Site icon Vistara News

IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

IPL 2024

ಕೋಲ್ಕೊತಾ: ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ನ 17ನೇ ಆವೃತ್ತಿಯ (IPL 2024) 60ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 18 ರನ್​ಗಳ ವಿಜಯ ಸಾಧಿಸಿತು. ಇದು ಕೆಕೆಆರ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 9ನೇ ಗೆಲುವಾಗಿದೆ. ಇದರೊಂದಿಗೆ ಕೆಕೆಆರ್​ ಬಳಗ ಟೂರ್ನಿಯ ಪ್ಲೇಆಫ್ ಹಂತವನ್ನು ಪ್ರವೇಶಿಸಿತು. ಇದೇ ವೇಳೆ ಮುಂಬೈ ತಂಡ ಆಡಿರುವ 13ರಲ್ಲಿ ಕೇವಲ ನಾಲ್ಕು ವಿಜಯ ಸಾಧಿಸಿ 8 ಅಂಕಗಳನ್ನು ಹೊಂದಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿದಿದೆ.

ಈ ಪಂದ್ಯವು ಮಳೆಯಿಂದಾಗಿ 16 ಓವರ್​ಗಳಿಗೆ ಮೊಟಕುಗೊಂಡಿತ್ತು. ಆದಾಗ್ಯೂ ಜಿದ್ದಾಜಿದ್ದಿನ ಹೋರಾಟದಲ್ಲಿ ಮುಂಬೈ ತಂಡ ಸೋಲಿನ ಸುಳಿಗೆ ಸಿಲುಕಿತು. ಮತ್ತೊಂದು ಬಾರಿ ಅಮೋಘ ಪ್ರದರ್ಶನ ನೀಡಿದ ಕೆಕೆಆರ್ ತಂಡ ಗೆಲುವನ್ನು ತನ್ನದಾಗಿಸಿಕೊಂಡಿತು. ಮುಂಬೈ ತಂಡ ಕೊನೆ ಎರಡು ಪಂದ್ಯಗಳನ್ನು ಗೆದ್ದು ಮರ್ಯಾದೆ ಉಳಿಸಿಕೊಳ್ಳಬೇಕು ಎಂದು ಅಂದಾಜಿಸಿದ್ದರೂ ಅದಕ್ಕೆ ಕೋಲ್ಕೊತಾ ಮೂಲದ ಸಂಘಟಿತ ತಂಡ ಅವಕಾಶ ನೀಡಲಿಲ್ಲ.

ಇಲ್ಲಿನ ವಿಶ್ವ ವಿಖ್ಯಾತಿಯ ಈಡನ್ ಗಾರ್ಡನ್ಸ್​ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ತಂಡ ಮೊಟಕುಗೊಳಿಸಲಾದ 16 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 157 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ 16 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 139 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಕೆಕೆಅರ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಫಿಲ್​ ಸಾಲ್ಟ್​​ 6 ರನ್​ಗೆ ಔಟಾದರೆ, ಸುನೀಲ್ ನರೈನ್ ಬುಮ್ರಾ ಎಸೆಕ್ಕೆ ಕ್ಲೀನ್ ಬೌಲ್ಡ್ ಆದರು. ನಂತರದಲ್ಲಿ ವೆಂಕಟೇಶ್​ ಅಯ್ಯರ್ 21 ಎಸೆತಕ್ಕೆ 42 ರನ್ ಬಾರಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಆದರೆ, ನಾಯಕ ಶ್ರೇಯಸ್​ ಅಯ್ಯರ್​​ ಸುಲಭವಾಗಿ ಬೌಲ್ಡ್ ಆದರು. ನಂತರದಲ್ಲಿ ನಿತೀಶ್ ರಾಣಾ (33 ರನ್​) ಹಾಗೂ ಆ್ಯಂಡ್ರೆ ರಸೆಲ್​ (24 ರನ್​) ತಂಡವನ್ನು ಮೇಲಕ್ಕೆತ್ತಲು ಯತ್ನಿಸಿದರು. ರಿಂಕು ಸಿಂಗ್​ ಕೂಡ 12 ಎಸೆತಕ್ಕೆ 20 ರನ್ ಬಾರಿಸಿದರು. ರಮಣ್​ದೀಪ್​ ಸಿಂಗ್​ 17 ರನ್ ಬಾರಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಕೆಕೆಆರ್​ಗೆ ಸಾಧ್ಯವಾಯಿತು.

ಇದನ್ನೂ ಓದಿ: Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

ಗುರಿ ಬೆನ್ನಟ್ಟಿದ ಮುಂಬೈ ತಂಡ ಇಶಾನ್ ಕಿಶನ್​ ಅವರ 40 ರನ್ ಮೂಲಕ ಉತ್ತಮ ಆರಂಭ ಪಡೆಯಿತು. ಆದರೆ, ರೋಹಿತ್ ಶರ್ಮಾ 19 ರನ್ ಬಾರಿಸಿ ಔಟಾದರು. ಸೂರ್ಯಕುಮಾರ್ ಯಾದವ್​ ಕೂಡ 11 ರನ್​ಗಳಿಗೆ ಸೀಮಿತಗೊಂಡರು. ಬಳಿಕ ಮುಂಬೈ ಇಂಡಿಯನ್ಸ್ ಪತನ ಅರಂಭಗೊಂಡಿತು. ನಾಯಕ ಹಾರ್ದಿಕ್ ಪಾಂಡ್ಯ 2 ರನ್ ಬಾರಿಸಿದರೆ ಟಿಮ್​ ಡೇವಿಡ್​ ಶೂನ್ಯಕ್ಕೆ ಔಟಾದರು. ನೇಹಲ್ ವದೇರಾ ಕೂಡ 3 ರನ್​ನೊಂದಿಗೆ ಮರಳಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ತಿಲಕ್ ವರ್ಮಾ 32 ರನ್ ಬಾರಿಸಿದರೆ ನಮನ್ ಧಿರ್ 6 ಎಸೆತಕ್ಕೆ 17 ರನ್ ಬಾರಿಸಿ ಪಂದ್ಯವನ್ನು ಜೀವಂತವಾಗಿಡಲು ಯತ್ನಿಸಿದರು. ಅದರೆ, ಅವರ ಪ್ರಯತ್ನಗಳು ಕೂಡಲಿಲ್ಲ. ಕೊನೇ ಓವರ್​ನಲ್ಲಿ ಹರ್ಷಿತ್ ರಾಣಾ ಎರಡು ವಿಕೆಟ್ ಪಡೆಯುವ ಮೂಲಕ ಕೆಕೆಆರ್ ತಂಡಕ್ಕೆ ಗೆಲವು ತಂದುಕೊಟ್ಟರು.

Exit mobile version