ಬೆಂಗಳೂರು : ಭಾರತ ತಂಡದ ಮುಂದಿನ ಕೋಚ್ ಗೌತಮ್ ಗಂಭೀರ್ ಎಂಬ ವಿಶ್ವಾಸಾರ್ಹ ವರದಿಗಳ ಮಧ್ಯೆ, ಈ ವಿಚಾರ ಅಂತಿಮಗೊಂಡಿಲ್ಲ ಎಂಬುದಾಗಿ ಅವರು ಹೇಳಿಕೆ ನೀಡಿದ್ದಾರೆ. ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ (KKR) ಮಾರ್ಗದರ್ಶಕ ಸುದ್ದಿಗೆ ಹೊಸ ತಿರುವು ನೀಡಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗನಿಗೆ ಮುಂದಿನ ಕೋಚ್ ನೀವಾ ಎಂದು ಕೇಳಿದ್ದಕ್ಕೆ, ಈ ಪ್ರಶ್ನೆಗೆ ಉತ್ತರಿಸುವುದು ತುಂಬಾ ಕಷ್ಟ. ಈಗಲೇ ಎಲ್ಲದ್ದಕ್ಕೂ ಉತ್ತರಿಸುವುದು ಅಸಾಧ್ಯ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರ ಕೋಚಿಂಗ್ ಹುದ್ದೆಯ ಆಯ್ಕೆ ಇನ್ನೂ ಗೊಂದಲದಲ್ಲಿದೆ ಎಂದು ಹೇಳಲಾಗಿದೆ.
ರಾಹುಲ್ ದ್ರಾವಿಡ್ ಅವರಿಂದ ತೆರವಾದ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮಾರ್ಗದರ್ಶಕರಾಗಿ ಕಪ್ ಗೆದ್ದು ಕೊಟ್ಟಿರು ಅವರಿಗೆ ಬಿಸಿಸಿಐ ಸಂದರ್ಶನ ನಡೆಸಿದೆ. ಅವರು ಸಮರ್ಥರಾಗಿರುವ ಕಾರಣ ಆಯ್ಕೆಯಾಗುವುದು ಖಚಿತ ಎಂದು ಹೇಳಲಾಗಿದೆ. ಆದರೆ ಅವರ ಇತ್ತೀಚಿನ ಹೇಳಿಕೆ ಮತ್ತೆ ಗೊಂದಲಕ್ಕೆ ಕಾರಣವಾಗಿದೆ.
ಬಿಸಿಸಿಐ ಕೋಚಿಂಗ್ ಪಾತ್ರಕ್ಕಾಗಿ ಅರ್ಜಿಗಳನ್ನು ಬಿಡುಗಡೆ ಮಾಡಿದಾಗಿನಿಂದ, ಗೌತಮ್ ಗಂಭೀರ್ ಈ ಮಹತ್ವದ ಹುದ್ದೆಯನ್ನು ಪಡೆಯಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಕೋಲ್ಕತಾ ನೈಟ್ ರೈಡರ್ಸ್ ಮೆಂಟರ್ ನೇಮಕವನ್ನು ಈಗಾಗಲೇ ಆಡಳಿತ ಮಂಡಳಿ ಅಂತಿಮಗೊಳಿಸಿದೆ ಮತ್ತು ಅವರು ಶೀಘ್ರದಲ್ಲೇ ತಂಡದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಹಲವಾರು ವರದಿಗಳು ತಿಳಿಸಿವೆ.
ಆರಂಭದಲ್ಲಿ ಅವರೊಬ್ಬರೇ ಕೋಚಿಂಗ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸಂದರ್ಶನದ ದಿನದಂದು, ಡಬ್ಲ್ಯೂವಿ ರಾಮನ್ ಕೂಡ ಸ್ಪರ್ಧೆಯಲ್ಲಿದ್ದಾರೆ ಎಂದು ತಿಳಿದುಬಂತು. ಮಹಿಳಾ ತಂಡದ ಮಾಜಿ ಮುಖ್ಯ ಕೋಚ್ ಕೂಡ ಸಂದರ್ಶನದಲ್ಲಿದ್ದರು ಎಂದು ಹೇಳಲಾಯಿತು. ಆದರೆ, ಗಂಭೀರ್ ಹೆಚ್ಚು ಸೂಕ್ತ ಆಯ್ಕೆ ಎಂಬುದಾಗಿ ಹೇಳಲಾಗಿತ್ತು.
ಇದನ್ನೂ ಓದಿ: Rishabh Pant : ವಿಶ್ವ ಕಪ್ನಲ್ಲಿ ವಿನೂತನ ವಿಕೆಟ್ಕೀಪಿಂಗ್ ದಾಖಲೆ ಬರೆದ ರಿಷಭ್ ಪಂತ್
ಗೌತಮ್ ಗಂಭೀರ್ ಮತ್ತು ಡಬ್ಲ್ಯುವಿ ರಾಮನ್ ನಡುವೆ ಆಯ್ಕೆಗಾಗಿ ಬಿಸಿಸಿಐ ಭಿನ್ನ ಅಭಿಪ್ರಾಯ ಹೊಂದಿದೆ ಎಂಬುದಾಗಿಯೂ ಹೇಳಲಾಗಿದೆ. ಈ ಇಬ್ಬರೂ ಮಾಜಿ ಕ್ರಿಕೆಟಿಗರು ತಂಡವನ್ನು ಸೇರುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಗಂಭೀರ್ ಮುಖ್ಯ ಕೋಚ್ ಆಗುವ ಸಾಧ್ಯತೆಯಿದ್ದರೆ, ರಾಮನ್ ಅವರು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ.
ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡುವ ಬಗ್ಗೆ ಎಲ್ಲಾ ಊಹಾಪೋಹಗಳೊಂದಿಗೆ, ಕೋಲ್ಕತಾ ನೈಟ್ ರೈಡರ್ಸ್ ಮಾರ್ಗದರ್ಶಕ ಇನ್ನೂ ಯಾವುದೇ ಮಾಹಿತಿ ಇಲ್ಲ ಎಂದು ದೃಢಪಡಿಸಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಅವರು, “ನಾನು ಅಷ್ಟು ದೀರ್ಘವಾಗಿ ಯೋಚಿಸಿಲ್ಲ. ಈಗ ಉತ್ತರಿಸುವುದು ಕಷ್ಟ” ಎಂದು ಹೇಳಿದ್ದಾರೆ.
ಈ ಹಿಂದೆ ಬಿಸಿಸಿಐ ಮತ್ತು ಗೌತಮ್ ಗಂಭೀರ್ ಇಬ್ಬರೂ ದೇಶಕ್ಕಾಗಿ ಏನಾದರೂ ಮಾಡಲೇಬೇಕು ಎಂಬ ಒಂದೇ ನಂಬಿಕೆಯೊಂದಿಗೆ ಚರ್ಚೆ ನಡೆಸಿತ್ತು. ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮಾರ್ಗದರ್ಶನ ನೀಡಿದ ರೀತಿಯಿಂದ ಬಿಸಿಸಿಐ ಪ್ರಭಾವಿತವಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಕೆಕೆಆರ್ ತಂಡಕ್ಕೆ ತನ್ನ ಮೂರನೇ ಪ್ರಶಸ್ತಿ ಪಡೆಯಲು ನೆರವಾಗಿದ್ದರು.