Site icon Vistara News

IPL 2024 : ಮುಂಬೈ ವಿರುದ್ಧ ಕೆಕೆಆರ್​ಗೆ 24 ರನ್​ ಗೆಲುವು; ಪಾಂಡ್ಯಾ ಬಳಗಕ್ಕೆ ಮತ್ತೊಂದು ಆಘಾತ

ಮುಂಬಯಿ: ಐಪಿಎಲ್​ 202ನೇ ಆವೃತ್ತಿಯಲ್ಲಿ (IPL 2024) ತವರು ನೆಲದಲ್ಲಿ ಮತ್ತೊಂದು ಬಾರಿ ವಿಫಲ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್​ ತಂಡ ಕೆಕೆಆರ್​ ವಿರುದ್ಧ 24 ರನ್​ಗಳ ಸೋಲಿಗೆ ಒಳಗಾಯಿತು. ಇದು ಪಾಂಡ್ಯ ನೇತೃತ್ವದ ಮುಂಬೈಗೆ ಹಾಲಿ ಆವೃತ್ತಿಯ ಎದುರಾದ ಸತತ ನಾಲ್ಕನೇ ಹಾಗೂ ಒಟ್ಟು ಎಂಟನೇ ಸೋಲಾಗಿದೆ. ಇದರೊಂದಿಗೆ 11 ಪಂದ್ಯಗಳ ಮುಕ್ತಾಯದ ಬಳಿಕ ಒಟ್ಟು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಅತ್ತ ಕೆಕೆಆರ್ ತಂಡ 10 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತು.

ಇಲ್ಲಿನ ವಾಖೆಂಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ 19.5 ಓವರ್​ಗಳಲ್ಲಿ 169 ರನ್​ಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ 18.5 ಓವರ್​​ 145 ರನ್​ಗಳಿಗೆ ಆಲ್​ಔಟ್ ಆಗಿ ಸೋತಿತು. ಕೆಕೆಅರ್​ ಪರ ಬ್ಯಾಟಿಂಗ್​ನಲ್ಲಿ ವೆಂಕಟೇಶ್​ ಅಯ್ಯರ್​ (70) ಅರ್ಧ ಶತಕ ಬಾರಿಸಿ ಮಿಂಚಿದರೆ ಬೌಲಿಂಗ್​ನಲ್ಲಿ ಮಿಚೆಲ್ ಸ್ಟಾರ್ಕ್​ 4 ವಿಕೆಟ್ ತಮ್ಮದಾಗಿಸಿಕೊಂಡರು.

ಬೌಲಿಂಗ್​ಗೆ ಪೂರಕವಾಗಿದ್ದ ಟ್ರ್ಯಾಕ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ 57 ರನ್​ಗಳಿಗೆ ಅಗ್ರ 5 ವಿಕೆಟ್ ನಷ್ಟ ಮಾಡಿಕೊಂಡಿತು. ಹೀಗಾಗಿ ಹಿನ್ನಡೆಗೆ ಒಳಗಾಯಿತು. ಆದರೆ, ವೆಂಕಟೇಶ್ ಅಯ್ಯರ್ ಹಾಗೂ ಹಾಲಿ ಆವೃತ್ತಿಯಲ್ಲಿ ಮೊದಲ ಅವಕಾಶ ಪಡೆದ ಮನೀಶ್ ಪಾಂಡೆ 42 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರಿಬ್ಬರ ನೆರವಿನಿಂದ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ಕೆಕೆಆರ್​ಗೆ ಸಾಧ್ಯವಾಯಿತು. ಅಂಗ್​ಕ್ರಿಶ್​ ರಘುವಂಶಿ 13 ರನ್ ಬಾರಿಸಿ ಕೆಕೆಆರ್​ ಪರ ಎರಡಂಕಿ ಮೊತ್ತ ದಾಟಿದ ಎರಡನೇ ಆಟಗಾರ ಎನಿಸಿಕೊಂಡರು. ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ: Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

ಮುಂಬಯಿ ಬ್ಯಾಟಿಂಗ್ ವೈಫಲ್ಯ

ರನ್ ಚೇಸ್ ಆರಂಭಿಸಿದ ಮುಂಬೈ ತಂಡದ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. 70 ರನ್​ಗೆ 5 ವಿಕೆಟ್ ನಷ್ಟ ಮಾಡಿಕೊಂಡು ಸಂಕಷ್ಟಕ್ಕೆ ಬಿತ್ತು. ಇಶಾನ್ ಕಿಶನ್​ (13), ರೋಹಿತ್ ಶರ್ಮಾ (11), ನಮನ್ ಧಿರ್​ (11), ತಿಲಕ್​ ವರ್ಮಾ (4), ನೇಹಲ್​ ವದೇರಾ (6) ಹಾಗೂ ಹಾರ್ದಿಕ್ ಪಾಂಡ್ಯ (1) ಬಂದ ವೇಗದಲ್ಲೇ ಪೆವಿಲಿಯನ್​ಗೆ ವಾಪಸಾದರು. ಆದರೆ, ಮಧ್ಯಮ ಕ್ರಮಾಂಕದದಲ್ಲಿ ತಳವೂರಿ ನಿಂತ ಸೂರ್ಯಕುಮಾರ್ ಯಾದವ್​ 35 ಎಸೆತಕ್ಕೆ 56 ರನ್ ಬಾರಿಸಿ ಗೆಲುವಿನ ಭರವಸೆ ಮೂಡಿಸಿದರು. ಕೊನೆಯಲ್ಲಿ ಟಿಮ್​ ಡೇವಿಡ್​ 24 ರನ್ ಬಾರಿಸಿ ವಿಶ್ವಾಸ ತಂದರು. ಆದರೆ, ಇನಿಂಗ್ಸ್​ನಲ್ಲಿ ಕೆಕೆಆರ್​ ಬೌಲರ್​ಗಳು ಮೇಲುಗೈ ಸಾಧಿಸಿದರು. ವರುಣ್ ಚಕ್ರವರ್ತಿ, ಸುನಿಲ್ ನರೈನ್​ ಹಾಗೂ ಆ್ಯಂಡ್ರೆ ರಸೆಲ್​ ತಲಾ 2 ವಿಕೆಟ್ ಪಡೆದರು.

Exit mobile version