Site icon Vistara News

IPL 2024 : ಗುಜರಾತ್​ ಟೀಮ್​ನಲ್ಲಿ ಬುಮ್ರಾ 2.0; ಕನ್ನಡಿಗನ ಬೌಲಿಂಗ್​ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​

IPL 2024

ಬೆಂಗಳೂರು: ಐಪಿಎಲ್​ 2024ನೇ (IPL 2024) ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನೆಟ್​​ಬೌಲರ್​ ಆಗಿರುವ ಕರ್ನಾಟಕ ಮುಲಕ ಮಹೇಶ್ ಕುಮಾರ್ ಅವರ ಬೌಲಿಂಗ್ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಮಹೇಶ್ ಕುಮಾರ್ ಅವರು ಜಸ್ಪ್ರೀತ್ ಬುಮ್ರಾ ಅವರ ಅಸಾಂಪ್ರದಾಯಿಕ ಬೌಲಿಂಗ್ ಕ್ರಮವನ್ನು ಅನುಸರಿಸುತ್ತಿರುವುದು ಕಾಣಬಹುದು. ಹೀಗಾಗಿ ಬುಮ್ರಾ 2.0 ಎಂದು ಕರೆಯಲಾಗಿದೆ.

ಮಹೇಶ್ ಕುಮಾರ್ ಬೆಂಗಳೂರು ಮೂಲದ ಕ್ರಿಕೆಟಿಗ. ಅವರು ಬಲಗೈ ವೇಗದ ಬೌಲರ್. ಬೆಂಗಳೂರಿನಿಂದ 45 ಕಿಲೋಮೀಟರ್ ದೂರದಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಜನಿಸಿದ ಮಹೇಶ್ 2 ಐಪಿಎಲ್ ತಂಡಗಳಿಗೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಅವರು ಭಾರತೀಯ ಕ್ರಿಕೆಟ್ ಸರ್ಕೀಟ್​ನಲ್ಲಿ ಹೆಚ್ಚು ಪರಿಚಿತ ಆಟಗಾರ ಅಲ್ಲದಿದ್ದರೂ ಎಕ್ಸ್​ನಲ್ಲಿ ವೈರಲ್ ಆಗಿರುವ ವೀಡಿಯೊ ಅವರ ಬಗ್ಗೆ ಮಾತನಾಡುವಂತೆ ಮಾಡಿದೆ.

2017ರಲ್ಲಿ ಇಂಗ್ಲೆಂಡ್​​ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಾಗ ಮಹೇಶ್ ಕುಮಾರ್ ಮೊದಲ ಬಾರಿಗೆ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಿದ್ದರು. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ವಿರುದ್ಧ ಮಹೇಶ್ ಬೌಲಿಂಗ್ ಮಾಡಿದ್ದರು. ಈ ವೇಳೆ ಭಾರತದ ನೆಟ್ ಸೆಷನ್​ನಲ್ಲಿ ಅವರು ತಮ್ಮ ಆರಾಧ್ಯ ದೈವ ಜಸ್ಪ್ರೀತ್ ಬುಮ್ರಾ ಅವರನ್ನು ಭೇಟಿ ಮಾಡುವ ಅವಕಾಶ ಕೂಡ ಪಡೆದಿದ್ದರು.

ಇದನ್ನೂ ಓದಿ: IPL 2024 : ಬುದ್ಧಿ ಹೇಳಿದರೂ ಕೇಳದ ಕೆಕೆಆರ್​ ಬೌಲರ್​ ರಾಣಾಗೆ ಮತ್ತೆ ದಂಡ ; ಒಂದು ಪಂದ್ಯದಿಂದ ಸಸ್ಪೆಂಡ್​​

ಮಹೇಶ್ ಕುಮಾರ್ ನೆಟ್ ಬೌಲರ್ ಆಗಿ ಸಾಕಷ್ಟು ಅನುಭವ ಗಳಿಸಿದ್ದಾರೆ. 2018 ರ ಋತುವಿನಲ್ಲಿ ಐಪಿಎಲ್ ನೆಟ್​ ಬೌಲರ್​​ ಆಗಿ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಅವರ ತವರು ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಕೆಲಸ ಮಾಡಿದ್ದರು.

ಅಂದು ಆಶಿಶ್ ನೆಹ್ರಾ ಅವರು ಮಹೇಶ್ ಕುಮಾರ್ ಅವರಿಗೆ ಒಂದು ಜೋಡಿ ಶೂಗಳನ್ನು ಉಡುಗೊರೆಯಾಗಿ ನೀಡಿದ್ದರು. ಕೊಹ್ಲಿ ಆಟೋಗ್ರಾಫ್ ನೀಡಿದ್ದರು. ಡಿವಿಲಿಯರ್ಸ್ ಕೂಡ ಅಭಿನಂದಿಸಿದರು. 2018 ರಲ್ಲಿ ಫ್ರಾಂಚೈಸಿಯ ಮುಂದಿನ ಎಲ್ಲಾ ತವರು ಪಂದ್ಯಗಳಲ್ಲಿ ಅವರನ್ನು ಆರ್​​ಸಿಬಿ ಅವರನ್ನು ಕರೆಸಿಕೊಂಡಿತ್ತು.

ಎಂಜಿನಿಯರಿಂಗ್ ಪದವಿಧರ

ಟೀಮ್ ಇಂಡಿಯಾ ಮತ್ತು ಆರ್​ಸಿಬಿಯ ನೆಟ್ಸ್​ನಲ್ಲಿ ಕಾಣಿಸಿಕೊಳ್ಳುವ ಮೊದಲೇ, ಮಹೇಶ್ ಕುಮಾರ್ ಕ್ರಿಕೆಟ್ ಮೇಲಿನ ಪ್ರೀತಿ ಅರಿತುಕೊಳ್ಳುವ ಮೊದಲು ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು. 27ರ ಹರೆಯದ ಮಹೇಶ್​​ ದೇಶೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಇನ್ನೂ ಪಾದಾರ್ಪಣೆ ಮಾಡಿಲ್ಲ.

2022 ರ ಋತುವಿನಲ್ಲಿ, ಮಹೇಶ್ ಗುಜರಾತ್ ಟೈಟಾನ್ಸ್ ಪರ ನೆಟ್ ಬೌಲರ್ ಆಗಿ ಹೋಗಿದ್ದರು. ಅವರು ವೃತ್ತಿಪರ ಕ್ರಿಕೆಟಿಗರಾಗಿ ಹೊರಹೊಮ್ಮುವುದನ್ನು ನೋಡುವುದು ಅವರ ತಾಯಿಯ ಕನಸು.

Exit mobile version