Site icon Vistara News

Indo- Pak Cricket : ಭಾರತ-ಪಾಕ್ ಪಂದ್ಯದಲ್ಲಿ ಐಸಿಸಿಯೇ ಫಿಕ್ಸಿಂಗ್ ಮಾಡುತ್ತದೆ ಎಂದ ಆರೋಪಿಸಿದ ಇಂಗ್ಲೆಂಡ್​ನ ಮಾಜಿ ಆಟಗಾರ

Indo- Pak Cricket

ಬೆಂಗಳೂರು : ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡ ದ್ವಿಪಕ್ಷೀಯ ಸರಣಿಯಲ್ಲಿ (Indo- Pak Cricket) ಭಾಗಿಯಾಗುತ್ತಿಲ್ಲ. 2013 ರಲ್ಲಿ ದ್ವಿಪಕ್ಷೀಯ ಟೂರ್ನಿ ನಿಲ್ಲಿಸಿದಾಗಿನಿಂದ ಇತ್ತಂಡಗಳು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಆದರೆ, ಭಾರತ ಮತ್ತು ಪಾಕಿಸ್ತಾನ ಪಂದ್ಯವು ದೊಡ್ಡ ಮಟ್ಟದ ಪ್ರಚಾರ ಹಾಗೂ ಹಣ ಗಳಿಸುವುದರಿಂದ ಐಸಿಸಿ, ಯಾವುದೇ ಟೂರ್ನಿಯಾದರೂ ಎರಡು ತಂಡಗಳು ಕನಿಷ್ಠ ಒಂದು ಬಾರಿಯಾದರೂ ಮುಖಾಮುಖಿಯಾಗುವಂತೆ ಮಾಡುತ್ತದೆ. ಈ ಬಗ್ಗೆ ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಡೇವಿಡ್​ ಲಾಯ್ಡ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಐಸಿಸಿಯೇ ಮ್ಯಾಚ್ ಫಿಕ್ಸಿಂಗ್ ಮಾಡಿದಂತೆ ಎಂದು ಅವರು ಆರೋಪಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳು ಅಭಿಮಾನಿಗಳ ಪಾಲಿಗೆ ಹಬ್ಬ. ಆದರೆ, ಐಸಿಸಿ ಪಂದ್ಯಾವಳಿಗಳಲ್ಲಿ ಇದು ಪೂರ್ವನಿಗದಿತವಾಗಬಾರದು ಎಂದು ಇಂಗ್ಲೆಂಡ್​​ನ ಮಾಜಿ ಕ್ರಿಕೆಟಿಗ ಡೇವಿಡ್ ಲಾಯ್ಡ್ ಅಭಿಪ್ರಾಯಪಟ್ಟಿದ್ದಾರೆ. ಇದು ಮ್ಯಾಚ್ ಫಿಕ್ಸಿಂಗ್ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ಐಸಿಸಿಯು ಟೂರ್ನಿಯ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತದೆ. ಕ್ರಿಕೆಟ್​​ ಪಂದ್ಯಗಳ ವೇಳೆ ನಡೆಯುವ ಫಿಕ್ಸಿಂಗ್ ಬಗ್ಗೆ ನಾವು ದೀರ್ಘ ಮತ್ತು ನಿರ್ದಯವಾಗಿ ಮಾತನಾಡುತ್ತೇವೆ. ಆದರೆ ಈ ರೀತಿಯ ಫಿಕ್ಸಿಂಗ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಈ ರೀತಿ ಪ್ರಯತ್ನ ಪೂರ್ವ ಯೋಜಿತವಾಗಿರುತ್ತದೆ. ಕ್ರಿಕೆಟ್​ ಪಂದ್ಯಾವಳಿಯು ಪಾರದರ್ಶಕವಾಗಿರಬೇಕು. ನಿರ್ದಿಷ್ಟ ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಕನಿಷ್ಠ ಒಂದು ಬಾರಿಯಾದರೂ ಮುಖಾಮುಖಿಯಾಗುವ ರೀತಿಯಲ್ಲಿ ಮಾಡುವುದು ತಪ್ಪು ಎಂದು ಲಾಯ್ಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ವ ಕಪ್ ವಿವಾದ

ಪ್ರಸ್ತುತ ನಡೆಯುತ್ತಿರುವ 2024 ರ ಟಿ 20 ವಿಶ್ವಕಪ್​​ನ ವೇಳಾಪಟ್ಟಿ ಮತ್ತು ಸ್ವರೂಪವು ಸಾಕಷ್ಟು ಟೀಕೆಗಳಿಗೆ ಒಳಗಾಗಿದೆ. ವಿಶೇಷವಾಗಿ ಸೂಪರ್ 8 ಗಳಲ್ಲಿ ಪಂದ್ಯಗಳ ನಡುವೆ ಒಂದೇ ದಿನದ ಅಂತರ ಕೋಪಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾದ ವಿಷಯದಲ್ಲಿ ಆ ತಂಡಕ್ಕೆ ವಿರಾಮಗಳೇ ಇಲ್ಲ. ಅವರು ಒಂದು ದಿನವನ್ನು ಪ್ರಯಾಣದಲ್ಲಿ ಕಳೆಯುತ್ತಿದ್ದರು. ಮರುದಿನ ಆಡಬೇಕಾಗಿತ್ತು.

ಇದನ್ನೂ ಓದಿ: T20 World Cup 2024 : ಭಾರತ ವಿರುದ್ಧ ಚೆಂಡು ವಿರೂಪದ ಸುಳ್ಳು ಆರೋಪ ಮಾಡಿದ ಪಾಕ್​ ಮಾಜಿ ನಾಯಕ ಇಂಜಮಾಮ್ ಉಲ್ ಹಕ್​

ವಿಶ್ವಕಪ್​ನ ಮತ್ತೊಂದು ಹಾಸ್ಯಾಸ್ಪದ ವಿಷಯವೆಂದರೆ ಎರಡೂ ಸೆಮಿಫೈನಲ್​ಗಳು ನಿಯಮಗಳು ಬದಲಾಗುತ್ತವೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯವು ಮೀಸಲು ದಿನವನ್ನು ಒಳಗೊಂಡಿಲ್ಲ, ಆದರೂ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ಪಂದ್ಯಕ್ಕೆ ಇದೆ. ಭಾರತೀಯ ಉಪಖಂಡದ ಪ್ರೈಮ್ ಟೈಮ್​ನಲ್ಲಿ (ಸಂಜೆಯ ವೇಳೆ) ಪಂದ್ಯ ನಡೆಯುವಂತೆ ಮಾಡಲಾಗಿದ್ದು ಭಾರತೀಯ ಪ್ರೇಕ್ಷಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಹೀಗಾಗಿ ಭಾರತ ತಂಡದ ಆಟಗಳು ವೆಸ್ಟ್​ ಇಂಡೀಸ್​ನಲ್ಲಿ ಹಗಲಿನಲ್ಲಿ ನಡೆದಿವೆ. ಇದು ಕೂಡ ತಪ್ಪು ಎಂದು ಲಾಯ್ಡ್ ಹೇಳಿದ್ದಾರೆ.

ಕೆಲವರ ಅನುಕೂಲಕ್ಕಾಗಿ ಪಂದ್ಯಾವಳಿಯ ನಿಯಮನ್ನು ಬದಲಾಯಿಸುವುದು ಸರಿಯಲ್ಲ. ನೀವು ಭಾರತದ ಟಿವಿ ಪ್ರೇಕ್ಷಕರಿಗಾಗಿ ಪಂದ್ಯವನ್ನು ಹಗಲು ಆಯೋಜಿಸಬಾರದು. ಭಾರತದಲ್ಲಿ ಯಾವಾಗ ಬೇಕಾದರೂ ಕ್ರಿಕೆಟ್​ ನೋಡುತ್ತಾರೆ. ಕ್ರಿಕೆಟ್​ ಅವರಿಗೆ ಧರ್ಮ. ಆದರೆ ಅವರಿಗೆ ಬೇಕಾಗಿ ಪಂದ್ಯವನ್ನು ಆಯೋಜಿಸಿಕೊಂಡರೆ ಬೇರೆಯವರಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಎಲ್ಲರೂ ಕ್ರಿಕೆಟ್​ಗಾಗಿ ಆಡಬೇಕು ಎಂದು ಲಾಯ್ಡ್​ ಹೇಳಿದ್ದಾರೆ.

Exit mobile version