ಬೆಂಗಳೂರು: ವಿರಾಟ್ ಕೊಹ್ಲಿಯ (Virat Kohli) ಅಮೋಘ ಅರ್ಧ ಶತಕ (77 ರನ್) ಹಾಗೂ ದಿನೇಶ್ ಕಾರ್ತಿಕ್ (Dinesh Karthik) ಬಾರಿಸಿದ ಸ್ಫೋಟಕ 28 ರನ್ಗಳ ನೆರವಿನಿಂದ ಮಿಂಚಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್ 17ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kinsg) ವಿರುದ್ಧ 4 ವಿಕೆಟ್ಗಳ ವಿಜಯ ಸಾಧಿಸಿದೆ. ಇದರೊಂದಿಗೆ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧದ ಸೋಲಿನ ಕಹಿ ಮರೆಯಿತು. ಹಾಲಿ ಆವೃತ್ತಿಯಲ್ಲಿ ಆರ್ಸಿಬಿಗೆ ಇದು ಮೊದಲ ಗೆಲುವು. ಕೊಹ್ಲಿ ಈ ಪಂದ್ಯದ ಗೆಲುವಿನ ರೂವಾರಿ ಎನಿಸಕೊಂಡರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್ಸಿಬಿ 19.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿ ಗೆಲುವು ಸಾಧಿಸಿತು. ಕೊನೇ ಹಂತದಲ್ಲಿ ಆರ್ಸಿಬಿ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಆತಂಕ್ಕೆ ಸಿಲುಕಿತು. ದಿನೇಶ್ ಕಾರ್ತಿಕ್ 3 ಫೋರ್ ಹಾಗೂ 2 ಸಿಕ್ಸರ್ ಸಮೇತ 10 ಎಸೆತದಲ್ಲಿ 28 ರನ್ ಹಾಗೂ ಮಹಿಪಾಲ್ ಲಾಮ್ರೋರ್ 8 ಎಸೆತದಲ್ಲಿ 2 ಫೋರ್ ಹಾಗೂ 1 ಸಿಕ್ಸರ್ ಸಮೇತ 17 ರನ್ ಬಾರಿಸಿ ಗೆಲುವು ತಂದುಕೊಟ್ಟರು.
*Virat Kohli can't hit spin*
— Johns. (@CricCrazyJohns) March 25, 2024
But Virat Kohli in the ground 👇pic.twitter.com/87m5AEsHb5
ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಫಾಫ್ ಡು ಪ್ಲೆಸಿಸ್ ಕೇವಲ 3 ರನ್ಗೆ ಔಟಾಗುವುದರೊಂದಿಗೆ 26 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಬಂದ 10 ಕೋಟಿ ಮೌಲ್ಯದ ಆಟಗಾರ ಕ್ಯಾಮೆರೂನ್ ಗ್ರೀನ್ ಮತ್ತೊಂದು ಬಾರಿ ವೈಫಲ್ಯ ಕಂಡರಲ್ಲದೆ ಕೇವಲ 3 ರನ್ಗೆ ಔಟಾದರು. 43 ರನ್ಗಳಿಎಗ 2 ವಿಕೆಟ್ ಕಳೆದುಕೊಂಡ ಬಳಿಕ ಆರ್ಸಿಬಿಯ ರನ್ ಗಳಿಕೆ ವೇಗ ಕುಸಿಯಿತು. ನಂತರ ಬಂದ ರಜತ್ ಪಾಟೀದಾರ್ ಕೂಡ ಉತ್ತಮವಾಗಿ ಆಡಲಿಲ್ಲ. 18 ಎಸೆಗಳನ್ನು ಬಳಸಿಕೊಂಡು 18 ರನ್ ಬಾರಿಸಿ ಹೀನಾಯವಾಗಿ ಔಟ್ ಆದರು. ಗ್ಲೆನ್ ಮ್ಯಾಕ್ಸ್ವೆಲ್ ಮತ್ತೊಂದು ಬಾರಿ ವೈಫಲ್ಯ ಕಂಡು 3 ರನ್ಗೆ ಪೆವಿಲಿಯನ್ ಕಡೆಗೆ ನಡೆದರು.
ಇದನ್ನೂ ಓದಿ :IPL 2024 : ತವರು ಪ್ರೇಕ್ಷಕರ ಮುಂದೆ ಕಿಂಗ್ಸ್ ಮೇಲೆ ಸವಾರಿ ಮಾಡಿದ ಆರ್ಸಿಬಿ
ವಿರಾಟ್ ಹೋರಾಟ
ಆರಂಭಿಕರಾಗಿ ಆಡಲು ಇಳಿದ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು. ಹಿಂದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಆಡಿದ ಅವರು ಈ ಪಂದ್ಯದಲ್ಲಿ ಅಬ್ಬರಿಸಿದರು. ಆದರೆ, ವಿಕೆಟ್ ಪತನವಾದ ಕಾರಣ ಅವರ ಸ್ಟ್ರೈಕ್ ರೇಟ್ ನಿಧಾನವಾಗಿ ಕುಸಿಯಿತು. ಆದಾಗ್ಯೂ ಅವರು 49 ಎಸೆತಕ್ಕೆ 77 ರನ್ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು. ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ಅನುಜ್ ರಾವತ್ 11 ರನ್ಗೆ ಸೀಮಿತಗೊಂಡರು. ಅಲ್ಲದೆ ಅವರು 14 ಎಸೆತಗಳನ್ನು ತೆಗೆದುಕೊಂಡರು. ಹೀಗಾಗಿ ಕೊನೇ ಹಂತದಲ್ಲಿ ಆರ್ಸಿಬಿಗೆ ರನ್ರೇಟ್ ಕಾಪಾಡಿಕೊಳ್ಳಲು ಸಾಧ್ಯವಾಗದೇ ಒತ್ತಡಕ್ಕೆ ಬಿತ್ತು. ಆದರೆ, ದಿನೇಶ್ ಕಾರ್ತಿಕ್ ಹಾಗೂ ಮಹಿಪಾಲ್ ಲಾಮ್ರೋರ್ ಆರ್ಸಿಬಿ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದರು. ಕಗಿಸೊ ರಬಾಡ ಹಾಗೂ ಹರ್ಪ್ರೀತ್ ಬ್ರಾರ್ ತಲಾ 2 ವಿಕೆಟ್ ಪಡೆದರು.
ಧವನ್ ಉತ್ತಮ ಆಟ
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್ 45 ರನ್ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ ಜಾನಿ ಬೈರ್ಸ್ಟೋವ್ 8 ರನ್ಗೆ ಸೀಮಿತಗೊಂಡರು. ಬಳಿಕ ಪ್ರಭ್ಸಿಮ್ರಾನ್ ಸಿಂಗ್ 25 ರನ್, ಲಿಯಾಮ್ ಲಿವಿಂಗ್ಸ್ಟನ್ 17 ರನ್, ಸ್ಯಾಮ್ ಕರ್ರನ್ 23 ರನ್, ಜಿತೇಶ್ ಶರ್ಮಾ 27 ರನ್, ಶಶಾಂಕ್ ಸಿಂಗ್ 21 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಮೊಹಮ್ಮದ್ ಸಿರಾಜ್, ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ತಲಾ 2 ವಿಕೆಟ್ ಪಡೆದರು.