Site icon Vistara News

IND vs SL : ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ 43 ರನ್​ ಭರ್ಜರಿ ಜಯ

IND vs SL

ಪಲ್ಲೆಕೆಲೆ: ನಾಯಕ ಸೂರ್ಯಕುಮಾರ್​ (58 ರನ್​) ಅರ್ಧ ಶತಕ ಹಾಗೂ ರಿಷಭ್​ ಪಂತ್​ (49 ರನ್​) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಭಾರತ ತಂಡ ಆತಿಥೇಯ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ (IND vs SL) ಮೊದಲ ಪಂದ್ಯದಲ್ಲಿ 43 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ. ಭಾರತ ತಂಡದ ಗೆಲುವಿನಲ್ಲಿ ಕೊನೇ ಹಂತದಲ್ಲಿ ಬೌಲರ್​ಗಳು ಕೂಡ ಪ್ರಮುಖ ಪಾತ್ರ ವಹಿಸಿದರು. ಇದರೊಂದಿಗೆ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಶುಭಾರಂಭ ಮಾಡಿದರೆ ಕೋಚ್ ಗೌತಮ್ ಗಂಭೀರ್ ಕೂಡ ಹೊಸ ಅಧ್ಯಾಯ ಆರಂಭಿಸಿದರು.

ಇಲ್ಲಿನ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟ ಮಾಡಿಕೊಂಡು 213 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆತಿಥೇಯ ಬಳಗ 19. 2 ಓವರ್​ಗಳಲ್ಲಿ 170 ರನ್​ಗಳಿಗೆ ಆಲ್​ಔಟ್ ಆಯಿತು.

ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್​ (21 ಎಸೆತಕ್ಕೆ 40 ರನ್​), ಶುಭ್​ಮನ್​ ಗಿಲ್​ (16 ಎಸೆತಕ್ಕೆ 34 ರನ್​) ಉತ್ತಮ ಆರಂಭ ತಂದುಕೊಟ್ಟರು. ಈ ಜೋಡಿ ಮೊದಲ ವಿಕೆಟ್​ಗೆ 74 ರನ್ ಬಾರಿಸಿತು. ಬಳಿಕ ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ಸೂರ್ಯಕುಮಾರ್ ಉತ್ತಮವಾಗಿ ಆಡಿದರು. ತಂಡದ ಪೂರ್ಣಾವಧಿ ನಾಯಕನಾಗಿ ನೇಮಕಗೊಂಡ ನಂತರ ತಮ್ಮ ಮೊದಲ ಪಂದ್ಯದಲ್ಲಿ ಮಿಂಚಿದರು. ಲಂಕಾ ಬೌಲರ್​ಗಳನ್ನು ಬಲವಾಗಿ ಹಿಮ್ಮೆಟ್ಟಿಸಿದರು. ಸೂರ್ಯಕುಮಾರ್ ಯಾದವ್ ತಮ್ಮ ಇನ್ನಿಂಗ್ಸ್​​ನಲ್ಲಿ ಕೆಲವು ಅಬ್ಬರದ ಶಾಟ್​ಗಳನ್ನು ಆಡಿದರು. ಅವರು ಎದುರಾಳಿ ತಂಡದ ಬೌಲರ್​​ಗಳ ನೈತಿಕತೆ ಕುಸಿಯುವಂತೆ ಮಾಡಿದರು. 26 ಎಸೆತಕ್ಕೆ ಬೌಂಡರಿ ಹಾಗೂ 2 ಸಿಕ್ಸರ್ ಸಮೇತ ಅವರು 58 ರನ್ ಬಾರಿಸಿತು.

ಇದನ್ನೂ ಓದಿ: Rishabh Pant : ಧೋನಿಯಂತೆ ಭರ್ಜರಿ ಹೆಲಿಕಾಪ್ಟರ್​ ಶಾಟ್​​ ಮೂಲಕ ಸಿಕ್ಸರ್ ಬಾರಿಸಿದ ರಿಷಭ್ ಪಂತ್​

ರಿಷಭ್ ಉತ್ತಮ ಆಟ

ಸೂರ್ಯಕುಮಾರ್ ಯಾದವ್ ಪೆವಿಲಿಯನ್​ಗೆ ಮರಳಿದ ನಂತರ, ರಿಷಭ್ ಪಂತ್ ರನ್​ ಗಳಿಸುವ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡು ತಮ್ಮ ತಂಡವನ್ನು ದೊಡ್ಡ ಮೊತ್ತಕ್ಕೆ ಕೊಂಡೊಯ್ದರು. ಕೀಪರ್-ಬ್ಯಾಟ್ಸ್ಮನ್ ಒಂದು ಹಂತದಲ್ಲಿ 20 (20) ರನ್ ಗಳಿಸಿದ್ದರು. ನಂತರ, ಅವರು ಬ್ಯಾಟ್​ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು. ರಿಷಭ್ ಪಂತ್ ತಮ್ಮ ಇನ್ನಿಂಗ್ಸ್​ನಲ್ಲಿ ಅದ್ಭುತ ಶಾಟ್​ಗಳನ್ನು ಆಡಿದರು. ಔಟಾಗುವ ಮೊದಲು ಅವರು 33 ಎಸೆತಕ್ಕೆ 6 ಫೋರ್​, 1 ಸಿಕ್ಸರ್ ಸಮೇತ 49 ರನ್ ಬಾರಿಸಿದರು. ಆದರೆ, ಒಂದು ರನ್ ಕೊರತೆಯಿಂದ ಅರ್ಧ ಶತಕದ ಅವಕಾಶ ಕಳೆದುಕೊಂಡರು.

ಲಂಕಾ ಉತ್ತಮ ಆರಂಭ

ಭಾರತದ ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಲಂಕಾ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 84 ರನ್ ಬಾರಿಸಿತು. ಆರಂಭಿಕ ಬ್ಯಾಟರ್​ ಪಾತುಮ್ ನಿಸ್ಸಾಂಕ 4 ಎಸೆತಕ್ಕೆ 79 ರನ್ ಬಾರಿಸಿದರೆ ಕುಸಾಲ್ ಮೆಂಡಿಸ್​ 27 ಎಸೆತಕ್ಕೆ 45 ರನ್ ಗಳಿಸಿದರು. ಹೀಗಾಗಿ ಲಂಕಾ ಗೆಲುವಿನ ಸನಿಹ ಬರುವ ನಿರೀಕ್ಷೆ ಇತ್ತು. ಆದರೆ, ಕೊನೇ ಹಂತದಲ್ಲಿ ಅಕ್ಷರ್ ಪಟೇಲ್​ (3 ರನ್​ಗಳಿಗೆ 2 ವಿಕೆಟ್​), ಅರ್ಶ್​ದೀಪ್ ಸಿಂಗ್ (24 ಎಸೆತಕ್ಕೆ 2 ವಿಕೆಟ್​), ರಿಯಾನ್ ಪರಾಗ್​ 1.2 ಓವರ್​ಗಳಲ್ಲಿ 5 ರನ್ ನೀಡಿ 3 ವಿಕೆಟ್ ಕಬಳಿಸಿದರು. ಹೀಗಾಗಿ ಲಂಕಾ ತಂಡಕ್ಕೆ ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. 149 ರನ್​ಗಳಿಗೆ 3 ವಿಕೆಟ್ ಮಾತ್ರ ಕಳೆದುಕೊಂಡಿದ್ದ ಲಂಕಾ ಮುಂದಿನ 21 ರನ್ ಮಾಡುವಷ್ಟರಲ್ಲಿ ಉಳಿದ ಏಳು ವಿಕೆಟ್ ನಷ್ಟ ಮಾಡಿಕೊಂಡು ಸೋಲೊಪ್ಪಿಕೊಂಡಿತು.

Exit mobile version