Site icon Vistara News

Paris Olympics 2024 : 52 ವರ್ಷಗಳ ಬಳಿಕ ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತದ ಹಾಕಿ ತಂಡ

Paris Olympics 2024

ಬೆಂಗಳೂರು: ಹರ್ಮನ್ ಪ್ರೀತ್ ಸಿಂಗ್ ಅವರ ಆಕರ್ಷಕ ಎರಡು ಗೋಲುಗಳ ನೆರವಿನಿಂದ ಮಿಂಚಿದ ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್​​ನ (Paris Olympics 2024) ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 52 ವರ್ಷಗಳ ಬಳಿಕ ಭಾರತ ಗೆಲುವು ಸಾಧಿಸಿದ್ದು ಈ ಫಲಿತಾಂಶದವ ವಿಶೇಷವಾಗಿದೆ. ಈ ಮೂಲಕ ಭಾರತ ಹಾಕಿ ತಂಡ ಪ್ಯಾರಿಸ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸಿತು. ಈ ಗೆಲುವು ಭಾರತದ ಪಾಲಿಗೆ ಸಂಘಟಿತ ಹೋರಾಟವಾಗಿತ್ತು.

ಈ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 8 ನೇ ಪಂದ್ಯ ಇದಾಗಿದೆ. ಹಿಂದಿನ 7 ಪಂದ್ಯಗಳನ್ನು ಆಸೀಸ್ ಗೆದ್ದಿತ್ತು. ಇದೀಗ ಭಾರತ ತಿರುಗೇಟು ನೀಡಿತು. ಅಲ್ಲದೆ ಬೆಲ್ಜಿಯಂ ವಿರುದ್ಧದ ಸೋಲಿನಿಂದ ಚೇತರಿಸಿಕೊಳ್ಳಲು ಭಾರತಕ್ಕೆ ಉತ್ತಮ ಕಾರಣ ಸಿಕ್ಕಿತು ಹಾಗೂ ಕ್ವಾರ್ಟರ್ ಫೈನಲ್​​ ಗೆಲುವಿಗೆ ಪ್ರೇರಣೆಯಾಯಿತು.

ಡಿ ಗುಂಪಿನ ಈ ಪಂದ್ಯದಲ್ಲಿ ಭಾರತವು ಆಕ್ರಮಣಕಾರಿ ಆಟವಾಡಿತು. ಭಾರತದ ದಾಳಿಯ ಬೆದರಿಕೆಯನ್ನು ಎದುರಿಸಲು ಆಸ್ಟ್ರೇಲಿಯಾದ ಆಟಗಾರ ನಿಧಾನವಾಗಿ ಆಟ ಪ್ರಾರಂಭಿಸಿತು.

ಮೊದಲ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸಿತು. ಫಾರ್ವರ್ಡ್ ಆಟಗಾರ ಅಭಿಷೇಕ್ 12ನೇ ನಿಮಿಷದಲ್ಲಿ ಭಾರತದ ಪರ ಮೊದಲ ಗೋಲು ಗಳಿಸಿದರು. ಒಂದು ನಿಮಿಷದ ನಂತರ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

25ನೇ ನಿಮಿಷದಲ್ಲಿ ಕ್ರೇಗ್ ಥಾಮಸ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಅಂತರವನ್ನು ಒಂದು ಗೋಲಿಗೆ ಇಳಿಸಿದರು. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 55ನೇ ನಿಮಿಷದಲ್ಲಿ ಬ್ಲೇಕ್ ಗ್ರೋವರ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ಕ್ವಾರ್ಟರ್​ನಲ್ಲಿ ಭಾರತಕ್ಕೆ ಬೆದರಿಕೆ ಒಡ್ಡಿತು. ಕೊನೆಯ ನಿಮಿಷಗಳಲ್ಲಿ ಸಮಬಲದ ಹೋರಾಟ ತೋರಿದ ಆಸೀಸ್ ಕಠಿಣ ಪ್ರಯತ್ನ ನಡೆಸಿದರೂ ಗೋಲು ಗಳಿಸಲು ವಿಫಲವಾಯಿತು.

ಇದನ್ನೂ ಓದಿ: Manu Bhaker : 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ​​; ಒಂದೇ ಒಲಿಂಪಿಕ್ಸ್​ನಲ್ಲಿ ಮೂರನೇ ಬಾರಿ ಫೈನಲ್​ಗೆ

ಭಾರತ ಗ್ರೂಪ್ ಹಂತವನ್ನು ಕೇವಲ ಒಂದು ಸೋಲಿನೊಂದಿಗೆ ಕೊನೆಗೊಳಿಸಿದೆ. ನ್ಯೂಜಿಲೆಂಡ್ ತಂಡವನ್ನು 3-2 ಅಂತರದಿಂದ ಮಣಿಸಿ ಭಾರತ ತನ್ನ ಅಭಿಯಾನವನ್ನು ಆರಂಭಿಸಿತ್ತು. ಆ ಗೆಲುವಿನ ನಂತರ ಅರ್ಜೆಂಟೀನಾ ವಿರುದ್ಧ 1-1 ಡ್ರಾ ಸಾಧಿಸಿತು. ನಂತರ ಭಾರತ ಐರ್ಲೆಂಡ್ ತಂಡವನ್ನು 2-0 ಅಂತರದಿಂದ ಸೋಲಿಸಿತು. ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಸೋತಿದ್ದ ಭಾರತ, ಆಸೀಸ್ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿತ್ತು.

‘ಬಿ’ ಗುಂಪಿನಲ್ಲಿ ಬೆಲ್ಜಿಯಂ ನಂತರ ಎರಡನೇ ಸ್ಥಾನ ಪಡೆದಿರುವ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಾಕೌಟ್​​ನಲ್ಲಿ ಯಾವ ತಂಡವನ್ನು ಎದುರಿಸುತ್ತಾರೆ ಎಂದು ತಿಳಿಯಲು ತಂಡವು ಈಗ ಗ್ರೇಟ್ ಬ್ರಿಟನ್ ಮತ್ತು ಸ್ಪೇನ್ ನಡುವಿನ ಪಂದ್ಯದ ವಿಜೇತರಿಗಾಗಿ ಕಾಯುತ್ತಿದೆ.

Exit mobile version