Site icon Vistara News

IPL 2024 : ರಾಯಲ್ಸ್​ಗೆ 2ನೇ ವಿಜಯ , ಡೆಲ್ಲಿಗೆ ಸತತ ಎರಡನೇ ಸೋಲು

IPL 2024- Riyan Parag

ಜೈಪುರ: ರಿಯಾನ್ ಪರಾಗ್​ (84 ರನ್​, 45 ಎಸೆತ, 7 ಫೋರ್, 6 ಸಿಕ್ಸರ್​) ಅವರ ಸ್ಫೋಟಕ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ಬೌಲಿಂಗ್ ದಾಳಿಯ ಮೂಲಕ ಮಿಂಚಿದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capital) ವಿರುದ್ಧ 12 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಪ್ರಸಕ್ತ ಐಪಿಎಲ್​ನಲ್ಲಿ (IPL 2024) ಸತತವಾಗಿ ಎರಡನೇ ಜಯ ತನ್ನದಾಗಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 20 ರನ್​ಗಳ ಗೆಲುವು ಸಾಧಿಸಿತ್ತು ಸಂಜು ಸ್ಯಾಮ್ಸನ್​ ಪಡೆ. ಇದೇ ವೇಳೆ ರಿಷಭ್ ಪಂತ್ ನೇತೃತ್ವದ ಡೆಲ್ಲಿ ತಂಡ ಮತ್ತೊಂದು ಸೋಲಿಗೆ ಒಳಗಾಗಿದೆ. ತನ್ನ ಮೊದಲ ಪಂದ್ಯದಲ್ಲಿ ಅದು ಪಂಜಾಬ್ ಕಿಂಗ್ಸ್​ಗೆ ಮಣಿದಿತ್ತು.

ಇಲ್ಲಿನ ಸವಾಯ್​ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 185 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 175 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಹಂತದಲ್ಲಿ ಡೆಲ್ಲಿ ತಂಡದ ಟ್ರಿಸ್ಟಾನ್​ ಸ್ಟಬ್ಸ್ 23 ಎಸೆತಕ್ಕೆ 44 ರನ್ ಬಾರಿಸಿದರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

ದೊಡ್ಡ ಗುರಿ ಬೆನ್ನಟ್ಟಲು ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಡೇವಿಡ್​ ವಾರ್ನರ್ ಅಬ್ಬರದ ಬ್ಯಾಟಿಂಗ್ ಮೂಲಕ 34 ಎಸೆತಗಳಲ್ಲಿ 49 ರನ್ ಬಾರಿಸಿದರು. ಮಿಚೆ್ಲ್ ಮಾರ್ಷ್​ ಕೂಡ 12 ಎಸೆತಗಳಲ್ಲಿ 23 ರನ್​ ಬಾರಿಸಿ ಮಿಂಚಿದರು. ಈ ಜೋಡಿ ಮೊದಲ ವಿಕೆಟ್​ಗೆ 30 ರನ್ ಬಾರಿಸಿತು. ಆದರೆ, ಆ ಬಳಿಕ ಆಡಲು ಬಂದ ರಿಕಿ ಭುಯಿ ಶೂನ್ಯಕ್ಕೆ ಔಟಾದರು.

ಬಳಿಕ ನಾಯಕ ರಿಷಭ್ ಪಂತ್​ 28 ರನ್​ಗಳ ಕೊಡುಗೆ ಕೊಟ್ಟರು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್​ 44 ಹಾಗೂ ಅಕ್ಷರ್ ಪಟೇಲ್​ 15 ರನ್ ಬಾರಿಸಿದರು.

ರಾಜಸ್ಥಾನ್​ ಕೆಟ್ಟ ಆರಂಭ

ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್​ ತಂಡದ ಆರಂಭ ಚೆನ್ನಾಗಿರಲಿಲ್ಲ. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್​ 5 ರನ್​ಗೆ ಔಟಾದರೆ ಮತ್ತೊಬ್ಬ ಆರಂಭಿಕ ಆಟಗಾರ ಜೋಸ್ ಬಟ್ಲರ್​ 11 ರನ್​ಗೆ ವಿಕೆಟ್​ ಒಪ್ಪಿಸಿದರು. ನಾಯಕ ಸಂಜ ಸ್ಯಾಮ್ಸನ್ ಕೊಡುಗೆಯೂ 15 ರನ್. 36 ರನ್​ಗೆ 3 ವಿಕೆಟ್​ ಕಳೆದುಕೊಂಡ ರಾಜಸ್ಥಾನ್​ ಪೇಚಿಗೆ ಸಿಲುಕಿತು.

ರಿಯಾನ್​ ಅಬ್ಬರದ ಆಟ

ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ರಿಯಾನ್ ಪರಾಗ್​ ಅಮೋಘ ಇನಿಂಗ್ಸ್ ಆಡಿದರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ ಅವರು ಕೊನೇ ಹಂತದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಂಡದ ವಿಕೆಟ್​ಗಳು ಸತತವಾಗಿ ಬೀಳುತ್ತಿದ್ದ ಕಾರಣ ಅತಿ ವೇಗದಲ್ಲಿ ರನ್ ಗಳಿಸಲು ಆರಂಭದಲ್ಲಿ ತಿಣುಕಾಡಿದ ಅವರು ಕೊಣೇ ಹಂತದಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಅವರು 45 ಎಸೆತದಲ್ಲಿ 7 ಫೋರ್​ ಹಾಗೂ 6 ಸಿಕ್ಸರ್​ ಸಮೇತ 84 ರನ್ ಬಾರಿಸಿದರು.

ಇದನ್ನೂ ಓದಿ : IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

ರವಿಚಂದ್ರನ್ ಅಶ್ವಿನ್​ ಸ್ಫೋಟಕ 29 ರನ್ ಬಾರಿಸಿದರೆ ದ್ರುವ್ ಜುರೆಲ್ 20 ರನ್ ಕೊಡುಗೆ ಕೊಟ್ಟರು. ಶಿಮ್ರೋನ್ ಹೆಟ್ಮಾಯರ್ ಅಂತಿಮವಾಗಿ ಅಜೇಯ 14 ರನ್ ಬಾರಿಸಿದರು.

Exit mobile version