Site icon Vistara News

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

IPL 2024

ಅಹಮದಾಬಾದ್​​: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಗುಜರಾತ್​ ಜೈಂಟ್ಸ್​ ಮತ್ತು ಕೋಲ್ಕೊತಾ ನೈಟ್​ ರೈಡರ್ಸ್​ ನಡುವಿನ ಪಂದ್ಯ ರದ್ದಾಗಿದೆ. ಇದು ಹಾಲಿ ಆವೃತ್ತಿಯಲ್ಲಿ ಮಳೆಯಿಂದ ರದ್ದಾಗಿರುವ ಮೊದಲ ಪಂದ್ಯವಾಗಿದೆ. ಹೀಗಾಗಿ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಯಿತು. ಈ ಫಲಿತಾಂಶದಿಂದಾಗಿ ಜಿಟಿ ತಂಡದ ಪ್ಲೇಆಫ್​ ಅವಕಾಶ ಅಂತ್ಯವಾಯಿತು. ಇದೇ ವೇಳೆ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ಅಗ್ರ 2 ರಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಪಂದ್ಯವು ಟಾಸ್​ ಸೇರಿದಂತೆ ಒಂದೇ ಒಂದು ಎಸೆತ ಕಾಣದೇ ರದ್ದಾಯಿತು. ಸ್ಟೇಡಿಯಮ್​ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಲಿಲ್ಲ. ರಾತ್ರಿ 10:56 ಕ್ಕೆ 5 ಓವರ್​ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು.

ಎಂಐ ಮತ್ತು ಪಿಬಿಕೆಎಸ್ ನಂತರ ಟೈಟಾನ್ಸ್ ಸ್ಪರ್ಧೆಯಿಂದ ಹೊರಗುಳಿದ ಮೂರನೇ ತಂಡವಾಗಿದೆ. ಏತನ್ಮಧ್ಯೆ, ನೈಟ್ಸ್ 13 ಪಂದ್ಯಗಳಲ್ಲಿ 9 ರಲ್ಲಿ ಗೆಲುವು ಸಾಧಿಸಿ 19 ಅಂಕಗಳೊಂದಿಗೆ +1.428 ನೆಟ್ ರನ್ ರೇಟ್​ನೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದೆ. 2012 ಮತ್ತು 2014ರಲ್ಲಿ ಕೆಕೆಆರ್ ಅಗ್ರ 2ರಲ್ಲಿ ಸ್ಥಾನ ಪಡೆದಿತ್ತು. ಗುವಾಹಟಿಯ ಬರ್ಸಪಾರಾ ಕ್ರೀಡಾಂಗಣದಲ್ಲಿ ಮೇ 19 ರ ಭಾನುವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ರಾಯಲ್ಸ್ ತಂಡವನ್ನು ಸೋಲಿಸಿದರೆ ಈ ಬಾರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಗೌತಮ್ ಗಂಭೀರ್ ಕೆಕೆಆರ್​​ಗೆ ಮರಳಿದ ಕಾರಣ ತಂಡಕ್ಕೆ ಭಾರೀ ಅನುಕೂಲಗಳು ಆಗಿವೆ.

ಗುಜರಾತ್​ಗೆ ನಿರಾಶಾದಾಯಕ ಅಭಿಯಾನ

ಗುಜರಾತ್​ ಟೈಟಾನ್ಸ್ ಪ್ಲೇಆಫ್​ನಲ್ಲಿ ಸ್ಥಾನ ಪಡೆಯುವ ರೇಸ್​​ನಿಂದ ಹೊರಗುಳಿದಿದೆ. ಹಾರ್ದಿಕ್ ಪಾಂಡ್ಯ ನಿರ್ಗಮನ ಮತ್ತು ಮೊಹಮ್ಮದ್ ಶಮಿ ಗಾಯಗೊಂಡ ನಂತರ ಜಿಟಿಗೆ ಉತ್ತಮ ಅನುಕೂಲಗಳು ಸಿಗಲಿಲ್ಲ. ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಮುಂದಿನ ಸುತ್ತಿಗೆ ಪ್ರವೇಶಿಸುವ ಅವಕಾಶ ಆ ತಂಡಕ್ಕೆ ಇತ್ತು. ಆದರೆ, ಮಳೆ ಅವರ ಭರವಸೆಗಳನ್ನು ಭಗ್ನಗೊಳಿಸಿತು.

ಇದನ್ನೂ ಓದಿ: IPL 2024: ಮಾಲೀಕನ ಜತೆ ಜಗಳ, ತಂಡದ ಬಸ್​ ಬಿಟ್ಟು ಸ್ವಂತ ಖರ್ಚಲ್ಲಿ ಪ್ರಯಾಣ

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೇ 16 ರಂದು ನಡೆಯಲಿರುವ ಪಂದ್ಯದಲ್ಲಿ ಶುಭ್ಮನ್ ಗಿಲ್ ಪಡೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. 2022ರಲ್ಲಿ, ಜಿಟಿ ತಮ್ಮ ಮೊದಲ ಪ್ರವೇಶದಲ್ಲಿ ಪ್ರಶಸ್ತಿ ಗೆದ್ದಿತ್ತು. 2023ರಲ್ಲಿ ಸಿಎಸ್​ಕೆ ತಂಡವನ್ನು ಮಣಿಸುವಲ್ಲಿ ವಿಫಲವಾದ ಬಳಿಕ ರನ್ನರ್ ಅಪ್ ಸ್ಥಾನ ಪಡೆದಿತ್ತು. ಆದರೆ ಈ ಋತುವಿನಲ್ಲಿ ಗಿಲ್ ಒತ್ತಡದ ನಡುವೆ ನಾಯಕತ್ವ ಹಾಗೂ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡಿದ್ದರು.

Exit mobile version