Site icon Vistara News

IPL 2024 : ಆರ್​ಸಿಬಿಗೆ ಐದನೇ ವಿಜಯ, ಪಂಜಾಬ್​ ವಿರುದ್ಧ 60 ರನ್ ಭರ್ಜರಿ ಗೆಲುವು

IPL 2024

ಧರ್ಮಶಾಲಾ: ವಿರಾಟ್​ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ಬಲದಿಂದ ಮಿಂಚಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​ 17ನೇ (IPL 2024 ) ಆವೃತ್ತಿಯ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದು ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ತಂಡಕ್ಕೆ ಐದನೇ ಗೆಲುವಾಗಿದೆ. ಇದರೊಂದಿಗೆ ಒಟ್ಟಾರೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಉಳಿದಿಗೆ. ಗೆಲುವಿನ ಹೊರತಾಗಿಯೂ ಆರ್​ಸಿಬಿ ತಂಡದ ಸ್ಥಾನ ಪಲ್ಲಟವೇನೂ ಆಗಿಲ್ಲ. ಇದೇ ವೇಳೆ 8ನೇ ಸೋಲಿಗೆ ಗುರಿಯಾದ ಪಂಜಾಬ್ ಕಿಂಗ್ಸ್​ ತಂಡ 9ನೇ ಸ್ಥಾನಕ್ಕೆ ಜಾರಿದೆ.

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಆರ್​ಸಿಬಿಯನ್ನು ಬ್ಯಾಟ್ ಮಾಡಲು ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ರೆಡ್ ಆರ್ಮಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್ ಬಳಗ 17 ಓವರ್​ಗಳಲ್ಲಿ 181 ರನ್​ಗಳಿಗೆ ಆಲ್​ಔಟ್ ಆಯಿತು.

ಕೊಹ್ಲಿಯ ದಾಖಲೆಯ ಪ್ರದರ್ಶನ

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ಫಾಫ್​ ಡು ಪ್ಲೆಸಿಸ್​ ಮತ್ತೊಂದು ಬಾರಿ ಕಳಪೆ ಪ್ರದರ್ಶನ ನೀಡಿದರು. 9 ರನ್​ಗೆ ಅವರು ಔಟಾದರು. ಹೀಗಾಗಿ 19 ರನ್​ಗೆ ಒಂದು ವಿಕೆಟ್​ ಕಳೆದುಕೊಂಡ ಆರ್​ಸಿಬಿಗೆ ಸಂಕಷ್ಟ ಶುರುವಾಯಿತು. ಬಳಿಕ ಬಂದ ವಿಲ್​ ಜ್ಯಾಕ್ಸ್​ ಕೂಡ 12 ರನ್​ಗೆ ಸೀಮಿತಗೊಂಡರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಇವರಿಗೆ ಜತೆಯಾದ ರಜತ್​ ಪಾಟೀದರ್ ಮತ್ತೊಂದು ವಿಸ್ಫೋಟಕ ಆಟ ಆಡಿದರು. ಅವರು 23 ಎಸೆತಕ್ಕೆ 55 ರನ್ ಬಾರಿಸಿದ್ದ ಕಾರಣ ಆರ್​ಸಿಬಿಯ ರನ್​ ಗಳಿಕೆ ಏರುಗತಿಯಲ್ಲಿ ಸಾಗಿತು.

ಇದನ್ನೂ ಓದಿ: T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

ವಿರಾಟ್​ ಕೊಹ್ಲಿ ಜತೆ ಮತ್ತೊಂದು ಉತ್ತಮ ಜತೆಯಾಟ ನೀಡಿದ ವಿಲ್ ಜ್ಯಾಕ್ಸ್​ 46 ರನ್​ ಬಾರಿಸಿದರು. ಕೊಹ್ಲಿ 6 ಫೋರ್ ಹಾಗೂ 4 ಸಿಕ್ಸರ್ ಸಮೇತ ಭರ್ಜರಿ ಆಟವಾಡಿ ಶತಕದ ಹಾದಿಯಲ್ಲಿದ್ದರು. ಆದರೆ, ಕೊನೇ ಹಂತದಲ್ಲಿ ರನ್ ಬಾಚುವ ಒತ್ತಡಕ್ಕೆ ಬಿದ್ದ ಅವರು 8 ರನ್​ಗಳಿಂದ ಶತಕ ವಂಚಿತರಾದರು.

ಪಂಜಾಬ್ ಬ್ಯಾಟಿಂಗ್ ವೈಫಲ್ಯ

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ಹೀನಾಯ ಪ್ರದರ್ಶನ ನೀಡಿತು. ಪ್ರಭ್​ ಸಿಮ್ರಾನ್ ಸಿಂಗ್ 6 ರನ್​ಗೆ ಜಾಗ ಖಾಲಿ ಮಾಡಿದರು. ಬೈರ್​ಸ್ಟೋವ್ 27 ರನ್​ ಬಾರಿಸಿ ಔಟಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ರೀಲಿ ರೊಸ್ಸೊ 27 ಎಸೆತಕ್ಕೆ 61 ರನ್ ಬಾರಿಸಿ ಗೆಲುವಿನ ಹುಮ್ಮಸ್ಸು ತಂದರು. ಆದರೆ, ತಲೆಗೆ ಚೆಂಡು ಬಡಿಸಿಕೊಂಡ ಮರು ಎಸೆತದಲ್ಲಿಯೇ ಸ್ಪಿನ್ನರ್​ ಕರಣ್ ಶರ್ಮಾ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಲ್ಲಿಂ ದ ಪಂಜಾಬ್ ಇನಿಂಗ್ಸ್ ಕುಸಿಯಿತು. ನಡುವೆ ಶಶಾಂಕ್​ ಶರ್ಮಾ 37 ರನ್ ಬಾರಿಸಿದರು. ಆದರೆ, ಕೊಹ್ಲಿ ಮಾಡಿದ ಅದ್ಭುತ ರನ್​ಔಟ್​ಗೆ ಅವರು ಬಲಿಯಾದರು. ಸ್ಯಾಮ್​ ಕರ್ರನ್​ 22 ರನ್​ ಕೊಡುಗೆ ಕೊಟ್ಟರು.

ಆರ್​ಸಿಬಿ ಪರ ಮೊಹಮ್ಮಸ್ ಸಿರಾಜ್​ 3 ವಿಕೆಟ್​, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್​ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.

Exit mobile version