Site icon Vistara News

Legends World Cup 2024 : ಪಾಕಿಸ್ತಾನ ತಂಡವನ್ನು ಸೋಲಿಸಿ ಲೆಜೆಂಡ್ಸ್​ ವಿಶ್ವ ಕಪ್-2024 ಟ್ರೋಫಿ ಗೆದ್ದ ಭಾರತ

Legends World Cup 2024

ಬರ್ಮಿಂಗ್​ಹ್ಯಾಮ್​: ಪಾಕಿಸ್ತಾನ ತಂಡವನ್ನು ಮಣಿಸಿದ ಇಂಡಿಯಾ ಚಾಂಪಿಯನ್ಸ್ ತಂಡ ಉದ್ಘಾಟನಾ ಆವೃತ್ತಿಯ ಲೆಜೆಂಡ್ಸ್​ ವಿಶ್ವ ಕಪ್​ನಲ್ಲಿ (Legends World Cup 2024 ) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಕ್ರಿಕೆಟ್​ ದೇಶಗಳ ನಿವೃತ್ತ ಆಟಗಾರರನ್ನು ಒಳಗೊಂಡಿರುವ ಟೂರ್ನಿಯಾಗಿದೆ. ಮೊದಲ ಆವೃತ್ತಿಯಲ್ಲಿ ಗೆದ್ದ ಯುವರಾಜ್ ಸಿಂಗ್​ ನೇತೃತ್ವದ ಭಾರತ ತಂಡ 2007ರ ಟಿ20 ವಿಶ್ವ ಕಪ್​ ಟೂರ್ನಿಯನ್ನು ನೆನಪಿಸಿದೆ. ಟಿ20 ವಿಶ್ವ ಕಪ್​ನ ಮೊದಲ ಆವೃತ್ತಿಯಲ್ಲೇ ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿತ್ತು. ಅಲ್ಲೂ ಪಾಕಿಸ್ತಾನವನ್ನೇ ಕೊನೇ ಎಸೆತದಲ್ಲಿ ಪಡೆದ ನಾಟಕೀಯ ಫಲಿತಾಂಶದ ಮೂಲಕ ಸೋಲಿಸಿತ್ತು.

ಭಾರತ ಪರ ಬ್ಯಾಟಿಂಗ್​ನಲ್ಲಿ ಅಂಬಾಟಿ ರಾಯುಡು (50) ಅರ್ಧ ಶತಕ ಬಾರಿಸಿ ಮಿಂಚಿದರೆ ಯೂಸುಫ್ ಪಠಾಣ್​ 16 ಎಸೆತಕ್ಕೆ 30 ರನ್ ಬಾರಿಸಿ ಮಿಂಚಿದರು. ಯುವರಾಜ್ ಸಿಂಗ್​ 15 ರನ್ ಬಾರಿಸಿದರೆ ಇರ್ಫಾಣ್ ಪಠಾಣ್ 5 ರನ್ ಬಾರಿಸಿದರು. ಬೌಲಿಂಗ್​ನಲ್ಲಿ ಅನುರೀತ್ ಸಿಂಗ್ ಮೂರು ವಿಕೆಟ್ ಪಡೆದರು.

ಇಲ್ಲಿನ ಎಜ್​ಬಾಸ್ಟನ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 156 ರನ್ ಗಳಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನೂ ಐದು ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ ಗೆಲುವು ಸಾಧಿಸಿತು.

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ ಉತ್ತಮ ಆರಂಭನ್ನು ಪಡೆಯಿತು. ಮೊದಲ ವಿಕೆಟ್​ಗೆ 34 ರನ್​ ಬಾರಿಸಿತು. ಪ್ರಮುಖವಾಗಿ ಅಂಬಾಟಿ ರಾಯುಡು 30 ಎಸೆತಕ್ಕೆ 50 ರನ್ ಬಾರಿಸಿ ಭಾರತ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ 10 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಸುರೇಶ್ ರೈನಾ ಕೂಡ 4 ರನ್​ಗೆ ವಿಕೆಟ್​ ಒಪ್ಪಿಸಿ ಆತಂಕ ತಂದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಗುರುಕೀರತ್​ ಸಿಂಗ್ ಮಾನ್​ 33 ಎಸೆತಕ್ಕೆ 34 ರನ್ ಬಾರಿಸಿ ಆಧಾರವಾದರು. ಕೊನೆ ಹಂತದಲ್ಲಿ ಯೂಸುಫ್ ಪಠಾಣ್​ ಭರ್ಜರಿಯಾಗಿ ಬ್ಯಾಟ್ ಬೀಸಿ 30 ರನ್ ಬಾರಿಸಿ ಗೆಲುವು ತಂದುಕೊಟ್ಟರು.

ಪಾಕಿಸ್ತಾನ ಉತ್ತಮ ಮೊತ್ತ

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವೂ ಉತ್ತಮ ಮೊತ್ತ ಪೇರಿಸಿತು. ಕಮ್ರಾನ್ ಅಕ್ಮಲ್​ 24 ರನ್ ಬಾರಿಸಿದರೆ ಶ್ರಜೀಲ್ ಖಾನ್ 12 ರನ್ ಬಾರಿಸಿದರು. ಶೋಯೆಬ್ ಮಕ್ಸೂದ್ 21 ರನ್ ಗಳಿಸಿದರೆ ಶೋಯೆಬ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 36 ಎಸೆತಕ್ಕೆ 41 ರನ್ ಗಳಿಸಿದರು. ಅವರ ವೇಗದ ರನ್​ ಗಳಿಕೆಯಿಂದಾಗಿ ಪಾಕಿಸ್ತಾನ ಉತ್ತಮ ಮೊತ್ತದತ್ತ ಸಾಗಿತು. ಮಿಸ್ಬಾ ಉಲ್ ಹಕ್​ 18 ರನ್ ಬಾರಿಸಿದ ಬಳಿಕ ಗಾಯಗೊಂಡು ನಿವೃತ್ತರಾದರು. ಕೊನೆಯಲ್ಲಿ ಸೋಹೈಲ್ ತನ್ವೀರ್ 9 ಎಸೆತಕ್ಕೆ 19 ರನ್ ಬಾರಿಸಿದರು. ಭಾರತ ಪರ ಬೌಲಿಂಗ್​ನಲ್ಲಿ ಅನುರೀತ್ ಸಿಂಗ್​ 3 ವಿಕೆಟ್​ ಪಡೆದರೆ, ವಿನಯ್ ಕುಮಾರ್​, ಪವನ್ ನೇಗಿ ಹಾಗೂ ಇರ್ಪಾನ್ ಪಠಾಣ್​ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version