ಬೆಂಗಳೂರು : ಐಪಿಎಲ್ 2024ನೇ (IPL 2024) ಅವೃತ್ತಿಯ ಮೊದಲ ಹಂತದ 24 ಪಂದ್ಯಗಳ ವೇಳಾಪಟ್ಟಿ ಗುರುವಾರ (ಫೆಬ್ರವರಿ 22ರಂದು) ಪ್ರಕಟಗೊಂಡಿದೆ. ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗೆ 21 ಪಂದ್ಯಗಳ ಆರಂಭಿಕ ಸೆಟ್ ಅನ್ನು ಒಳಗೊಂಡ ಭಾಗಶಃ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಗುರುವಾರ ಬಿಡುಗಡೆ ಮಾಡಿದೆ. ಲೋಕ ಸಭಾ ಚುನಾಣೆಯ ಹಿನ್ನೆಲೆಯಲ್ಲಿ ಮೊದಲ ಸೆಟ್ನ ವೇಳಾಪಟ್ಟಿ ಮಾತ್ರ ಬಿಡುಗಡೆಗೊಂಡಿದೆ. ಬಳಿಕ ಎರಡನೇ ಹಂತದಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ಅಂತೆಯೇ ಐಪಿಎಲ್ ಫೈನಲ್ ಪಂದ್ಯವು ಮೇ 26ರಂದು ನಡೆಯುವ ನಿರೀಕ್ಷೆಯಿದೆ. ನಂತರದ ಕೇವಲ ಐದು ದಿನಗಳ ಬಳಿಕ ಪುರುಷರ ಟಿ 20 ವಿಶ್ವಕಪ್ ಆರಂಭವಾಗಲಿದೆ. ಪಂದ್ಯ ಜೂನ್ 1ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿದೆ.
2024 IPL Schedule for the first 21 games.#IPLONSTAR pic.twitter.com/x1zBUT1rGF
— Heisenberg ☢ (@internetumpire) February 22, 2024
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗಳ ದಿನಾಂಕಗಳನ್ನು ಭಾರತದ ಚುನಾವಣಾ ಆಯೋಗವು ಬಹಿರಂಗಪಡಿಸಿದ ನಂತರ ಪಂದ್ಯಾವಳಿಯ ವೇಳಾಪಟ್ಟಿಯ ದ್ವಿತೀಯಾರ್ಧವನ್ನು ನಿರೀಕ್ಷಿಸಲಾಗಿದೆ.
ನಾಲ್ಕು ಡಬಲ್ ಹೆಡರ್ಗಳು
ಆರಂಭಿಕ ವಾರಾಂತ್ಯದಲ್ಲಿ ಎರಡು ಸೇರಿದಂತೆ ಆರಂಭಿಕ ವೇಳಾಪಟ್ಟಿಯಲ್ಲಿ ನಾಲ್ಕು ಡಬಲ್ ಹೆಡರ್ಗಳಿವೆ. ಮಾರ್ಚ್ 23 ರಂದು ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹಗಲು ಪಂದ್ಯವನ್ನು ಆಯೋಜನೆಗೊಂಡಿದೆ. ನಂತರ ಕೋಲ್ಕತಾ ನೈಟ್ ರೈಡರ್ಸ್ ಈಡನ್ ಗಾರ್ಡನ್ಸ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಮಾರ್ಚ್ 24 ರಂದು ರಾಜಸ್ಥಾನ್ ರಾಯಲ್ಸ್ ತನ್ನ ಮೊದಲ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದ್ದು, ಅದೇ ದಿನ ಸಂಜೆ ಗುಜರಾತ್ ಟೈಟಾನ್ಸ್ ತನ್ನ ಮೊದಲ ಪಂದ್ಯವನ್ನು ಮುಂಬೈನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕೆ ಇಳಿಯಲಿದೆ.
ಇದನ್ನೂ ಓದಿ :
ಆರಂಭಿಕ ವೇಳಾಪಟ್ಟಿ ಬದಲು
ಸಾಮಾನ್ಯವಾಗಿ ಪ್ರತಿ ಬಾರಿಯೂ ಆರಂಭಿಕ ಪಂದ್ಯವು ಅದಕ್ಕಿಂತ ಹಿಂದಿನ ಋತುವಿನ ಫೈನಲ್ ಪಂದ್ಯ ಆಡಿದ ತಂಡಗಳ ನಡುವೆ ನಡೆಯುತ್ತದೆ. ಹೀಗಾಗಿ ಎಂಎಸ್ ಧೋನಿ ಅವರ ಸಿಎಸ್ಕೆ ಟೈಟಾನ್ಸ್ ವಿರುದ್ಧ ಆಡಬೇಕಾಗಿತ್ತು. ಆದರೆ ಈ ಬಾರಿ ಬದಲಾಗಿದೆ. ಸಿಎಸ್ಕೆ ವಿರುದ್ದ ಆರ್ಸಿಬಿ ಉದ್ಘಾಟನಾ ಪಂದ್ಯದಲ್ಲಿ ಆಡಲಿದೆ.
ಮಾರ್ಚ್ 22 ರಿಂದ ಏಪ್ರಿಲ್ 7 ರ ಅವಧಿಯಲ್ಲಿ ತಮ್ಮ ತವರು ಮೈದಾನವಾದ ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ಯಾವುದೇ ಪಂದ್ಯಗಳನ್ನು ಆಡದ ಏಕೈಕ ಫ್ರಾಂಚೈಸಿ ಕ್ಯಾಪಿಟಲ್ಸ್. ಆ ಎರಡೂ ಪಂದ್ಯಗಳು ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಮಾರ್ಚ್ 17 ರವರೆಗೆ ಫೈನಲ್ ಸೇರಿದಂತೆ 11 ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ನಡೆಯಲಿದೆ. ಹೀಗಾಗಿ ಡೆಲ್ಲಿಗೆ ತವರು ಮೈದಾನ ದೊರೆಯುತ್ತಿಲ್ಲ.
ಮೊದಲ ಹಂತದಲ್ಲಿ ಆರ್ಸಿಬಿಗೆ ಐದು ಪಂದ್ಯ
ಕ್ಯಾಪಿಟಲ್ಸ್, ಟೈಟಾನ್ಸ್ ಮತ್ತು ಆರ್ಸಿ ಬಿ ತಂಡಗಳು 14 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಆಡಲಿವೆ. ಕೆಕೆಆರ್ ಕೇವಲ ಮೂರು ಪಂದ್ಯಗಳನ್ನು ಆಡಲಿದೆ. ಉಳಿದ ಎಲ್ಲಾ ಫ್ರಾಂಚೈಸಿಗಳಿಗೆ ನಾಲ್ಕು ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಪಂಜಾಬ್ ಕಿಂಗ್ಸ್ ತನ್ನ ತವರು ಪಂದ್ಯಗಳನ್ನು ಚಂಡೀಗಢದ ಹೊರವಲಯದಲ್ಲಿರುವ ಮುಲ್ಲಾನ್ಪುರದ ಹೊಚ್ಚ ಹೊಸ ಸ್ಥಳದಲ್ಲಿ ಆಡುವ ಸಾಧ್ಯತೆಯಿದೆ.
ನಾಲ್ಕು ಪ್ಲೇಆಫ್ ಪಂದ್ಯಗಳು ಸೇರಿದಂತೆ ಒಟ್ಟು 74 ಪಂದ್ಯಗಳು ನಡೆಯಲಿವೆ.