತು. ಮೊದಲ ವಿಕೆಟ್​ಗೆ 63 ರನ್ ಬಾರಿಸಿ ದೊಡ್ಡ ಮೊತ್ತದ ಸ್ಕೋರ್ ಬಾರಿಸುವ ಸೂಚನೆ ಕೊಟ್ಟಿತು. ಅದಾದ ಬಳಿಕ ಭಾರತಕ್ಕೆ ಮತ್ತೊಂದು ವಿಕೆಟ್ ದೊರಕಿದರೂ ನಾಯಕ ಸಿಕಂದರ್ ರಾಜಾ 28 ಎಸೆತಕ್ಕೆ 46 ರನ್ ಬಾರಿಸುವ ಮೂಲಕ ಗೌರವ ಪೂರ್ವಕ ಮೊತ್ತವನ್ನು ಪೇರಿಸಲು ಆತಿಥೇಯ ತಂಡಕ್ಕೆ ನೆರವಾದರು. ಕೊನೆ ಹಂತದಲ್ಲಿ ಬೌಲಿಂಗ್ ಬಿಗಿಗೊಳಿಸಿದ ಭಾರತ ತಂಡ ಎದುರಾಳಿ ತಂಡ ದೊಡ್ಡ ಮೊತ್ತ ಪೇರಿಸದಂತೆ ನೋಡಿಕೊಂಡಿತು. ಭಾರತ ಪರ ಖಲೀಲ್ ಅಹಮದ್​ 2 ವಿಕೆಟ್ ಉರುಳಿಸಿದರೆ ತುಷಾರ್​ ದೇಶ್​ಪಾಂಡೆ, ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಹಾಗೂ ಅಭಿಷೇಕ್​ ಶರ್ಮಾ ತಲಾ ಒಂದು ವಿಕೆಟ್​ ತಮ್ಮದಾಗಿಕೊಂಡರು.

ಭಾರತ ಹಾಗೂ ಜಿಂಬಾಬ್ವೆ ನಡುವಿನ ಕೊನೇ ಪಂದ್ಯ ಭಾನುವಾರ (ಜುಲೈ14ರಂದು) ಅದೇ ತಾಣದಲ್ಲಿ ನಡೆಯಲಿದೆ. ಇದೊಂದು ಔಪಚಾರಿಕ ಪಂದ್ಯವಾಗಿದೆ. ಆದಾಗ್ಯೂ ಭಾರತ ತಂಡ ತನ್ನ ಶಕ್ತಿಯನ್ನು ಮತ್ತೊಂದ ಬಾರಿ ಇಲ್ಲಿ ಪ್ರದರ್ಶನ ಮಾಡಲಿದೆ.

Exit mobile version